ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಜೇಂದ್ರಗಡ | ಗಮನ ಸೆಳೆಯುವ ಸಾಂಪ್ರದಾಯಿಕ, ಸಖಿ ಮತಗಟ್ಟೆ

ಮತದಾನಕ್ಕೆ ಮತದಾರರನ್ನು ಸೆಳೆಯಲು ವಿಭಿನ್ನ ಪ್ರಯತ್ನ
Published 6 ಮೇ 2024, 15:50 IST
Last Updated 6 ಮೇ 2024, 15:50 IST
ಅಕ್ಷರ ಗಾತ್ರ

ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 93ರಲ್ಲಿ ಹಳ್ಳಿಗಾಡಿನ ಲಂಬಾಣಿ ಸಮುದಾಯದ ಜೀವನ ಶೈಲಿಯ ವಿಭಿನ್ನ ಕಲಾಕೃತಿಗಳನ್ನು ಚಿತ್ರಿಸಿ, ಮತಗಟ್ಟೆ ಅಲಂಕರಿಸುವ ಮೂಲಕ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಜಿಲ್ಲಾ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವಿಶೇಷ ಪ್ರಯತ್ನ ಮಾಡಿವೆ.

ರಾಜೂರ ಗ್ರಾಮದಲ್ಲಿ ನಾಲ್ಕು ಮತಗಟ್ಟೆಗಳಿದ್ದು, ಅದರಲ್ಲಿ 93ನೇ ಮತಗಟ್ಟೆ ವಿಶೇಷ ಮತಗಟ್ಟೆಯನ್ನಾಗಿ ಗುರುತಿಸಲಾಗಿದ್ದು, ಈ ಮತಗಟ್ಟೆಯಲ್ಲಿ ಲಂಬಾಣಿ ಸಮುದಾಯದ ಜನರು ಹೆಚ್ಚಿರುವ ಕಾರಣ ತಾಂಡಾ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯಲು ಅವರ ಜೀವನ ಶೈಲಿಯ ಚಿತ್ರಣಗಳನ್ನು ಕಲಾಕೃತಿಗಳನ್ನು ಬಿಡಿಸಲಾಗಿದೆ.

ದ್ವಾರದಲ್ಲಿ ಬಿದಿರಿನ ತಟ್ಟಿಯಿಂದ ಗುಡಿಸಲು ನಿರ್ಮಿಸಿ ತೆಂಗಿನ ಗರಿ, ಹುಲುಗಲಿ ತಪ್ಪಲಿನಿಂದ ಹೊದಿಕೆಯಿಂದ ಸಿಂಗರಿಸಲಾಗಿದೆ. ಗೋಡೆಗಳಿಗೆ ಲಂಬಾಣಿ ಜನರು ಬಳಸುವ ಮತ್ತು ಧರಿಸುವ ವಸ್ತ್ರ, ಆಭರಣಗಳನ್ನು ಚಿತ್ರಿಸಲಾಗಿದ್ದು, ಗುಡಿಸಲು ಹಾಗೂ ಗೋಡೆಯನ್ನು ವರ್ಲಿ ಕಲೆಯ ವಿಶೇಷ ಚಿತ್ರಗಳನ್ನು ಚಿತ್ರಿಸಲಾಗಿದೆ.

ಸಖಿ ಮತಗಟ್ಟೆ: ಪಟ್ಟಣದ ಕೆಳಗಲಪೇಟೆಯಲ್ಲಿರುವ ಮತಗಟ್ಟೆ ಸಂಖ್ಯೆ 67ರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ-4 ಅನ್ನು ಸಖಿ ಮತಗಟ್ಟೆಯಾಗಿಸಲಾಗಿದೆ. ಮತಗಟ್ಟೆಗೆ ಸಂಪೂರ್ಣ ಗುಲಾಬಿ ಬಣ್ಣ ಹಚ್ಚಿ ಮಹಿಳೆಯ ತೋರು ಬೆರಳನ್ನು ಹಣೆಯ ಸಿಂಧೂರದ ಭಾಗಕ್ಕೆ ಮತದಾನದ ಶಾಯಿ ಬರುವ ಹಾಗೆ ಚಿತ್ರ ಬಿಡಿಸಲಾಗಿದೆ. ಮತದಾನ ಪ್ರಜಾಪ್ರಭುತ್ವ ಗಟ್ಟಿಯಾಗುವ ಸಂಕೇತವನ್ನು ಸೂಚಿಸುವಂತಿದ್ದು, ಮತ ನೀಡಿ ಕರ್ತವ್ಯ ಪಾಲಿಸಿ, ಚುನಾವಣಾ ಪರ್ವ ದೇಶದ ಗರ್ವ, ಮತದಾನ ನಮ್ಮ ಹಕ್ಕು ಬರವಣಿಗೆಯ ಸಾಲುಗಳು ಮತದಾನದ ಮಹತ್ವವನ್ನು ಸಾರುತ್ತಿವೆ.

ವಿಶೇಷಚೇತನರ ಮತಗಟ್ಟೆ: ಪಟ್ಟಣದ ಕುಂಚಿಕೊರವರ ಓಣಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-3ರಲ್ಲಿ ಮತಗಟ್ಟೆ ಸಂಖ್ಯೆ-87ನ್ನು ವಿಶೇಷಚೇತನರ ಮತಗಟ್ಟೆ ತೆರೆಯಲಾಗಿದೆ. ಮತಗಟ್ಟೆಗೆ ಬಿಳಿ ಬಣ್ಣ ಹಚ್ಚಿ ವಿಶೇಷಚೇತನ ವ್ಯಕ್ತಿ ಗಾಲಿ ಕುರ್ಚಿ ಮೇಲೆ ಕಳಿತಿರುವ ಚಿತ್ರ, ಕೋಲು ಹಿಡಿದುಕೊಂಡು ನಿಂತಿರುವ ಚಿತ್ರ, ಮತದಾನ ಮಾಡುವ ಚಿತ್ರ ಬಿಡಿಸಲಾಗಿದ್ದು, ಎಲ್ಲರನ್ನು ಆಕರ್ಷಿಸುತ್ತಿವೆ. ಅಲ್ಲದೆ ಮತದಾನದ ಕುರಿತು ಜಾಗೃತಿ ಮೂಡಿಸುವ ಸಾಲುಗಳನ್ನು ಬರೆಯಲಾಗಿದೆ.

ಪಟ್ಟಣದಲ್ಲಿ ಸಖಿ ಮತಗಟ್ಟೆ ಹಾಗೂ ವಿಶೇಷಚೇತನರ ಮತಗಟ್ಟೆ ತೆರೆಯುವ ಮೂಲಕ ಮಹಿಳೆಯರು ಹಾಗೂ ವಿಶೇಷ ಚೇತನರಲ್ಲಿ ಮತದಾನದ ಜಾಗೃತಿ ಮೂಡಿಸಿ ಮತದಾನಕ್ಕೆ ಪ್ರೇರೇಪಿಸಲಾಗುತ್ತಿದೆ.
ಬಸವರಾಜ ಬಡಿಗೇರ, ಇಓ, ತಾಲ್ಲೂಕು ಪಂಚಾಯ್ತಿ ಗಜೇಂದ್ರಗಡ
ಗಜೇಂದ್ರಗಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4ರಲ್ಲಿ ತೆರೆದಿರುವ ಸಖಿ ಮತಗಟ್ಟೆಯನ್ನು ಬಣ್ಣದಲ್ಲಿ ಸಿಂಗರಿಸಿರುವುದು
ಗಜೇಂದ್ರಗಡದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ 4ರಲ್ಲಿ ತೆರೆದಿರುವ ಸಖಿ ಮತಗಟ್ಟೆಯನ್ನು ಬಣ್ಣದಲ್ಲಿ ಸಿಂಗರಿಸಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT