ಶನಿವಾರ, ಮೇ 21, 2022
20 °C
ಸೌಹಾರ್ದದ ನಗರದಲ್ಲಿ ಅಶಾಂತಿ ಮೂಡಿಸುವ ಹುನ್ನಾರ– ಸಾಹಿತಿ ಸೂಳಿಭಾವಿ ಆರೋಪ

ಧರ್ಮಲಂಡರಿಂದ ಶಾಂತಿ ಕದಡುವ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ‘ಪ್ರಸ್ತುತ ಸಂದರ್ಭದಲ್ಲಿ ಸಾಮಾಜಿಕ ಸಂದರ್ಭ ಸಂದಿಗ್ಧವಾಗಿದೆ. ಸೌಹಾರ್ದಕ್ಕೆ ಹೆಸರಾಗಿರುವ ಗದಗ ಜಿಲ್ಲೆಯಲ್ಲಿ ಕೆಲವೊಂದು ದುಷ್ಟ ಶಕ್ತಿಗಳು ಅರಾಜಕತೆ, ದ್ವೇಷ ಭಾವನೆ ಹುಟ್ಟುಹಾಕಲು ಹವಣಿಸುತ್ತಿವೆ’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲಿಂಗಾಯತ ಸ್ವತಂತ್ರ ಧರ್ಮ. ಗದುಗಿನಲ್ಲಿ ಸೌಹಾರ್ಯ ಬೆಳೆಸಲು ಲಿಂಗಾಯತ ಮಠಗಳ ಕೊಡುಗೆಯೂ ದೊಡ್ಡದಿದೆ. ಎಲ್ಲರನ್ನೂ ಒಳಗೊಳ್ಳುವುದು ಲಿಂಗಾಯತ ಪರಂಪರೆಯ ಹೆಮ್ಮೆ. ಇಂತಹ ಲಿಂಗಾಯತ, ಶರಣ ಚಳವಳಿಗೆ ವಿರೋಧವಾಗಿರುವ ಕೆಲವು ಶಕ್ತಿಗಳು ಹಾಗೂ ಹಿಂದುತ್ವವನ್ನು ರಾಜಕಾರಣಕ್ಕೆ ಬಳಸುವ ಧರ್ಮಲಂಡರು ಶಾಂತಿ ಕದಡಲು ಮುಂದಾಗಿದ್ದಾರೆ’ ಎಂದು ಕಿಡಿಕಾರಿದರು.

ಗದುಗಿನ ತೋಂಟದಾರ್ಯ ಮಠವು ಎಲ್ಲರನ್ನೂ ಒಳಗೊಳ್ಳುತ್ತದೆ, ಯಾವುದೇ ತಾರತಮ್ಮ, ಭೇದ ಭಾವ ಎಣಿಸುವುದಿಲ್ಲ ಎಂಬ ಕಾರಣಕ್ಕೆ ಲಿಂಗೈಕ್ಯ ಶ್ರೀಗಳಿಗೆ ಕೋಮು ಸೌಹಾರ್ದ ಪ್ರಶಸ್ತಿ ಲಭಿಸಿತ್ತು. ಇಂತಹ ಮಠದ ಜಾತ್ರೆಯಲ್ಲಿ ಒಂದು ಸಮುದಾಯದ ಜನರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬಾರದು ಎಂದು ಹೇಳಲಿಕ್ಕೆ ಶ್ರೀರಾಮ ಸೇನೆಯವರು ಯಾರು’ ಎಂದು ಪ್ರಶ್ನಿಸಿದರು.

‘ಗದುಗಿನ ಮಠದ ಪರಂಪರೆ ಹಾಳು ಮಾಡಲು ಮುಂದಾದರೆ ಪ್ರಗತಿಪರರೆಲ್ಲರೂ ಒಂದಾಗಿ ಎದುರಿಸುತ್ತೇವೆ. ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಅವಕಾಶ ಕೊಡಬಾರದು ಎಂದು ಹೇಳುವ ಶ್ರೀರಾಮ ಸೇನೆಗೆ ತಾಕತ್ತಿದ್ದರೆ ಉಡುಪಿಯ ಅಷ್ಟಮಠಗಳಿಗೆ ಹೋಗಿ ಹೋರಾಟ ಮಾಡಲಿ’ ಎಂದು ಸವಾಲೆಸೆದರು.

‘ಸರ್ವಧರ್ಮವನ್ನು ಸಮಾನವಾಗಿ ಕಾಣಬೇಕಿದ್ದ ರಾಜ್ಯ ಸರ್ಕಾರ ವಿಧ್ವಂಸಕ ಶಕ್ತಿಗಳನ್ನು ಮಟ್ಟಹಾಕುವ ಬದಲು, ಅವರಿಗೆ ಕುಮ್ಮಕ್ಕು ನೀಡುತ್ತಿದೆ. ಇದರಿಂದಾಗಿ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ. ಇಷ್ಟು ಕೆಟ್ಟ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಯನ್ನು ಹಿಂದೆಂದೂ ನೋಡಿರಲಿಲ್ಲ’ ಎಂದು ಆರೋಪ ಮಾಡಿದರು.

‘ಜನಾಂಗೀಯವಾಗಿ ಇಡೀ ಸಮಾಜವನ್ನು ಒಡೆಯುವುದು ರಾಜಕಾರಣಿಗಳ ರಾಜಕೀಯ ತಂತ್ರ. ಸೌಹಾರ್ದ ಪರಂಪರೆಯ ತೋಂಟದಾರ್ಯ ಮಠದ ಜಾತ್ರೆಗೆ ಮುಖ್ಯಮಂತ್ರಿಯೂ ಬರುತ್ತಿದ್ದಾರೆ. ಈಗಲಾದರೂ ಅವರು, ವಿಧ್ವಂಸಕ ಶಕ್ತಿಗಳನ್ನು ಮಟ್ಟ ಹಾಕಲು ಮುಂದಾಗಬೇಕು. ಇಲ್ಲವಾದಲ್ಲಿ ಗದಗ ಚಲೋಗೆ ಕರೆ ಕೊಡಲಾಗುವುದು’ ಎಂದು ಎಚ್ಚರಿಸಿದರು.

ಶೇಖಣ್ಣ ಕವಳಿಕಾಯಿ, ಅಶೋಕ ಬರಗುಂಡಿ, ಆನಂದ್‌ ಸಿಂಗಾಡಿಯಾ, ಮುತ್ತು ಬಿಳಿಯಲೆ, ಯಲ್ಲಪ್ಪ ರಾಮಗಿರಿ ಇದ್ದರು.

‘ಮುತಾಲಿಕ್‌ ಮನುಷ್ಯ ವಿರೋಧಿ’

‘ಶ್ರೀರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಲಿಂಗಾಯತ ವಿರೋಧಿಯಷ್ಟೇ ಅಲ್ಲ ಮನುಷ್ಯ ವಿರೋಧಿಯೂ ಹೌದು. ಅವನು ಲಿಂಗಾಯತ ಮಠಗಳನ್ನು ಗುರಿಯಾಗಿಸಿಕೊಂಡು ಜಾತ್ರೆ ವಿಷಯದಲ್ಲಿ ವಿಧ್ವಂಸಕ ಕೃತ್ಯಗಳನ್ನು ಸೃಷ್ಟಿಸಲು ಮುಂದಾಗಿದ್ದಾನೆ. ಸೌಹಾರ್ದಕ್ಕೆ ಹೆಸರಾಗಿರುವ ಗದಗ ಜಿಲ್ಲೆಗೆ ಅವನು ಕಾಲಿಡಲು ಜಿಲ್ಲಾಡಳಿತ ಬಿಡಬಾರದು’ ಎಂದು ಬಸವರಾಜ ಸೂಳಿಭಾವಿ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಪ್ರಮೋದ್‌ ಮುತಾಲಿಕ್‌ ಗದಗಕ್ಕೆ ಕಾಲಿಡದಂತೆ ಪೊಲೀಸರು ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಜಾತ್ರೆ ಸಂದರ್ಭದಲ್ಲಿ ಏನು ಬೇಕಾದರೂ ಆಗಬಹುದು. ಜಾತ್ರೆ ನಡೆಯದಂತೆ ನೋಡಿಕೊಳ್ಳುವುದೇ ಅವನ ಮುಖ್ಯ ಉದ್ದೇಶ. ಜಿಲ್ಲಾಧಿಕಾರಿ ಈ ವಿಷಯದಲ್ಲಿ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.‌

‘ಶ್ರೀರಾಮ ಸೇನೆ ಉಳಿಯುವುದಿಲ್ಲ’

‘ದೇಶದಲ್ಲಿ ಎಲ್ಲೂ ಇಲ್ಲದ ಸಮಸ್ಯೆಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ’ ಎಂದು ಕಮ್ಯುನಿಸ್ಟ್‌ ಮುಖಂಡ ಭಾರದ್ವಾಜ್‌ ಆತಂಕ ವ್ಯಕ್ತಪಡಿಸಿದರು.

ಗದುಗಿನ ತೋಂಟದಾರ್ಯ ಮಠಕ್ಕೆ ಶ್ರೇಷ್ಠ ಪರಂಪರೆ ಇದೆ. ಇಲ್ಲಿ ಸಂಘರ್ಷ ಸೃಷ್ಟಿಸಲು ಮುಂದಾದರೆ ಪ್ರಗತಿಪರರು, ಬಸವ ಕೇಂದ್ರಗಳೆಲ್ಲ ಒಂದಾಗಿ ತಡೆಯುತ್ತೇವೆ. ಗದುಗಿನ ತಂಟೆಗೆ ಬಂದರೆ ಶ್ರೀರಾಮ ಸೇನೆ ಉಳಿಯುವುದಿಲ್ಲ. ಬಸವಣ್ಣನನನ್ನು ಕೊಂದವರು ಮನುವಾದಿಗಳು. ಅವರ ಈಗಿನ ವಾರಸುದಾರ ಪ್ರಮೋದ್‌ ಮುತಾಲಿಕ್‌’ ಎಂದು ವಾಗ್ದಾಳಿ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು