ಗುರುವಾರ , ಡಿಸೆಂಬರ್ 3, 2020
18 °C
ಚಿಕ್ಕಹಂದಿಗೋಳದಲ್ಲಿ ವಿಶ್ವ ಆಹಾರ ದಿನಾಚರಣೆ

‘ಆಹಾರದಿಂದಲೇ ಪೌಷ್ಟಿಕಾಂಶ ಪಡೆಯಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ಮನೆಯಲ್ಲಿ ಪ್ರತಿನಿತ್ಯ ಸೇವಿಸುವ ಆಹಾರದಿಂದಲೇ ನಮ್ಮ ದೇಹಕ್ಕೆ ಅವಶ್ಯವಿರುವ ಪೋಷಕಾಂಶಗಳನ್ನು ಪಡೆಯಬೇಕೇ ವಿನಹ; ಔಷಧಿಗಳೇ ಮಾನವನ ಆಹಾರವಾಗಬಾರದು’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗೆರೆ ಹೇಳಿದರು.

ಇಲ್ಲಿಗೆ ಸಮೀಪದ ಚಿಕ್ಕಹಂದಿಗೋಳ ಗ್ರಾಮದಲ್ಲಿ ಆಯುಷ್ ಕ್ಷೇಮ ಕೇಂದ್ರದಲ್ಲಿ ಜಿಲ್ಲಾ ಆಯುಷ್ ಇಲಾಖೆ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತರಾಜ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಡೆದ ವಿಶ್ವ ಆಹಾರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಇಂದು ನಾವು ಸೇವಿಸುವ ಆಹಾರ ಕಲುಷಿತಗೊಂಡಿದೆ. ದುರಾಸೆಯಿಂದಾಗಿ ಕೃಷಿಯಲ್ಲಿ ಇಂದು ಕ್ರಿಮಿನಾಶಕಗಳು, ರಸಗೊಬ್ಬರಗಳ ಬಳಕೆ ಹೆಚ್ಚಾಗಿದೆ. ಉತ್ತಮ ಬೆಳೆ ಬೆಳೆಯುವ ಭರದಲ್ಲಿ ನಿಸ್ಸತ್ವ ಆಹಾರವನ್ನು ಸೇವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸಮಾಜದಲ್ಲಿ ರೋಗ ರುಜಿನಗಳ ಪ್ರಮಾಣ ಹೆಚ್ಚಾಗಿದೆ’ ಎಂದು ವಿಷಾದಿಸಿದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ ಮಾತನಾಡಿ, ‘ಮನುಷ್ಯ ಪ್ರತಿನಿತ್ಯ ವಿಷಪೂರಿತ ಆಹಾರವನ್ನು ಸೇವನೆ ಮಾಡುವ ಮೂಲಕ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾನೆ. ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ಜನರು ಇದಕ್ಕಾಗಿ ಹೆಚ್ಚಿನ ಹಣ ವ್ಯಯಿಸುವ ಅವಶ್ಯಕತೆ ಇಲ್ಲ. ಅಡುಗೆಮನೆಯಲ್ಲಿ ದೊರೆಯುವ ಅರಿಷಿಣ, ಜೀರಿಗೆ, ಹವೀಜ, ಶುಂಠಿ, ಹಿಪ್ಪಲಿ, ಮೆಣಸು ಸೇರಿದಂತೆ ಪ್ರತಿಯೊಂದು ವಸ್ತುವಿನಲ್ಲಿಯೂ ಔಷಧಿಯ ಗುಣಗಳಿವೆ. ಈ ವಸ್ತುಗಳನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ನಿರೋಗಿಗಳಾಗಬೇಕು’ ಎಂದು ಸಲಹೆ ನೀಡಿದರು.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಉಪನ್ಯಾಸಕಿ ಡಾ.ನಾಗವೇಣಿ ಮನೆಯ ತಾರಸಿ ಉದ್ಯಾನದ ಬಗ್ಗೆ ಉಪನ್ಯಾಸ ನೀಡಿದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಶಂಭುಲಿಂಗ, ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಸಂಜೀವ ನಾರಪ್ಪನವರ ಕೊರೊನಾ ಮುಂಜಾಗ್ರತೆಗಾಗಿ ಹೋಮಿಯೋಪಥಿ ಔಷಧಿಗಳನ್ನು ವಿತರಿಸಿ ಅವುಗಳನ್ನು ಉಪಯೋಗಿಸುವ ಬಗ್ಗೆ ವಿವರಿಸಿದರು.

ವಿವಿಯ ಆಹಾರ ವಿಭಾಗದ ಸಂಯೋಜಕಿ ಫಕೀರಮ್ಮ ಮುರುಗೋಡ, ಆಯುಷ್ ಇಲಾಖೆಯ ಡಾ.ಪರ್ವತಗೌಡ ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಸಾವಿತ್ರಿ, ನಮಿತಾ, ಡಾ.ಗೋಲಪ್ಪ ಇದ್ದರು. ಡಾ.ಕಮಲಾಕರ ಅರಳೆ ಸ್ವಾಗತಿಸಿ, ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.