ಭಾನುವಾರ, ನವೆಂಬರ್ 28, 2021
21 °C
ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆ, ಕಚೇರಿ ಮೇಲೆ ಎಸಿಬಿ ದಾಳಿ

ಎಸಿಬಿ ದಾಳಿ: ಅತ್ತೆ ಹೆಸರಲ್ಲೊಂದು, ಹೆಂಡ್ತಿ ಹೆಸರಲ್ಲೊಂದು ಕಾರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಅವರ ಮನೆ ಹಾಗೂ ಕಚೇರಿ ಮೇಲೆ ಬುಧವಾರ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಪತ್ತೆಯಾದ ದಾಖಲೆ ಅನುಸಾರ ಒಂದು ಕಾರು ಅವರ ಅತ್ತೆ ಹೆಸರಿನಲ್ಲಿದ್ದರೆ; ಇನ್ನೊಂದು ಅವರ ಪತ್ನಿಯ ಹೆಸರಿನಲ್ಲಿದೆ.

ಮಂಗಳವಾರವೇ (ನ.23) ಗದುಗಿನಲ್ಲಿ ಬೀಡು ಬಿಟ್ಟಿದ್ದ ಅಧಿಕಾರಿಗಳ ತಂಡ ಬುಧವಾರ ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿದರು. ನಗರದ ಹುಡ್ಕೊ ಕಾಲೊನಿಯಲ್ಲಿರುವ ಅವರ ಬಾಡಿಗೆ ಮನೆ ಹಾಗೂ ನೌಕರರ ಭವನದ ಪಕ್ಕದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.25ರವರೆಗೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. 

‘ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಅವರು ಗದಗ ನಗರದಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದಾರೆ. ಅವರ ಕುಟುಂಬ ಶಿವಮೊಗ್ಗದಲ್ಲಿ ನೆಲೆಸಿದೆ. ಗದಗ ನಗರದಲ್ಲಿರುವ ಬಾಡಿಗೆ ಮನೆ ಹಾಗೂ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಇಲ್ಲಿ ಒಂದು ಇನ್ನೊವಾ ಮತ್ತೊಂದು ಟಾಟಾ ನೆಕ್ಸಾನ್‌ ಕಾರಿನ ದಾಖಲೆಗಳು ಮಾತ್ರ ಲಭಿಸಿವೆ. ಇನ್ನೊವಾ ಕಾರು ಅವರ ಅತ್ತೆ ಹೆಸರಿನಲ್ಲಿದ್ದರೆ; ನೆಕ್ಸಾನ್‌ ಕಾರು ಅವರ ಪತ್ನಿಯ ಹೆಸರಿನಲ್ಲಿದೆ’ ಎಂದು ಎಸಿಬಿ ಇನ್‌ಸ್ಪೆಕ್ಟರ್‌ ಬಸವರಾಜ್‌ ಬದ್ನೂರು ತಿಳಿಸಿದರು.

‘ರುದ್ರೇಶಪ್ಪ ಟಿ.ಎಸ್‌.ಅವರ ಮೂಲ ಊರಾದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ತಣಿಗೆರೆ ಹಾಗೂ ಅವರ ಕುಟುಂಬ ಸದ್ಯ ವಾಸವಿರುವ ಶಿವಮೊಗ್ಗದ ಚಾಲುಕ್ಯ ನಗರದ ಮನೆ ಹಾಗೂ ಗದಗ ನಗರದಲ್ಲಿ ಏಕಕಾಲಕ್ಕೆ ಎಸಿಬಿ ದಾಳಿ ನಡೆದಿದೆ. ಎಸಿಬಿ ಎಸ್‌ಪಿ ಸೂಚನೆ ಮೇರೆಗೆ ಅವರನ್ನು ಹೆಚ್ಚಿನ ವಿಚಾರಣೆಗಾಗಿ ಶಿವಮೊಗ್ಗಕ್ಕೆ ಬರುವಂತೆ ತಿಳಿಸಲಾಗಿದೆ’ ಎಂದು ಅವರು ಹೇಳಿದರು.

ದಾವಣಗೆರೆ ಎಸಿಬಿ ಇನ್‌ಸ್ಪೆಕ್ಟರ್‌ ರವೀಂದ್ರ ಹಾಗೂ ಹಾವೇರಿ ಎಸಿಬಿ ಇನ್‌ಸ್ಪೆಕ್ಟರ್‌ ಬಸವರಾಜ್‌ ಬದ್ನೂರು ನೇತೃತ್ವದ ತಂಡ ಗದುಗಿನಲ್ಲಿ ದಾಳಿ ನಡೆಸಿದ್ದು, ಇವರ ಜತೆಗೆ 12 ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.