ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆ: ಕೃಷಿ ಕ್ಷೇತ್ರದಲ್ಲೂ ಕಾಣದ ಮುನ್ನಡೆ

ಕೃಷಿ ಕ್ಷೇತ್ರದಲ್ಲಿ ಏರಿಳಿತ, ಸಾಲದ ಸುಳಿಯಲ್ಲಿ ರೈತ: ಯುವಕರಲ್ಲಿ ಹೆಚ್ಚುತ್ತಿರುವ ನಿರಾಸಕ್ತಿ
Last Updated 6 ಆಗಸ್ಟ್ 2022, 4:29 IST
ಅಕ್ಷರ ಗಾತ್ರ

ಗದಗ: ಮುದ್ರಣ ಕಾಶಿ ಎನಿಸಿಕೊಂಡಿರುವ ಗದಗ ಕೃಷಿ ಪ್ರಧಾನ ಜಿಲ್ಲೆ. ಆದರೆ, ಜಿಲ್ಲೆ ಆಗಿ 25 ವರ್ಷಗಳು ಪೂರ್ಣಗೊಳ್ಳುತ್ತಿರುವ ಹೊತ್ತಿನಲ್ಲೂ ಕೃಷಿ ಕ್ಷೇತ್ರದಲ್ಲಿ ಅಪೂರ್ವ ಬದಲಾವಣೆಗಳೇನೂ ಆಗಿಲ್ಲ. ರೈತರ ಜೀವನಮಟ್ಟದಲ್ಲೂ ಗುಣಾತ್ಮಕ ಬದಲಾವಣೆಗಳು ಕಂಡುಬಂದಿಲ್ಲ.

ಜಿಲ್ಲೆಯ ಭೌಗೋಳಿಕ ಕ್ಷೇತ್ರ 4.65 ಲಕ್ಷ ಹೆಕ್ಟೇರ್‌ನಷ್ಟಿದ್ದು, ಅದರಲ್ಲಿ 3.90 ಲಕ್ಷ ಹೆಕ್ಟೇರ್‌ ಸಾಗುವಳಿಗೆ ಯೋಗ್ಯ
ವಾಗಿದೆ. ಜಿಲ್ಲೆಯಲ್ಲಿ ಹೆಸರು, ಶೇಂಗಾ, ಹತ್ತಿ, ಸೂರ್ಯಕಾಂತಿ, ಜೋಳವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಕುಗ್ಗುತ್ತಿರುವ ಕೃಷಿಯ ಮೇಲಿನ ಆಸಕ್ತಿ, ಪ್ರಾಕೃತಿಕ ವಿಕೋಪ, ಭ್ರಷ್ಟಾಚಾರ, ಸರ್ಕಾರದ ಉಚಿತ ಭಾಗ್ಯಗಳು, ಬೆಲೆಯಲ್ಲಿನ ಏರಿಳಿತ ಮೊದಲಾದ ಅಂಶಗಳು ಕೃಷಿಯ ಹಿನ್ನಡೆಗೆ ಪ್ರಮುಖ ಕಾರಣ ಎನ್ನುತ್ತಾರೆ ಪರಿಣತರು.

‘ಆಳುವ ಸರ್ಕಾರಗಳಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕರ್ನಾಟಕದಲ್ಲಷ್ಟೇ ಅಲ್ಲದೇ ಇಡೀ ದೇಶದಲ್ಲೇ ಈ ಪರಿಸ್ಥಿತಿ ಇದೆ. ಮತಗಳಿಕೆಗಾಗಿ ಉಚಿತ ಭಾಗ್ಯಗಳನ್ನು ಪ್ರಕಟಿಸುವ ಮೂಲಕ ದುಡಿದು ತಿನ್ನಬೇಕು ಎಂಬ ಛಲವನ್ನು ಜನಪ್ರತಿನಿಧಿಗಳು ಜನರಿಂದ ಕಸಿಯುತ್ತಿದ್ದಾರೆ. ಕುಳಿತು ಉಣ್ಣುವ ಆಮಿಷ ಒಡ್ಡುತ್ತಿದ್ದಾರೆ. ಬಡತನ ಇದೆ. ಕೆಲಸದ ಅವಶ್ಯಕತೆಯೂ ಇದೆ. ಆದರೂ ಕೃಷಿ ಕೆಲಸಕ್ಕೆ ಜನರು ಸಿಗುತ್ತಿಲ್ಲ. ಯಾಂತ್ರೀಕರಣದ ಹೆಸರಿನಲ್ಲಿ ಜನರು ಸೋಮಾರಿಗಳಾಗುತ್ತಿದ್ದಾರೆ. ಸಾಲಗಾರರ ಸಂಖ್ಯೆ ಹೆಚ್ಚುತ್ತಿದೆ. ಹೊಲಕ್ಕೂ ಬೈಕ್‌ನಲ್ಲೇ ಅಡ್ಡಾಡುತ್ತಾರೆ. ಉಳಲು ಟ್ರ್ಯಾಕ್ಟರ್‌ ಬಳಸುತ್ತಾರೆ. ಇದು ನಾವು ಪಶು ಸಂಪತ್ತನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ಸೂಚಿಸುತ್ತದೆ. ಇದು ದೊಡ್ಡ ಆಘಾತ’ ಎನ್ನುತ್ತಾರೆ ಮಾಜಿ ಸಚಿವ ಎಸ್‌.ಎಸ್‌.ಪಾಟೀಲ.

‘ಗದಗ ಜಿಲ್ಲೆಯಷ್ಟೇ ಅಲ್ಲದೇ ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳು ಪ್ರಗತಿಯಲ್ಲಿ ಹಿಂದುಳಿದಿವೆ. ಜಿಲ್ಲೆಯಾದ ನಂತರವೂ ಗದಗ ತುಂಬ ಹಿಂದುಳಿದಿದೆ ಅಂತ ಹೇಳಲು ಸಾಧ್ಯವಿಲ್ಲ. ಆದರೆ, ಆಗುವಷ್ಟು ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂಬ ಕೊರಗು ಇದ್ದೇ ಇದೆ. ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ಆಹಾರದ ಕೊರತೆ ಎದುರಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಅವರು.

ದಲ್ಲಾಳಿಗಳಿಂದ ರೈತರು, ಬಿಡಿ ವ್ಯಾಪಾರಿಗಳಿಂದ ಗ್ರಾಹಕರು ಶೋಷಣೆಗೆ ಒಳಗಾಗುತ್ತಿರುವುದು ಹಿಂದಿನಿಂದಲೂ ನಡದೇ ಇದೆ. ಅದು ಈಗಲೂ ಮುಂದುವರಿದಿದೆ. ಈ ಸರಪಳಿ ತುಂಡರಿಸಿ ರೈತ ಮತ್ತು ಗ್ರಾಹಕರ ನಡುವೆ ಸಂಪರ್ಕ ಬೆಸೆಯುವ ರೈತ ಉತ್ಪಾದಕ ಕಂಪನಿಗಳು ಹೆಚ್ಚಬೇಕಿದೆ. ಜಿಲ್ಲೆಯಲ್ಲಿ ಎಫ್‌ಪಿಒಗಳ ಸಂಖ್ಯೆ ಹೆಚ್ಚುತ್ತಿವೆಯಾದರೂ ಅದರ ಲಾಭ ರೈತ ಮತ್ತು ಗ್ರಾಹಕನಿಗೆ ಪರಿಣಾಮಕಾರಿಯಾಗಿ ಸಿಗುತ್ತಿಲ್ಲ.

ಹತ್ತಿ ಮತ್ತು ಶೇಂಗಾ ಯಥೇಚ್ಛವಾಗಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕಾಟನ್‌ ಮತ್ತು ಆಯಿಲ್‌ ಮಿಲ್‌ಗಳ ಸಂಖ್ಯೆ ಹೆಚ್ಚಿದ್ದವು. ಆದರೆ, ಅವುಗಳು ಈಗ ಬಹುತೇಕ ಬಂದ್‌ ಆಗಿವೆ. ರೈತರು ಬೆಳೆಯುವ ಬೆಳೆಗಳ ಮೌಲ್ಯವರ್ಧನೆಯಾದರೆ ಮಾತ್ರ ಅವರ ಬದುಕು ಸುಧಾರಿಸುತ್ತದೆ. ಇಂತಹ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆಯಾದರೂ ಅದರ ಪ್ರಮಾಣ ಇನ್ನೂ ದೊಡ್ಡ ಮಟ್ಟದಲ್ಲಿ ಹೆಚ್ಚಬೇಕಿದೆ ಎಂಬುದು ಪ್ರಗತಿಪರ ರೈತರ ಅಭಿಮತವಾಗಿದೆ.

ಸುಧಾರಣೆಯತ್ತ ಕೃಷಿ ಕ್ಷೇತ್ರ...

ಜಿಲ್ಲೆಯ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಗುಣಾತ್ಮಕ ಬದಲಾವಣೆಗಳು ಆಗಿವೆ. ರೈತರ ಬದುಕು ಕೂಡ ಸುಧಾರಿಸುವ ನಿಟ್ಟಿನಲ್ಲಿ ಮುಂದುವರಿದಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ.

‘ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿನಲ್ಲಿ ಪ್ರಗತಿಯಾಗಿದೆ. ಸಾವಯವ ಕೃಷಿಕರ ಸಂಖ್ಯೆ ಹೆಚ್ಚಿದೆ. ಪಿಎಂ ಕಿಸಾನ್‌, ಕಿಸಾನ್‌ ಮಾನ್‌ಧನ್‌, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ ರೈತರಿಗೆ ಸಾಕಷ್ಟು ಅನುಕೂಲ ಆಗುತ್ತಿದೆ. ಪ್ರಾಕೃತಿಕ ವಿಕೋಪದಿಂದ ಆದ ಬೆಳೆಹಾನಿ ಪರಿಹಾರವೂ ಸಿಗುತ್ತಿದೆ. ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿ ಪರಿಹಾರ ಸಿಗುತ್ತಿದೆ’ ಎನ್ನುತ್ತಾರೆ ಅವರು.

‘ರೈತರು ತಾವು ಬೆಳೆದ ಬೆಳೆಯನ್ನು ನೇರವಾಗಿ ಮಾರಾಟ ಮಾಡುವುದಕ್ಕಿಂತಲೂ ಅದನ್ನು ಮೌಲ್ಯವರ್ಧನೆಗೊಳಿಸಿದರೆ ಮೂರು ಪಟ್ಟು ಹೆಚ್ಚಿನ ಹಣ ಸಿಗುತ್ತದೆ. ಈ ನಿಟ್ಟಿನಲ್ಲಿ ಹೋಬಳಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲೂ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸಾಕಷ್ಟು ಎಫ್‌ಪಿಒಗಳಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT