ಸೋಮವಾರ, ಫೆಬ್ರವರಿ 24, 2020
19 °C
ಗುಂಡಿಗಳಿಂದ ಕೂಡಿದ ರಸ್ತೆಗಳಿಂದ ಸವಾರರಿಗೆ ಸಂಕಷ್ಟ; ಕಸ ವಿಲೇವಾರಿ ಆಗದೆ ದುರ್ವಾಸನೆ

ಗದಗ: ಒಳ ಚರಂಡಿ ಕಾಮಗಾರಿಗೆ ರಸ್ತೆ ಹಾಳು

ಅರುಣಕುಮಾರ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಗದಗ: 24x7 ನೀರು ಪೂರೈಕೆ ಕಾಮಗಾರಿಗಾಗಿ ಅಗೆದ ರಸ್ತೆಗಳಿಂದ ಹಾಗೂ ಕಸ ವಿಲೇವಾರಿ ಸಮಸ್ಯೆಯಿಂದ ಇಲ್ಲಿನ 31ನೇ ವಾರ್ಡ್‌ನ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.

31ನೇ ವಾರ್ಡ್‌ನ ರಂಗನವಾಡ ಹಾಗೂ ಸುಣಗಾರ ಓಣಿಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ 24x7 ನೀರು ಪೂರೈಕೆ ಕಾಮಗಾರಿಗಾಗಿ ಅಗೆದಿದ್ದ ರಸ್ತೆಯಲ್ಲಿ ತಗ್ಗು–ಗುಂಡಿಗಳು ಬಿದ್ದಿದ್ದು, ಸಂಚಾರ ಕಷ್ಟವಾಗಿದೆ. ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರು ಭಯದಿಂದಲೇ ಸಂಚರಿಸುವಂತಾಗಿದೆ.

‘ಈ ಮೊದಲು ವಾರ್ಡ್‌ನ ವಿವಿಧ ಬಡಾವಣೆಗಳ ಒಳ ರಸ್ತೆಗಳು ಕಾಂಕ್ರಿಟ್‌ನಿಂದ ಕೂಡಿದ್ದು ಸಂಚಾರ ಸುಲಭವಾಗಿತ್ತು. ನೀರು ಪೂರೈಕೆ ಹಾಗೂ ಒಳ ಚರಂಡಿ ಕಾಮಗಾರಿಗೆ ರಸ್ತೆ ಅಗೆದಿದ್ದರಿಂದ ಕಾಂಕ್ರೀಟ್‌ ರಸ್ತೆ ಸಂಪೂರ್ಣ ಹಾಳಾಗಿದೆ. ಪುನಃ ಕಾಂಕ್ರಿಟ್‌ ಹಾಕದ ಕಾರಣ ತಗ್ಗು–ಗುಂಡಿಗಳು ಬಿದ್ದಿವೆ. ರಸ್ತೆ ಸರಿಪಡಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ರಂಗನವಾಡದ ನಿವಾಸಿ ಬಶೀರ್‌ ಮುಲ್ಲಾ.

‘31ನೇ ವಾರ್ಡ್‌ನ ಕಿಲ್ಲಾ, ನರಗರಡಿ ಹಾಗೂ ಸುಣಗಾರ ಓಣಿಯಲ್ಲಿ ಒಳ ಚರಂಡಿ ನಿರ್ಮಾಣಗೊಂಡಿದ್ದರೂ ಸಂಪರ್ಕ ಕಲ್ಪಿಸಿಲ್ಲ. ಚರಂಡಿ ಹಾಗೂ ಗಟಾರಗಳು  6 ತಿಂಗಳಿನಿಂದ ಸ್ವಚ್ಛಗೊಂಡಿಲ್ಲ. ನಗರಸಭೆ ಸಿಬ್ಬಂದಿ ಚರಂಡಿ ಸ್ವಚ್ಛತೆಗಾಗಿ ಆಗಮಿಸಿದರೂ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲೆ ಹಾಕಿ ವಿಲೇವಾರಿ ಮಾಡದ ಕಾರಣ ಮತ್ತೆ ತ್ಯಾಜ್ಯ ಚರಂಡಿ ಸೇರುತ್ತಿದೆ. ಇದರಿಂದ ದುರ್ನಾತ ಬೀರುತ್ತಿದೆ’ ಎನ್ನುತ್ತಾರೆ ಕಿಲ್ಲಾ ಓಣಿಯ ನಾರಾಯಣ ಪವಾರ.

ಬಿಡಾಡಿ ದನಗಳ ಹಾವಳಿ: 31ನೇ ವಾರ್ಡ್‌ನ ರಂಗನವಾಡ, ಸುಣಗಾರ ಓಣಿಯು ತರಕಾರಿ ಮಾರುಕಟ್ಟೆಗೆ ಸಮೀಪವಾಗಿದ್ದು ಬಿಎಸ್‌ಎನ್‌ಎಲ್‌ ಟವರ್‌ ಸುತ್ತಲಿನಲ್ಲಿ ರಸ್ತೆ ಪಕ್ಕದಲ್ಲಿಯೇ ತರಕಾರಿ ವ್ಯಾಪಾರ ಮಾಡುತ್ತಾರೆ. ತರಕಾರಿ ತ್ಯಾಜ್ಯ ಅಲ್ಲಿಯೇ ಬಿಸಾಕುವುದರಿಂದ ಬಿಡಾಡಿ ದನಗಳ ಹಾವಳಿ ಹೆಚ್ಚಿದೆ. ಅಲ್ಲದೇ ಹಂದಿಗಳ ಕಾಟವೂ ವಿಪರೀತವಾಗಿದ್ದು ಸಂಚಾರ ವ್ಯವಸ್ಥೆಗೂ ಮಾರಕವಾಗಿ ಪರಿಣಮಿಸಿದೆ.

 ನೀರಿನ ಸೌಲಭ್ಯ ಪ್ರಗತಿ
ವಾರ್ಡ್‍ನ ವಿವಿಧೆಡೆ 13 ಕೊಳವೆ ಬಾವಿಗಳಿದ್ದು, ನಿತ್ಯ ಬಳಕೆಗೆ ನೀರು ಪೂರೈಕೆಯಾಗುತ್ತಿದೆ. 8 ದಿನಗಳಿಗೊಮ್ಮೆ ತುಂಗ–ಭದ್ರಾ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ನೀರಿನ ಸಮಸ್ಯೆ ಪರಿಹಾರವಾಗಿದೆ. ಆದರೆ, ನಗರಸಭೆ ಸಿಬ್ಬಂದಿ ನಿರ್ಲಕ್ಷ್ಯದಿಂದ ನೀರು ಚರಂಡಿ ಪಾಲಾಗುತ್ತಿದೆ. ಬಿಎಸ್‍ಎನ್‍ಎಲ್ ಟವರ್‌ನಿಂದ ಜೋಡ ಮಾರುತಿ ದೇವಸ್ಥಾನದವರೆಗೆ ಹಾಗೂ ಹಸಿರು ಕೆರೆ ಭಾಗದಿಂದ ಐತಿಹಾಸಿಕ ತ್ರಿಕೂಟೇಶ್ವರ ದೇವಸ್ಥಾನದವರೆಗೆ ಸುಸಜ್ಜಿತ ಕಾಂಕ್ರೀಟ್‌ ರಸ್ತೆ ನಿರ್ಮಾಣವಾಗಿದ್ದು ಪ್ರವಾಸಿಗರಿಗೆ ಅನುಕೂಲವಾಗಿದೆ.

*
ರಸ್ತೆಗಳನ್ನೆಲ್ಲ ಮುಚ್ಚಿಲ್ಲ. ಸಂಚರಿಸಲು ತೊಂದರೆಯಾಗುತ್ತಿದೆ.
-ಬಶೀರ್‌ ಮುಲ್ಲಾ, ರಂಗನವಾಡ ನಿವಾಸಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು