ಬರಿದಾಗುತ್ತಿದೆ ಹೊಗರಿ ಕೆರೆ; ಮೀನುಗಾರಿಕೆಗೂ ಬರೆ

7

ಬರಿದಾಗುತ್ತಿದೆ ಹೊಗರಿ ಕೆರೆ; ಮೀನುಗಾರಿಕೆಗೂ ಬರೆ

Published:
Updated:
Deccan Herald

ಗಜೇಂದ್ರಗಡ: ಕಳೆದೆರಡು ವರ್ಷಗಳಿಂದ ಸಮರ್ಪಕ ಮಳೆಯಾಗದ ಕಾರಣ ಸಮೀಪದ ನಾಗೇಂದ್ರಗಡದ ಹೊಗರಿ ಕೆರೆಯಲ್ಲಿ ನೀರು ಬತ್ತುತ್ತಾ ಬಂದಿದ್ದು, ಇಲ್ಲಿ ಲಕ್ಷಾಂತರ ಬಂಡವಾಳ ತೊಡಗಿಸಿ, ಮೀನುಗಾರಿಕೆ ಮಾಡುತ್ತಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಗಜೇಂದ್ರಗಡ ತಾಲ್ಲೂಕಿನಲ್ಲಿ ನಾಗೇಂದ್ರಗಡ, ಜಿಗೇರಿ, ಬೆಣಸಮಟ್ಟಿ, ನಾಗರಸಕೊಪ್ಪ, ಪಾರ್ವತಿಕೊಳ್ಳ ಹೀಗೆ ಒಟ್ಟು 5 ಬೃಹತ್ ಕೆರೆಗಳಿವೆ. ಇವುಗಳಲ್ಲಿ 85 ಎಕರೆ ವಿಸ್ತೀರ್ಣದ ನಾಗೇಂದ್ರಗಡದ ಹೊಗರಿ ಕೆರೆ ಎಂದೂ ಬತ್ತದ ಕೆರೆ ಎಂದೇ ಹೆಸರಾಗಿತ್ತು. ಆದರೆ, ಬರದಿಂದ ಕಳೆದ ಬೇಸಿಗೆಯಲ್ಲಿ ಈ ಕೆರೆ ಸಂಪೂರ್ಣವಾಗಿ ಬತ್ತಿಹೋಗಿತ್ತು. ಈ ಬಾರಿ ಮುಂಗಾರು ಆರಂಭದಲ್ಲಿ ಸುರಿದ ಮಳೆಯಿಂದ ಕೆರೆಗೆ ಸ್ವಲ್ಪ ಪ್ರಮಾಣದ ನೀರು ಬಂದಿತ್ತು.

ಈ ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಿರುವ ನಾಗೇಂದ್ರಗಡದ ಶಂಕರ ಬಾರಕೇರ ಎಂಬುವವರು ಉತ್ತಮ ಮಳೆಯಾಗಬಹುದು ಎಂಬ ಆಶಾಭಾವನೆಯಿಂದ ಮೀನು ಮರಿಗಳನ್ನು ಬಿತ್ತಿದ್ದರು. ಆದರೆ, ಜುಲೈ, ಆಗಸ್ಟ್‌ ತಿಂಗಳಲ್ಲಿ ಮಳೆಯಾಗದ ಕಾರಣ,ಕೆರೆಯ ನೀರು ಬತ್ತುತ್ತಾ ಬಂದಿದೆ. ಇರುವ ಅಲ್ಪ ನೀರಿನಲ್ಲೇ ಜೀವ ಉಳಿಸಿಕೊಳ್ಳಲು ಮೀನುಗಳು ಹೆಣಗುತ್ತಿವೆ.ಕೊಕ್ಕರೆ, ಮಿಂಚುಳ್ಳಿ, ಬಕ ಸೇರಿದಂತೆ ಹಕ್ಕಿಗಳು ಮೀನುಗಳನ್ನು ಒಂದೊಂದಾಗಿ ಹಿಡಿದು ತಿನ್ನುತ್ತಿವೆ.

ಬಂದಷ್ಟು ಲಾಭ ಬರಲಿ ಎಂದು ಕೆರೆಯಲ್ಲಿರುವ ಮೀನುಗಳನ್ನು ಹಿಡಿದು ಕೆರೆ ದಂಡೆ ಮೇಲೆಯೇ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಈ ಹಿಂದೆ ಕೆರೆಯಲ್ಲಿ ಸಾಕಷ್ಟು ನೀರು ಇದ್ದಾಗ ಮೀನುಗಿಗೆ ಆಹಾರ ಹಾಕುತ್ತಿದ್ದರು. ಇದರಿಂದ ಮೀನುಗಳು ಬಹುಬೇಗ ಬೆಳೆದು ಒಂದೊಂದು ಮೀನು ಸರಾಸರಿ ಒಂದೂವರೆ ಕೆ.ಜಿ ತೂಗುತ್ತಿದ್ದವು. ಆದರೆ, ಈಗ ನೀರು ಕಡಿಮೆ ಇರುವುದರಿಂದ ಮೀನುಗಳ ಆಹಾರ ಹಾಕಿದರೆ ಕೆರೆ ನೀರು ಕಲುಷಿತವಾಗುತ್ತವೆ ಎಂಬ ಉದ್ದೇಶದಿಂದ ಆಹಾರ ಹಾಕುತ್ತಿಲ್ಲ.

‘ಕಳೆದ 25 ವರ್ಷಗಳಿಂದ ಪ್ರತಿವರ್ಷ ₹12 ಸಾವಿರ ಜಿಲ್ಲಾಡಳಿತಕ್ಕೆ ಕಟ್ಟಿ ಈ ಕೆರೆಯನ್ನು ಗುತ್ತಿಗೆ ಪಡೆದು ಮೀನುಗಾರಿಕೆ ಮಾಡುತ್ತಿದ್ದೇವೆ. ಈ ವರ್ಷವೂ ₹50 ಸಾವಿರ ಖರ್ಚು ಮಾಡಿ ಹೊಸಪೇಟೆಯಿಂದ ಕಟ್ಲಾ, ಮಿರಗಲ್, ರೋಹು, ಗೌರಿ, ಪಾಪ್ಲೇಟ್, ಗ್ಲಾಸ್‌ಕಾರ್ಪ್ ತಳಿಯ 1 ಲಕ್ಷ ಮೀನಿನ ಮರಿಗಳನ್ನು ಬಿತ್ತಿದ್ದೆವು. ಆದರೆ, ಮಳೆ ಆಗದಿರುವುದರಿಂದ ಕೆರೆಯಲ್ಲಿ ನೀರು ಕಡಿಮೆಯಾಗಿ ಮೀನುಗಳೆಲ್ಲ ಹಕ್ಕಿಗಳಿಗೆ ಆಹಾರವಾಗುತ್ತಿವೆ’ ಎಂದು ಶಂಕರ ಬಾರಕೇರ ಸಂಕಷ್ಟ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !