ಭಾನುವಾರ, ಅಕ್ಟೋಬರ್ 20, 2019
21 °C

ಅ.9ರಂದು ತೋಂಟದ ಸಿದ್ದಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ

Published:
Updated:
Prajavani

ಗದಗ: ‘ಲಿಂಗೈಕ್ಯ ತೋಂಟದ ಸಿದ್ಧಲಿಂಗ ಶ್ರೀಗಳ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಅ.9ರಂದು ತೋಂಟ ದಾರ್ಯ ಮಠದಲ್ಲಿ ತೋಂಟದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮಠದ ಆವರಣದಲ್ಲಿ ನಿರ್ಮಾಣಗೊಂಡಿರುವ ಅನುಭವ ಮಂಟಪವನ್ನು ಅಂದು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದ ಸ್ವಾಮೀಜಿ ಲೋಕಾರ್ಪಣೆ ಮಾಡುವರು. ಅಂತರರಾಷ್ಟ್ರೀಯ ಶಿಲ್ಪಿ ಶ್ರೀಧರ ಮೂರ್ತಿ ಅವರು ಕೆತ್ತಿರುವ, ತೋಂಟದ ಶ್ರೀಗಳ ಪುತ್ಥಳಿಯನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅನಾವರಣ ಮಾಡಲಿದ್ದಾರೆ’ ಎಂದರು.

ತೋಂಟದ ಶ್ರೀಗಳ ಕುರಿತು ರಚನೆಗೊಂಡಿರುವ ‘ತೋಂಟದ ಬಸವಣ್ಣ, ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ, ‘ಜಗದ್ವಂದ ಸೌಹಾರ್ದ ಗುರು, ಕ್ರಾಂತಿಮಾತೆ ಅಕ್ಕನಾಗಮ್ಮ ಗ್ರಂಥಗಳನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಬಿಡುಗಡೆ ಮಾಡುವರು. ಬಸವ ಟಿವಿ ನಿರ್ಮಿಸಿರುವ ಶ್ರೀಗಳ ಕುರಿತ ಸಾಕ್ಷ್ಯಚಿತ್ರಗಳನ್ನು ಸಚಿವ ಸಿ.ಸಿ ಪಾಟೀಲ ಹಾಗೂ ಶಾಸಕ ಎಚ್‌.ಕೆ ಪಾಟೀಲ ಬಿಡುಗಡೆ ಮಾಡುವರು’ ಎಂದರು.

‘ಬಸವ ಜಯಮೃತ್ಯುಂಜಯ ಸ್ವಾಮೀಜಿ, ಇಳಕಲ್‌ ವಿಜಯ ಮಹಾಂತೇಶ್ವರ ಮಠದ ಗುರಮಹಾಂತ ಸ್ವಾಮೀಜಿ, ಬೈರನಟ್ಟಿ ಶಾಂತಲಿಂಗ ಸ್ವಾಮೀಜಿ, ನಿಜಗುಣಪ್ರಭು ಸ್ವಾಮೀಜಿ ಭಾಗವಹಿಸುವರು’ ಎಂದು ಅವರು ಹೇಳಿದರು.

ಮಲ್ಲಿಕಾರ್ಜುನ ಸಿ. ಐಲಿ, ಎಂ.ಬಿ ನಿಂಬಣ್ಣವರ, ಚೆನ್ನಯ್ಯ ಹೀರೆಮಠ, ಶೇಖಣ್ಣ ಕವಳಿಕಾಯಿ ಇದ್ದರು.

Post Comments (+)