ಗ್ರಾಮ ಪಂಚಾಯ್ತಿ ನೌಕರನ ಹಾಕಿ ಪ್ರೀತಿ

ಮಂಗಳವಾರ, ಮಾರ್ಚ್ 26, 2019
26 °C

ಗ್ರಾಮ ಪಂಚಾಯ್ತಿ ನೌಕರನ ಹಾಕಿ ಪ್ರೀತಿ

Published:
Updated:
Prajavani

ಮುಂಡರಗಿ: ತಾಲ್ಲೂಕಿನ ಹಿರೇವಡ್ಡಟ್ಟಿ ಗ್ರಾಮ ಪಂಚಾಯ್ತಿಯಲ್ಲಿ ಕಿರಿಯ ಲೆಕ್ಕ ಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿರುವ ವಸಂತ ಗೋಕಾಕ ಎಂಬ ಯುವ ಹಾಕಿ ಕ್ರೀಡಾಪಟು ನೌಕರಿಗೆ ನೀಡಿದಷ್ಟೆ ಮಹತ್ವವನ್ನು ಆಟೋಟಕ್ಕೂ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಮೂಲತಃ ಗದುಗಿನ ಗಾಂಧಿ ನಗರದ ನಿವಾಸಿ ವಸಂತ ಅವರು ಕಾಲೇಜು ದಿನಗಳಿಂದಲೂ ಹಾಕಿ ಆಟದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಗದುಗಿನ ಹನುಮಾನ ಬ್ಲೆಸಿಂಗ್ ಸ್ಪೋಟ್ಸ್ ಕ್ಲಬ್ ಮೂಲಕ ಹಾಕಿ ಕ್ಷೇತ್ರಕ್ಕೆ ಪ್ರವೇಶಿಸಿ, ಯಶಸ್ಸು ಸಾಧಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈಗಾಗಲೇ ಮೂರು ಬಾರಿ ಹಾಕಿ ಬ್ಲೂ ಆಗಿ ಆಯ್ಕೆಯಾಗಿರುವ ವಸಂತ ಅವರು ಹಲವಾರು ರಾಜ್ಯ ಹಾಗೂ ಅಂತರಾಜ್ಯಗಳಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ಅಖಿಲ ಭಾರತ ಹಾಕಿ ಕ್ರೀಡಾ ತಂಡಕ್ಕೆ ಈಚೆಗೆ ರಾಜ್ಯದ 30ಜಿಲ್ಲೆಗಳಿಂದ ಕ್ರೀಡಾ ಪಟುಗಳನ್ನು ಆಯ್ಕೆ ಮಾಡಲಾಯಿತು. ಹಾಕಿ ಆಟದಲ್ಲಿರುವ ವಸಂತ ಅವರ ಬದ್ಧತೆ, ಕ್ರೀಡಾಸಕ್ತಿ, ಅವರ ತಂತ್ರಗಾರಿಕೆ, ಕ್ರೀಡಾ ಮನೋಭಾವ ಮೊದಲಾದವುಗಳನ್ನು ಗಮನಿಸಿದ ಸರ್ಕಾರವು ಅವರನ್ನು ಹಾಕಿ ತಂಡಕ್ಕೆ ಆಯ್ಕೆ ಮಾಡಿತು.

ಬಾಲ್ಯದಿಂದಲೂ ಹಾಕಿ ಆಟದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ವಸಂತ ಅವರು ಹಾಕಿಯನ್ನು ಅವರ ದೈನಂದಿನ ದಿನಚರಿಯನ್ನಾಗಿ ಮಾಡಿಕೊಂಡಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ವಿ.ಎಸ್. ಮನಿ, ಮರಗಿ ಹಾಗೂ ಕಳಕಂಬಿ ಅವರ ಮಾರ್ಗದರ್ಶನದಲ್ಲಿ ಹಾಕಿ ಪಟ್ಟುಗಳನ್ನು ಕರಗತ ಮಾಡಿಕೊಂಡರು. ಪ್ರತಿನಿತ್ಯ ಕ್ರೀಡಾಂಗಣದಲ್ಲಿ ಸ್ನೇಹಿತರೊಂದಿಗೆ ಹಾಕಿ ಆಟವಾಡುವ ವಸಂತ ಅವರು ಹಾಕಿಯೊಂದಿಗೆ ಕಾಲ ಕಳೆಯದೆ ಮನೆಗೆ ಮರಳುವುದಿಲ್ಲ.

ಪ್ರತೀ ವರ್ಷ ದೇಶದ ವಿವಿಧ ಭಾಗಗಳಲ್ಲಿ ಅಖಿಲ ಭಾರತ ನಾಗರಿಕ ಸೇವಾ ಹಾಕಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಅದಕ್ಕೆ ರಾಜ್ಯದ ವಿವಿಧ ಜಿಲ್ಲೆಗಳ ಹಾಕಿ ಕ್ರೀಡಾಪಟುಗಳನ್ನು ಆಯ್ಕೆ ಮಾಡಲಾಗುತ್ತದೆ. 2016-17ನೇ ಸಾಲಿನಲ್ಲಿ ಚಂಡಿಗಡನಲ್ಲಿ ನಡೆದ ರಾಷ್ಟ್ರ ಮಟ್ಟದ ಹಾಕಿ ಕ್ರೀಡಾಕೂಟದಲ್ಲಿ ವಸಂತ ಭಾಗವಹಿಸಿದ್ದರು. 2018-19ರಲ್ಲಿ ಛತ್ತಿಸಗಡದಲ್ಲಿ ನಡೆದ ರಾಷ್ಟ್ರ ಮಟ್ಟದ ನೌಕರರ ಹಾಕಿ ಕ್ರೀಡಾಕೂಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು.

**

ನಮ್ಮ ತಾಲ್ಲೂಕಿನಲ್ಲಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ವಸಂತ ಅವರು, ಸರ್ಕಾರಿ ನೌಕರರ ರಾಷ್ಟ್ರಮಟ್ಟದ ಹಾಕಿ ತಂಡವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯ. ರಾಷ್ಟಮಟ್ಟದ ವೃತ್ತಿಪರ ಹಾಕಿ ತಂಡವನ್ನು ಸೇರಿ ನಮ್ಮ ಭಾಗದ ಕೀರ್ತಿ ಹೆಚ್ಚಿಸುವ ಭರವಸೆ ಇದೆ.
–ಎಂ.ಎ. ನದಾಫ್, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !