ಗದಗ: ಜೋಳದ ರೊಟ್ಟಿ ತುಟ್ಟಿ...?

7
ಬಿಳಿಜೋಳ ಬಿತ್ತನೆ ಪ್ರದೇಶ ಕುಸಿತ; ಇಳುವರಿ ಕುಸಿತದಿಂದ ಬೆಲೆ ಏರಿಕೆ

ಗದಗ: ಜೋಳದ ರೊಟ್ಟಿ ತುಟ್ಟಿ...?

Published:
Updated:
Prajavani

ಗದಗ: ಜಿಲ್ಲೆಯ ರೋಣ ಮತ್ತು ನರಗುಂದ ತಾಲ್ಲೂಕು ಬಿಳಿ ಜೋಳಕ್ಕೆ ಹೆಸರುವಾಸಿ. ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ‘ಮಾಲ್ದಂಡಿ’ ತಳಿಯ (ವಿಜಯಪುರ ಬಿಳಿ ಜೋಳ) ಜೋಳ ಬೆಳೆಯುತ್ತಾರೆ. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ಬಿಳಿ ಜೋಳ ಬಿತ್ತನೆ ಪ್ರದೇಶ ಗಣನೀಯವಾಗಿ ಕುಸಿದಿದೆ. ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಭಾಗಗಳಲ್ಲೂ ಬಿಳಿಜೋಳ ಬಿತ್ತನೆ ಕಡಿಮೆಯಾಗಿದೆ. ಇದರ ನೇರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಜೋಳದ ದರದಲ್ಲಿ ಗಣನೀಯ ಏರಿಕೆಯಾಗಿದೆ.

ಕಳೆದ ಹಂಗಾಮು ಅವಧಿಯಲ್ಲಿ (ಮಾರ್ಚ್–ಎಪ್ರಿಲ್‌) ಬಿಳಿ ಜೋಳಕ್ಕೆ ಕ್ವಿಂಟಲ್‌ಗೆ ₹ 1,200ರಿಂದ ₹ 1,400ರವರೆಗೆ ದರ ಇತ್ತು. ಈಗ ಇದು ₹ 2,500ರಿಂದ ₹ 3 ಸಾವಿರದವರೆಗೆ ಏರಿಕೆ ಕಂಡಿದೆ. ಪ್ರತಿ ಕ್ವಿಂಟಲ್‌ ಜೋಳಕ್ಕೆ ₹ 1 ಸಾವಿರ ಹೆಚ್ಚಿರುವುದು ಗ್ರಾಹಕರಿಗೆ ತೀವ್ರ ಹೊರೆಯಾಗಿದೆ.

ಈ ಬಾರಿ ಹಿಂಗಾರಿನಲ್ಲಿ ಬಿತ್ತನೆಯಾಗಿರುವ ಜೋಳ ಕಟಾವು ಆಗಿ ಮಾರುಕಟ್ಟೆಗೆ ಪೂರೈಕೆಯಾಗಲು ಇನ್ನೂ ಎರಡು ತಿಂಗಳು ಕಳೆಯಬೇಕು. ಸದ್ಯ ಬೆಳೆ ಇಲ್ಲದ ಅವಧಿ. ಈ ಅವಧಿಯಲ್ಲಿ ವ್ಯಾಪಾರಿಗಳು ಸಂಗ್ರಹಿಸಿಟ್ಟ ಜೋಳವನ್ನು ಕ್ವಿಂಟಲ್‌ಗೆ ₹ 3 ಸಾವಿರದವರೆಗೆ ಮಾರಾಟ ಮಾಡುತ್ತಿದ್ದಾರೆ.

ಉತ್ತರ ಕರ್ನಾಟಕದ ಊಟ ಎಂದರೆ ರೊಟ್ಟಿ ಇರಲೇಬೇಕು. ಆದರೆ, ಕೆ. ಜಿಗೆ ₹ 15ರಿಂದ ₹ 20ಕ್ಕೆ ಸಿಗುತ್ತಿದ್ದ ಜೋಳದ ಬೆಲೆ ಸದ್ಯ ಮಾರುಕಟ್ಟೆಯಲ್ಲಿ ₹ 30ಕ್ಕೆ ಏರಿಕೆಯಾಗಿರುವುದು ಜನಸಾಮಾನ್ಯರ ನಿದ್ರೆಗೆಡಿಸಿದೆ. ಅದರಲ್ಲೂ ವಿಜಯಪುರ ಬಿಳಿ ಜೋಳ ಹೆಚ್ಚು ರುಚಿಕರ ಹಾಗೂ ಸ್ವಾದಿಷ್ಟ. ಆದ್ದರಿಂದಲೇ ಮಾರುಕಟ್ಟೆ ದರ ಉಳಿದ ಜೋಳಕ್ಕಿಂತಲೂ ಕ್ವಿಂಟಲ್‌ಗೆ ₹ 100 ಹೆಚ್ಚು ಇರುತ್ತದೆ.

ಶೇ 72ರಷ್ಟು ಮಾತ್ರ ಬಿತ್ತನೆ
ಈ ಬಾರಿ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 67,000 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ನಿಗದಿಪಡಿಸಿತ್ತು. ಆದರೆ, ಮಳೆ ಕೊರತೆಯಿಂದ ಶೇ 72ರಷ್ಟು ಅಂದರೆ 48,336 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆಯಾಗಿದೆ.

ಕೃಷಿ ಹೊಂಡದಲ್ಲಿ ಸಂಗ್ರಹವಾದ ನೀರನ್ನು ಬಳಸಿಕೊಂಡು ಕೆಲವೆಡೆ ರೈತರು ಬೆಳೆ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ‘ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಇಳವರಿ ಶೇ 70ರಿಂದ ಶೇ 75ರಷ್ಟು ಕುಸಿಯುವ ಸಾಧ್ಯತೆ ಇದೆ’ ಎನ್ನುತ್ತಾರೆ ರೈತರು.

*
ಮಳೆ ಕೊರತೆ ಜತೆಗೆ ಜೋಳಕ್ಕೆ ಲದ್ದಿಹುಳ ಕಾಟ ಕಾಣಿಕೊಂಡಿದೆ.ತೆನೆಯಲ್ಲಿ ಸರಿಯಾಗಿ ಕಾಳು ಕಟ್ಟಿಲ್ಲ.ಕನಿಷ್ಠ ಜಾನುವಾರುಗಳ ಮೇವಿಗಾದರೂ ಆಗುತ್ತದೆ ಎಂದು ಬೆಳೆಯುತ್ತಿದ್ದೇವೆ‌.
-ಮಹಾಂತೇಶ ಜಾವೂರ, ರೈತ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !