ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಪೀಳಿಗೆಗೆ ಅರಿವು ಮೂಡಿಸಿ

ಮರಣ ಪ್ರಮಾಣ ಸೊನ್ನೆಗೆ ತಂದರಷ್ಟೇ ಆಂದೋಲನ ಯಶಸ್ವಿ; ಸಲಗೆರೆ ಸಲಹೆ
Last Updated 2 ಡಿಸೆಂಬರ್ 2020, 2:16 IST
ಅಕ್ಷರ ಗಾತ್ರ

ಗದಗ: ‘ಎಚ್‌ಐವಿ ಕುರಿತು ಯುವ ಪೀಳಿಗೆಗೆ ಅರಿವು ಮೂಡಿಸುವುದು ಇಂದಿನ ಅಗತ್ಯ. ಏಡ್ಸ್‌ ನಿಯಂತ್ರಣ ಕಾರ್ಯದಲ್ಲಿ ಪ್ರತಿಯೊಬ್ಬರೂ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗೆರೆ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ವಿಶ್ವ ಏಡ್ಸ್‌ ದಿನ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ ಬಸರೀಗಿಡದ ಮಾತನಾಡಿ, ‘ಹತ್ತು ವರ್ಷಗಳ ಅಂಕಿ ಅಂಶಗಳನ್ನು ನೋಡಿದರೆ ಎಚ್ಐವಿ ಸೋಂಕಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇಲಾಖೆ ವತಿಯಿಂದ ನಡೆದ ಹಲವು ತಿಳಿವಳಿಕೆ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳು ಇದಕ್ಕೆ ಕಾರಣ. ಎಚ್ಐವಿ ಮರಣ ಪ್ರಮಾಣವನ್ನು ಸೊನ್ನೆಗೆ ತಂದಾಗಷ್ಟೇ ಈ ಆಂದೋಲನ ಯಶಸ್ಸು ಸಾಧ್ಯ’ ಎಂದು ಹೇಳಿದರು.

ಜಿಲ್ಲೆಯಲ್ಲಿ ಎಚ್‌ಐವಿ ನಿಯಂತ್ರಣದಲ್ಲಿ ಉತ್ತಮ ಸೇವೆ ಸಲ್ಲಿಸಿದ ಮುಂಡರಗಿ ಮತ್ತು ಗಜೇಂದ್ರಗಡ ಐಸಿಟಿಸಿ ಕೇಂದ್ರಗಳು, ಎಆರ್‌ಟಿ ಕೇಂದ್ರ ಗದಗ, ಕೆಎಚ್‌ಪಿಟಿ ಸಂಸ್ಥೆ, ನವಚೇತನ ಸಮುದಾಯ ಆರೈಕೆ ಕೇಂದ್ರಗಳಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದರೊಂದಿಗೆ ಉತ್ತಮ ರೆಡ್ ರಿಬ್ಬನ್‌ ಕಾಲೇಜು ಎಂದು ನರಗುಂದ ಸಿದ್ಧೇಶ್ವರ ಕಾಲೇಜು, ನಗರದ ಜೆ.ಟಿ.ಕಾಲೇಜು, ಕೆಎಸ್‌ಎಸ್‌ ಕಾಲೇಜು ಮತ್ತು ರಕ್ತದಾನಕ್ಕೆ ಪೋಷಕ ಸಂಸ್ಥೆಗಳೆಂದು ಕೆಒಇಎಂ ಕಾರ್ಖಾನೆ ನರಸಾಪುರ, ಇಂಡಸ್ಟ್ರಿಯಲ್ ಎಸ್ಟೇಟ್‌ ಕಾರ್ಖಾನೆ, ಎ.ಜಿ.ಚರ್ಚ್ ಬೆಳಕು ಸಂಸ್ಥೆಗಳಿಗೆ ಹಾಗೂ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಡಾ. ನೂರಾನಿ, ನಾಗರಾಜಕಂಪ್ಲಿ, ಇಂಪನಾ ಅವರನ್ನು ಸನ್ಮಾನಿಸಿ, ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು.

ಡಾ. ಡಿ.ಎನ್.ನಾಯಕ ಮಾತನಾಡಿ, ‘ಎಚ್ಐವಿ ಸೋಂಕಿತರನ್ನು ಮಾನವೀಯತೆಯಿಂದ ಕಾಣಬೇಕು. ಈ ಕುರಿತು ಸಮಾಜದಲ್ಲಿ ತಿಳಿವಳಿಕೆ ಮೂಡಿಸುವಲ್ಲಿ ಯುವಕರ ಪಾತ್ರ ಪ್ರಮುಖವಾಗಿದೆ’ ಎಂದರು.

ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ರೇಖಾ ಸೊನಾವನೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿ ವಿದ್ಯಾಧರ ದೊಡ್ಡಮನಿ ಮಾತನಾಡಿದರು.

ಕಾಲೇಜಿನ ಉಪನ್ಯಾಸಕ ವರ್ಗ, ವಿದ್ಯಾರ್ಥಿಗಳು, ಆರೋಗ್ಯ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂದಿ ವರ್ಗ ಭಾಗವಹಿಸಿದ್ದರು. ಶಾಹೀದಾ ನದಾಫ್‌, ಡಾ. ಎಸ್.ಎಸ್.ನೀಲಗುಂದ, ಜಿಲ್ಲಾ ಸಿಟಿಸಿ ಮೇಲ್ವಿಚಾರಕ ಬಿ.ಬಿ.ಲಾಳಗಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT