ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರುಕಾಳು ಮಾರಾಟಕ್ಕೆ ನೋಂದಣಿ ಆರಂಭ

ತಡವಾಗಿ ಆರಂಭವಾದ ಖರೀದಿ ಕೇಂದ್ರ; ರೈತರಿಗಿಂತ ವ್ಯಾಪಾರಿಗಳಿಗೇ ಲಾಭ
Last Updated 31 ಆಗಸ್ಟ್ 2018, 17:35 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಗದಗ, ನರಗುಂದ ಮತ್ತು ಶಿರಹಟ್ಟಿಯಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಹೆಸರುಕಾಳು ಖರೀದಿ ಕೇಂದ್ರ ಶುಕ್ರವಾರದಿಂದ ಆರಂಭಗೊಂಡಿದೆ. ಆದರೆ, ಮೊದಲ ದಿನ ಈ ಕೇಂದ್ರಗಳಲ್ಲಿ ಯಾವುದೇ ಖರೀದಿ ನಡೆಯಲಿಲ್ಲ. ಪ್ರಾರಂಭದಲ್ಲಿ ರೈತರ ನೋಂದಣಿಗೆ ಮಾತ್ರ ಅವಕಾಶ ನೀಡಲಾಗಿದೆ.

‘ಹೋಬಳಿ ಕೇಂದ್ರಗಳೂ ಸೇರಿದಂತೆ ಜಿಲ್ಲೆಯ 15ರಿಂದ 20 ಕಡೆ ಶೀಘ್ರದಲ್ಲೇ ಖರೀದಿ ಕೇಂದ್ರಗಳು ಪ್ರಾರಂಭವಾಗಲಿವೆ. ಹೆಸರು ಮಾರಾಟ ಮಾಡಲು ಬಯಸುವ ರೈತರು ಈ ಕೇಂದ್ರಗಳಲ್ಲಿ ಸೆ.9ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಆಧಾರ್‌ ಕಾರ್ಡ್‌, ಪಹಣಿ ಪತ್ರ ಮತ್ತು ಕಂದಾಯ ಇಲಾಖೆಯಿಂದ ಪಡೆದ ಬೆಳೆ ದೃಢೀಕರಣ ಪತ್ರ ಹಾಜರುಪಡಿಸುವುದು ಕಡ್ಡಾಯ’ ಎಂದು ಖರೀದಿ ಏಜೆನ್ಸಿಯಾಗಿರುವ ಸಹಕಾರ ಮಹಾಮಂಡಳದ ಅಧಿಕಾರಿಗಳು ತಿಳಿಸಿದರು.

ಬೆಲೆ ಏರಿಕೆ: ಎಂಎಸ್‌ಪಿ ಖರೀದಿ ಕೇಂದ್ರ ಪ್ರಾರಂಭವಾದ ಬೆನ್ನಲ್ಲೇ, ಮುಕ್ತ ಮಾರುಕಟ್ಟೆಯಲ್ಲಿ ಹೆಸರು ಕಾಳಿನ ಬೆಲೆಯಲ್ಲಿ ತುಸು ಏರಿಕೆಯಾಗಿದೆ.
ಶುಕ್ರವಾರ ರಾಜ್ಯದ ಬೀದರ್‌, ಗದಗ, ಕಲಬುರ್ಗಿ, ರೋಣ, ಶಹಾಪುರ, ಯಾದಗಿರಿ ಎಪಿಎಂಸಿ ಮಾರುಕಟ್ಟೆಗೆ ಒಟ್ಟು 11,393 ಕ್ವಿಂಟಲ್‌ ಹೆಸರು ಆವಕವಾಗಿದ್ದು, ವರ್ತಕರು ರಫ್ತು ಗುಣಮಟ್ಟದ ಹೆಸರು ಕಾಳನ್ನು ಕ್ವಿಂಟಲ್‌ಗೆ ಗರಿಷ್ಠ ₹ 6,500ರಿಂದ ₹7 ಸಾವಿರದವರೆಗೆ ದರ ನೀಡಿ ಖರೀದಿಸಿದರು.

ರಾಜ್ಯದಲ್ಲೇ ಹೆಸರುಕಾಳಿನ ಮುಂಚೂಣಿ ಮಾರುಕಟ್ಟೆಯಾಗಿರುವ ಗದಗ ಎಪಿಎಂಸಿಗೆ 3085 ಕ್ವಿಂಟಲ್‌ ಹೆಸರು ಆವಕವಾಗಿದ್ದು, ಕನಿಷ್ಠ ₹2589ರಿಂದ ಗರಿಷ್ಠ ₹6159 ದರ ಲಭಿಸಿದೆ. ಕಳೆದ 15 ದಿನಗಳಿಂದ ಹೆಸರು ಕಾಳಿನ ‘ಮಾದರಿ ಬೆಲೆ’ ಇಲ್ಲಿ ಕ್ವಿಂಟಲ್‌ಗೆ ಸರಾಸರಿ ₹ 4500ಕ್ಕೆ ಕುಸಿತ ಕಂಡಿತ್ತು. ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾದ ಬೆನ್ನಲ್ಲೇ, ಎಪಿಎಂಸಿ ವರ್ತಕರು ಈ ಮಾದರಿ ಬೆಲೆಯನ್ನು ಕ್ವಿಂಟಲ್‌ಗೆ ಸರಾಸರಿ ₹200 ಹೆಚ್ಚಿಸಿದ್ದಾರೆ.

ಕಲಬುರ್ಗಿ ಮಾರುಕಟ್ಟೆಗೆ ಶುಕ್ರವಾರ ಒಂದೇ ದಿನದಲ್ಲಿ 6 ಸಾವಿರ ಕ್ವಿಂಟ್‌ ಹೆಸರು ಆವಕವಾಗಿದ್ದು, ರೈತರಿಗೆ ಕನಿಷ್ಠ ₹4 ಸಾವಿರದಿಂದ ₹4,800 ಧಾರಣೆ ಲಭಿಸಿತು. ಬೀದರ್‌ನಲ್ಲಿ ಕನಿಷ್ಠ ₹3,750ರಿಂದ ₹4,950ರವರೆಗೆ ಮಾರಾಟವಾಯಿತು.

ಆಗಸ್ಟ್‌ನಲ್ಲಿ 1.20 ಲಕ್ಷ ಕ್ವಿಂಟಲ್‌ ಹೆಸರು ಆವಕ
ಗದಗ ಎಪಿಎಂಸಿಗೆ ಆಗಸ್ಟ್‌ ತಿಂಗಳಲ್ಲಿ (ಆ.1ರಿಂದ 31) ಒಟ್ಟು 1,20,517 ಕ್ವಿಂಟಲ್‌ ಹೆಸರು ಆವಕವಾಗಿದೆ. ರೈತರಿಗೆ ಕ್ವಿಂಟಲ್‌ಗೆ ಸರಾಸರಿ ₹4940 ಸರ ಲಭಿಸಿದೆ. ಆ.2ರಂದು ಕ್ವಿಂಟಲ್‌ಗೆ ₹6570 ದರ ಲಭಿಸಿದ್ದೇ, ಈ ವರ್ಷದ ಇದುವರೆಗಿನ ಗರಿಷ್ಠ ಧಾರಣೆ. ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಮತ್ತು ಹಳದಿ ರೋಗದಿಂದ ಹೆಸರಿನ ಇಳುವರಿ ಗಣನೀಯವಾಗಿ ಕುಸಿದಿತ್ತು. ಕೇವಲ 34,255 ಕ್ವಿಂಟಲ್‌ ಹೆಸರು ಆವಕವಾಗಿತ್ತು. ರೈತರಿಗೆ ಗರಿಷ್ಠ ₹5,900 ಬೆಲೆ ಲಭಿಸಿತ್ತು.

ಹೆಚ್ಚಿನ ರೈತರಿಗೆ ಲಾಭ ಇಲ್ಲ..?
ಈ ಬಾರಿ ಜಿಲ್ಲೆಯಲ್ಲಿ ಮೇ ತಿಂಗಳಲ್ಲೇ ಮಳೆ ಲಭಿಸಿದ್ದರಿಂದ ರೈತರು ಮುಂಗಾರು ಪೂರ್ವದಲ್ಲೇ ಹೆಸರು ಬಿತ್ತನೆ ಮಾಡಿದ್ದರು. ಹೀಗಾಗಿ ಬೆಳೆಯೂ ಬೇಗ ಕಟಾವಿಗೆ ಬಂತು. ಜಿಲ್ಲೆಯ ಬಹುತೇಕ ರೈತರು ಈಗಾಗಲೇ ಹೆಸರು ಮಾರಾಟ ಮಾಡಿದ್ದಾರೆ. ಹೀಗಾಗಿ ಖರೀದಿ ಕೇಂದ್ರ ಆರಂಭಗೊಂಡು, ಕ್ವಿಂಟಲ್‌ಗೆ ₹6,975‘ಎಂಎಸ್‌ಪಿ’ ಇದ್ದರೂ, ಇದರ ಪ್ರಯೋಜನ ಹೆಚ್ಚಿನ ರೈತರಿಗೆ ಲಭಿಸುವುದಿಲ್ಲ. 'ಖರೀದಿ ಕೇಂದ್ರ ಪ್ರಾರಂಭಿಸುವುದು ವಿಳಂಬವಾದಷ್ಟು ವ್ಯಾಪಾರಿಗಳಿಗೆ ಲಾಭ. ಹೀಗಾಗಿ ವರ್ತಕರ ಲಾಬಿ ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿತ್ತು. ಹೆಸರಿನ ಹಂಗಾಮು ಮುಗಿಯುವ ಹೊತ್ತಿಗೆ ಖರೀದಿ ಕೇಂದ್ರ ಆರಂಭಗೊಂಡಿದೆ. ಇದು ಆಗಸ್ಟ್‌ ತಿಂಗಳ ಆರಂಭದಲ್ಲೇ ಆಗಿದ್ದರೆ ರೈತರಿಗೆ ಪ್ರಯೋಜನವಾಗುತ್ತಿತ್ತು' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೃಷಿ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಸದ್ಯ ನರಗುಂದ, ಗದಗ, ಶಿರಹಟ್ಟಿಯಲ್ಲಿ ಖರೀದಿ ಕೇಂದ್ರ ತೆರೆದು, ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ.ಜಿಲ್ಲೆಯ ಇನ್ನಷ್ಟು ಸ್ಥಳಗಳಲ್ಲಿ ಶೀಘ್ರ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು
ಶ್ರೀಕಾಂತ್‌, ಜಿಲ್ಲಾ ವ್ಯವಸ್ಥಾಪಕ, ಸಹಕಾರ ಮಹಾಮಂಡಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT