ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಯಿಂದ ರಾಷ್ಟ್ರೀಯ ಸಂಪತ್ತು ಮಾರಾಟ: ಎಚ್‌.ಕೆ.ಪಾಟೀಲ ವಾಗ್ದಾಳಿ

Last Updated 29 ಆಗಸ್ಟ್ 2021, 2:59 IST
ಅಕ್ಷರ ಗಾತ್ರ

ಗದಗ: ‘ಎಪ್ಪತ್ತು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್‌ ಸರ್ಕಾರ ಸೃಷ್ಟಿಸಿದ ರಾಷ್ಟ್ರೀಯ ಸಂಪತ್ತನ್ನು ನಗದೀಕರಣ (ನ್ಯಾಷನಲ್‌ ಮಾನಿಟೈಸೇಷನ್‌ ಪೈಪ್‌ಲೈನ್‌) ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾರಾಟ ಮಾಡಲು ಹೊರಟಿದ್ದಾರೆ’ ಎಂದು ಶಾಸಕ ಎಚ್‌.ಕೆ.ಪಾಟೀಲ ಆರೋಪಿಸಿದರು.

ಶನಿವಾರ ಗದುಗಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ನವರತ್ನಗಳು ಎಂದು ಕರೆಯಿಸಿಕೊಳ್ಳುವ ರಾಷ್ಟ್ರೀಯ ಹೆದ್ದಾರಿ, ಬಂದರು, ವಿಮಾನನಿಲ್ದಾಣಗಳು ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳನ್ನು ಮೋದಿ ಅವರು, ಹಮ್‌ ದೋ; ಹಮಾರಾ ದೋ ಕಂಪನಿಗೆ ಮಾರಾಟ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ಭವಿಷ್ಯದ ಜನತೆಗೆ ಭದ್ರತೆ ಕಲ್ಪಿಸುತ್ತಿದ್ದ ರಾಷ್ಟ್ರೀಯ ಸಂಪತ್ತೆಲ್ಲವೂ ಇಬ್ಬರ ಪಾಲಾಗುತ್ತಿರು ವುದರ ವಿರುದ್ಧ ಯುವಜನತೆ ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.

‘ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಕೇಂದ್ರ ಸರ್ಕಾರ ಅತಿ ಕಡಿಮೆ ಷೇರುಗಳನ್ನು ಹೊಂದಿರುವ ಕಂಪನಿಗಳನ್ನು ಖಾಸಗೀಕರಣ ಮಾಡುವ ಉದ್ದೇಶವನ್ನಷ್ಟೇ ಹೊಂದಿದ್ದರು. ಆದರೆ, ಪ್ರಧಾನಿ ಮೋದಿ ಅತಿ ಹೆಚ್ಚು ಷೇರು ಹೊಂದಿರುವ ರೈಲ್ವೆ, ವಿಮಾನ ನಿಲ್ದಾಣಗಳು, ಗ್ಯಾಸ್‌ ಪೈಪ್‌ ಲೈನ್‌, ಟೆಲಿಕಾಂ ಸಂಸ್ಥೆಗಳು, ವಿದ್ಯುತ್‌ ಉತ್ಪಾದನಾ ಕೇಂದ್ರಗಳೆಲ್ಲವನ್ನೂ ಖಾಸಗೀಕರಣ ಮಾಡುವ ಮೂಲಕ ದೇಶದ ಜನರಿಗೆ ದ್ರೋಹ ಮಾಡಿದ್ದಾರೆ’ ಎಂದು ದೂರಿದರು.

‘ಎಪ್ಪತ್ತು ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ಸೃಷ್ಟಿಸಿದ್ದ ಸಂಪತ್ತೆಲ್ಲವನ್ನೂ ಪ್ರಧಾನಿ ಮೋದಿ 40 ವರ್ಷಗಳ ಅವಧಿಗೆ ಭೋಗ್ಯಕ್ಕೆ ಕೊಟ್ಟಿದ್ದಾರೆ. ಇದರಿಂದ ಸರ್ಕಾರಕ್ಕೆ ₹6 ಲಕ್ಷ ಕೋಟಿಗಳಷ್ಟೇ ಆದಾಯ ಬರಲಿದೆ. ಆದರೆ, ಇದರ ಪರಿಣಾಮ ಮುಂದಿನ ದಿನಗಳಲ್ಲಿ ಭೀಕರವಾಗಿ ಕಾಣಿಸಿಕೊಳ್ಳಲಿದೆ. ದೇಶದಲ್ಲಿ ಯುವಜನತೆಗೆ ಉದ್ಯೋಗ ಕಡಿತ ಆಗಲಿದೆ. ಕೃಷಿ ಉತ್ಪನ್ನಗಳನ್ನು ದಾಸ್ತಾನು ಮಾಡುವ ಉಗ್ರಾಣಗಳ ಮಾರಾಟ ಮಾಡಿರುವುದು ದೇಶದ ಇತಿಹಾಸದಲ್ಲೇ ಇಲ್ಲ. ಮೋದಿ ಅವರು ಉಗ್ರಾಣಗಳ ಮಾರಾಟ ಮಾಡುವ ಮೂಲಕ ದೇಶದ ರೈತರಿಗೂ ಅನ್ಯಾಯ ಮಾಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT