ಹಿಂದೂ ಮುಸ್ಲಿಂ ಕಲೆ ಸಮ್ಮಿಲನದ ಭಾವೈಕ್ಯ

7
ನಂಬಿಕೆಯ ತಾಣ ಮಾಗಡಿ ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇಗುಲ

ಹಿಂದೂ ಮುಸ್ಲಿಂ ಕಲೆ ಸಮ್ಮಿಲನದ ಭಾವೈಕ್ಯ

Published:
Updated:
Deccan Herald

ಮಾಗಡಿ: ತಿರುಮಲೆ ತಿರುವೆಂಗಳನಾಥ ರಂಗನಾಥಸ್ವಾಮಿ ದೇವರನ್ನು ಭಕ್ತಮಹಾಶಯರು ಭವರೋಗ ನಿವಾರಕ ಎಂದೇ ನಂಬಿ ಆರಾಧಿಸುತ್ತಿದ್ದಾರೆ.

ಪುರಾಣದ ಹಿನ್ನೆಲೆ: ‘ತಿರುಪತಿಯಲ್ಲಿ ಮಾಂಡವ್ಯ ಮುನಿಗಳು ತಿಮ್ಮಪ್ಪನನ್ನು ಕುರಿತು ತಪಸ್ಸು ಮಾಡಿದರು. ದೇವರು ಪ್ರತ್ಯಕ್ಷವಾಗಲಿಲ್ಲ. ಕೆಲವು ದಿನಗಳ ನಂತರ ಅಶರೀರವಾಣಿಯೊಂದು ಮಾಂಡವ್ಯರನ್ನು ಕುರಿತು ‘ಪಶ್ಚಿಮದಲ್ಲಿ ಕಣ್ವನದಿ ತೀರದಲ್ಲಿ ಸ್ವರ್ಣಾದ್ರಿ ಪರ್ವತವಿದೆ. ಅಲ್ಲಿಗೆ ಹೋಗಿ ತಪಸ್ಸು ಮಾಡಿದರೆ ತಿಮ್ಮಪ್ಪನ ದರ್ಶನವಾಗಲಿದೆ ಎಂದು ನುಡಿಯಿತಂತೆ. ಅಶರೀರವಾಣಿ ಮಾತಿನಂತೆ ಮಾಂಡವ್ಯರು ತಿರುಮಲೆಯ ಸ್ವರ್ಣಾದ್ರಿ ಪರ್ವತದ ಮೇಲೆ ಘೋರ ತಪಸ್ಸು ಮಾಡಿದರು’ ಎಂಬ ನಂಬಿಕೆ ಇದೆ.

‘ಪ್ರತ್ಯಕ್ಷನಾದ ತಿಮ್ಮಪ್ಪ ಇಲ್ಲಿಯೇ ಭಕ್ತರಿಗೆ ದರುಶನ ನೀಡುವುದಾಗಿ ಅಭಯವಿತ್ತರಂತೆ. ಮುಂದೆ ಪಶ್ಚಿಮ ವೆಂಕಟಾಚಲಪತಿ ಎಂದು ಹೆಸರಾಯಿತು. ತಿರುವೆಂಗಳನಾಥ, ರಂಗನಾಥಸ್ವಾಮಿ, ಪಶ್ಚಿಮ ವೆಂಕಟಾಚಲಪತಿ, ತಿರುಮಲ್ಲೇಶ್ವರಸ್ವಾಮಿ, ಮಾಗಡಿ ರಂಗ, ಮಕ್ಕಳ ರಂಗ, ಅನ್ನದ ರಂಗ, ಮುಂತಾದ ಹೆಸರುಗಳಿಂದ ಪೂಜಿಸಲಾಗುತ್ತಿದೆ. ಮಾಂಡವ್ಯರ ತಪೋಭೂಮಿ ಮಾಕುಟಿಪುರ, ಮಾಂಡವ್ಯಕುಟಿ ಮಾಗಡಿಯಾಯಿತು’ ಎಂಬ ಪ್ರತೀತಿ ಇದೆ.‌

ಐತಿಹ್ಯ: ಚೋಳ ಮಂಡಲವನ್ನು ಆಳುತ್ತಿದ್ದ ದೊರೆ ರಾಜೇಂದ್ರ ಚೋಳ ಎಂಬಾತ ಕ್ರಿ.ಶ. 1032ರಲ್ಲಿ ತಿರುಮಲೆಯಲ್ಲಿ ತಿರುವೆಂಗಳನಾಥಸ್ವಾಮಿ, ತಿರುಮಲ್ಲೇಶ್ವರಸ್ವಾಮಿ ದೇವಾಲಯ ಕಟ್ಟಿಸಿದ ಎಂಬ ಚಾರಿತ್ರಿಕ ದಾಖಲೆಗಳಿವೆ.

ನೊಳಂಬ, ಗಂಗ, ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರು, ಮೈಸೂರಿನ ಯದು ವಂಶೀಯರು, ಕೆಂಪೇಗೌಡ, ಟಿಪ್ಪುಸುಲ್ತಾನ್, ಸ್ಥಳೀಯ ಪಾಳೇಗಾರರು ತಿರುವೆಂಗಳೇಶ್ವರಸ್ವಾಮಿ ರಂಗನಾಥಸ್ವಾಮಿ ದೇವಾಲಯಕ್ಕೆ  ಸಾವಿರ ಎಕರೆ ಭೂಮಿ ದಾನ ನೀಡಿರುವ ಬಗ್ಗೆ ದಾನ ಶಾಸನಗಳಿವೆ. ದೇವಾಲಯದ ಪಶ್ಚಿಮ ದ್ವಾರದ ಬಳಿ ವಿಜಯ ನಗರದ ಅರಸು ಶ್ರೀಕೃಷ್ಣ ದೇವರಾಯ ನೀಡಿದ ದಾನ ಶಿಲಾಶಾಸನವಿದೆ.

ಪೂರ್ವದ್ವಾರದ ಮೇಲಿನ ರಾಯಗೋಪುರವನ್ನು ಬಿಜಾಪುರ ಸುಲ್ತಾನರ ದಂಡನಾಯಕ ರಣದುಲ್ಲಾಖಾನ್‌ ಇಂಡೋಸಾರೆಸಾನಿಕ್‌ ಶೈಲಿಯಲ್ಲಿ ನಾಗಿರೆಡ್ಡಿ ಎಂಬ ಶಿಲ್ಪಿಯಿಂದ ಕಟ್ಟಿಸಿದ್ದಾನೆ. ಹಿಂದೂ ಮುಸ್ಲಿಂ ಕಲೆಯ ಸಮ್ಮಿಲನವಾಗಿ ಭಾವೈಕ್ಯ ಸಾರುತ್ತಿದೆ. ದೇವರ ಉತ್ಸವ ಮೂರ್ತಿಗಳು ಪೂರ್ವದ್ವಾರದಿಂದ ಹೊರಗೆ ಮೆರವಣಿಗೆಗೆ ತೆರಳಿ ನಂತರ ಮೂಲಸ್ಥಾನಕ್ಕೆ ಸೇರುವುದು ಪೂರ್ವದ್ವಾರದ ಮೂಲಕ ಮಾತ್ರ.

ದೇಗುಲದ ಪಶ್ಚಿಮ ದಿಕ್ಕಿನಲ್ಲಿ ಚೋಳದೊರೆ ಕಟ್ಟಿಸಿದ್ದ ರಾಯಗೋಪುರ ಶಿಥಿಲವಾಗಿದ್ದರಿಂದ ಮೈಸೂರಿನ ಜಯಚಾಮರಾಜ ಒಡೆಯರ ಕಾಲದಲ್ಲಿ ಮರು ನಿರ್ಮಾಣವಾಗಿರುವ ಗೋಪುರವಿದೆ. ದೇಗುಲದ ಪಶ್ಚಿಮ ದಿಕ್ಕಿನಲ್ಲಿ ಮಾಂಡವ್ಯರ ಹೆಸರಿನಲ್ಲಿ ಕಲ್ಯಾಣಿ ಇದೆ.

ಗರ್ಭಗೃಹದಲ್ಲಿ ನಯನ ಮನೋಹರ ತಿರುವೆಂಗಳನಾಥ 5ಅಡಿ ಎತ್ತರದ ಕಪ್ಪುಶಿಲೆ ವಿಗ್ರಹವಿದೆ. ವಿಗ್ರಹದ ಮುಂದೆ ಸಾಲಿಗ್ರಾಮ ಶಿಲೆ ಇದೆ ಎನ್ನಲಾಗಿದೆ. ಬಲಭಾಗದಲ್ಲಿ ಮುನಿಯ 2ಅಡಿ ಎತ್ತರದ ವಿಗ್ರಹವಿದೆ. ಅದನ್ನು ಮಾಂಡವ್ಯರ ಮೂರ್ತಿ ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !