ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಿಸ್ಥಿತಿ ನೋಡಿ ಬೇಸರವಾಗುತ್ತದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಅಲ್ಲ, ಬಡಿದಾಟ ನಡೆದಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗಲೇ, ಆ ಸ್ಥಾನಕ್ಕೆ ಟವೆಲ್ ಹಾಕಿದ್ದಾರೆ. ಒಬ್ಬ ನಾಯಕನ ಬಗ್ಗೆ ಅವಿಶ್ವಾಸ ಎಷ್ಟು ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದರು.
‘ಸಿದ್ದರಾಮಯ್ಯ ಮೊದಲು ತಮ್ಮ ಸಚಿವ ಸಂಪುಟ ಸರಿ ಮಾಡಿಕೊಳ್ಳಬೇಕು. ಆಗ ಆಡಳಿತವು ಬಿಗಿಯಾಗುತ್ತದೆ. ಸಚಿವರು ಅಭಿವೃದ್ಧಿಯತ್ತ ಗಮನ ಹರಿಸುತ್ತಿಲ್ಲ. ಬರೀ ರಾಜಕಾರಣ, ಅಧಿಕಾರದ ವ್ಯಾಮೋಹದಲ್ಲಿ ಇದ್ದಾರೆ’ ಎಂದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗಾರರ ಜೊತೆ ವಿಧಾನ ಪರಿಷತ್ತು ಸದಸ್ಯ ಸಿ.ಟಿ.ರವಿ ಮಾತನಾಡಿ, ‘ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದ್ದು, ಒಳಜಗಳ ಆರಂಭವಾಗಿದೆ. ದೀಪಾವಳಿ ಒಳಗೆ ಸರ್ಕಾರ ಢಮಾರ್ ಆಗಲಿದೆ’ ಎಂದರು.
‘ಕಾಂಗ್ರೆಸ್ ಶಾಸಕರು, ಸಚಿವರು ಮತ್ತು ಮುಖಂಡರು ಸಿದ್ದರಾಮಯ್ಯ ಅವರ ರಾಜೀನಾಮೆಗೆ ಸಿದ್ಧತೆ ನಡೆಸಿ, ಸಮಯ ನಿಗದಿಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೆಲ ಸಚಿವರು ತಾವೂ ಸಹ ಮುಖ್ಯಮಂತ್ರಿ ಆಕಾಂಕ್ಷಿ ಎನ್ನುತ್ತಿದ್ದಾರೆ’ ಎಂದರು.