ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಕ್ಕೊಂದು ಎಚ್ಚರಿಕೆ ಗಂಟೆ: ಪಾಪು

ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ನಿರ್ಧಾರ
Last Updated 2 ಆಗಸ್ಟ್ 2013, 7:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆ ನಿರ್ಧಾರ ನಮ್ಮ ರಾಜ್ಯಕ್ಕೊಂದು ಎಚ್ಚರಿಕೆಯ ಗಂಟೆಯಾಗಿದ್ದು, ಅಲ್ಲಲ್ಲಿ ಕೇಳಿ ಬರುತ್ತಿರುವ ಪ್ರತ್ಯೇಕತೆಯ ಕೂಗು ಮತ್ತೊಮ್ಮೆ ಕೇಳಿಬರುವ ಮುನ್ನವೇ ಸರ್ಕಾರ ಜಾಗೃತವಾಗಿ ಪ್ರಾದೇಶಿಕ ಅಸಮಾನತೆ ತೊಡೆದುಹಾಕಲು ಮುಂದಾಗಬೇಕು' ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ ಆಗ್ರಹಿಸಿದರು.

`ನಮ್ಮ ರಾಜ್ಯ ಏಕೀಕರಣವಾಗಿ 60 ವರ್ಷ ಕಳೆದರೂ ಈವರೆಗೂ ಅಸಮಾನ ತೆಯ ಕೂಗು ಹೋಗಿಲ್ಲ. ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕಕ್ಕೆ ಸರ್ಕಾರದ ನಿರ್ಲಕ್ಷ್ಯ ಧೋರಣೆ ಹಾಗೆಯೇ ಮುಂದುವರಿದಿದೆ' ಎಂದು ಪಾಪು ಗುರುವಾರ ಇಲ್ಲಿ ಸುದ್ದಿಗೋಷ್ಠಿ ಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪಾರದರ್ಶಕ ಆಡಳಿತ: `ಕರ್ನಾಟಕ ಯಾವತ್ತಿಗೂ ಒಂದಾಗಿರಬೇಕು ಎನ್ನು ವುದು ನಮ್ಮ ಆಸೆ. ಆದರೆ ಮೈಸೂರಿನ ವರಿಗೆ ಈಗಲೂ ಅಖಂಡ ಕರ್ನಾಟಕದ ಕಲ್ಪನೆ ಬಂದಿಲ್ಲ. ಸರ್ಕಾರ ಕೂಡ  ನಮ್ಮ ಪ್ರಾಂತ್ಯಗಳಿಗೆ ತಾರತಮ್ಯ ಮಾಡುತ್ತಲೇ ಬಂದಿದೆ. ಒಂದುಗೂಡಿಯೇ ಇರಬೇಕು ಎನ್ನುವ ಕನಸು ಅನಗತ್ಯವಾಗಿ ಒಡೆದು ಹೋಗಬಾರದು. ಹಾಗೆ ಆಗಬೇಕಾದರೆ ಪಾರದರ್ಶಕ ಆಡಳಿತ ಜಾರಿಗೆ ಬರಬೇಕು ಮತ್ತು ಪ್ರಾದೇಶಿಕ ಅಸಮಾನತೆ ತೊಲಗ ಬೇಕು' ಎಂದು ಅವರು ಆಶಿಸಿದರು.

`ಪ್ರತ್ಯೇಕ ರಾಜ್ಯಕ್ಕೆ ಅನುವು ಮಾಡಿ ಕೊಡುವ 371ನೇ ಕಲಂ ದೇಶಕ್ಕೆ ಬಹು ದೊಡ್ಡ ಶಾಪ. ಇದರಿಂದ ಪ್ರತ್ಯೇಕತೆಯ ಬೇಡಿಕೆ ಇಡುವವರಿಗೆ ಇನ್ನಷ್ಟು ನೆರವಾ ಗುತ್ತದೆ.  ತೆಲಂಗಾಣ ಪ್ರತ್ಯೇಕ ರಾಜ್ಯದ ರಚನೆ ಕೂಡ ಅಷ್ಟು ಸಮಂಜಸವಲ್ಲ, ಪ್ರತ್ಯೇಕ ರಾಜ್ಯವಾಗಿ ಅಭಿವೃದ್ಧಿ ಕಾಣು ವುದು ಕಷ್ಟಕರ. ಪ್ರತ್ಯೇಕತೆಯ ಬಾಗಿಲು ತೆಗೆದ ಕಾಂಗ್ರೆಸ್ ಸರ್ಕಾರದ ಕ್ರಮ ಸರಿಯಲ್ಲ' ಎಂದರು.

ಕನ್ನಡವಾಗದ ವಿಧಾನ ಸೌಧ: `ನಮ್ಮ ವಿಧಾನ ಸೌಧಕ್ಕೆ ಹೋದರೆ ಕನ್ನಡ ಕಾಣುವುದಿಲ್ಲ. ಬೇರೆ ಭಾಷೆಯವರೇ ಅಲ್ಲಿ ಬಂದು ಸೇರಿಕೊಂಡಿದ್ದಾರೆ. ಕನ್ನಡ ಬಾರದೇ ಇರುವ ಅಧಿಕಾರಿಗಳಿಗೆ ಕನ್ನಡ ಕಲಿಸುವ ಶ್ರಮದ ಬದಲು ಕನ್ನಡ ಬರುವ ಅಧಿಕಾರಿಗಳನ್ನೇ ಎಲ್ಲೆಡೆ ನೇಮಕ ಮಾಡಬೇಕು' ಎಂದು ಸಲಹೆ ನೀಡಿದರು.

`ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿ, ಬಳ್ಳಾರಿ ಹಾಗೂ ವಿಜಾಪುರ ಗಳಲ್ಲಿ ಇರುವ ವೈದ್ಯಕೀಯ ಕಾಲೇಜು ಗಳಲ್ಲಿ ಸ್ಥಳೀಯರ ಪ್ರಮಾಣ ಕಡಿಮೆ. ಎಲ್ಲ ಆಯಕಟ್ಟಿನ ಜಾಗಗಳಲ್ಲಿ ಹಳೇ ಮೈಸೂರು ಪ್ರಾಂತ್ಯದವರೇ ಸೇರಿ ಕೊಂಡಿದ್ದಾರೆ. ಸಮಗ್ರ ಕರ್ನಾಟಕದ ಭಾವನೆ ನಮ್ಮನ್ನಾಳುವ ಸರ್ಕಾರಗಳಿಗೆ ಬಾರದ ಹೊರತೂ ಪ್ರಾದೇಶಿಕ ಅಸಮಾ ನತೆಗಳು ಹೋಗುವುದಿಲ್ಲ.

ಈಗಲೂ ಮೈಸೂರು, ಉತ್ತರ ಕರ್ನಾಟಕ, ಹೈದ ರಾಬಾದ್ ಕರ್ನಾಟಕ ಎನ್ನುವ ತಾರ ತಮ್ಯ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ಎರಡನೇ ರಾಜಧಾನಿ ಎನ್ನುವ ಹುಬ್ಬಳ್ಳಿ -ಧಾರವಾಡದಲ್ಲಿ ಆಗಿರುವ ಅಭಿವೃದ್ಧಿ ಯಾದರೂ ಎಷ್ಟು? ಇಲ್ಲಿನ ರಸ್ತೆಗಳನ್ನು ನೋಡಿದರೆ ಸಾಕು, ಅಭಿವೃದ್ಧಿ ಕಾಣುವುದಿಲ್ಲವೇ? ಎಂದು ಅವರು ಟೀಕಿಸಿದರು.

ಕೆಂಪೇಗೌಡ ಹೆಸರು: ಆಕ್ಷೇಪ
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಒಬ್ಬ ಪಾಳೇಗಾರ ನಾಗಿದ್ದ ಕೆಂಪೇಗೌಡ ಹೆಸರನ್ನು ಏಕೆ ಇಡಬೇಕು? ನಮ್ಮ ನಾಡನ್ನು ಆಳಿದ ವಿಜಯನಗರದ ಅರಸರ ಹೆಸರಾಗಲಿ, ಚಾಲುಕ್ಯ ರಾಜರ ಹೆಸರಾಗಲಿ ಇಡಬಾರದೇ' ಎಂದು ಕೇಳಿದ ಪಾಪು, ಇತಿಹಾಸದ ಬಗ್ಗೆ ಜ್ಞಾನವಿಲ್ಲದೇ ಇದ್ದವರಿಂದ ಇಂತಹ ಆಗ್ರಹಗಳು ಕೇಳಿ ಬರುತ್ತವೆ' ಎಂದು ಅವರು ಲೇವಡಿ ಮಾಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT