ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಮೌಢ್ಯದ ತೆರೆ ಸರಿಸಿದ ಹಸ್ತಪ್ರತಿ ಪ್ರದರ್ಶನ

ನಾನಾ ವಿಧದ ಅಮೂಲ್ಯ ಹಸ್ತಪ್ರತಿಗಳನ್ನು ಕಣ್ತುಂಬಿಕೊಂಡ ಕುತೂಹಲಿಗಳು
Last Updated 6 ನವೆಂಬರ್ 2020, 16:35 IST
ಅಕ್ಷರ ಗಾತ್ರ

ಗದಗ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಎರಡು ದಿನಗಳ ಕಾಲ ನಡೆದ ಹಸ್ತಪ್ರತಿ ಸಮ್ಮೇಳನದಲ್ಲಿ ಪ್ರದರ್ಶನಗೊಂಡಿದ್ದ ಹಸ್ತಪ್ರತಿಗಳು ಆಸಕ್ತರ ಕುತೂಹಲ ತಣಿಸಿದವು. ಹಾಗೆಯೇ, ಹಸ್ತಪ್ರತಿಗಳ ಬಗ್ಗೆ ಜನರಲ್ಲಿ ಇರುವ ಮೌಢ್ಯದ ತೆರೆ ಸರಿಸುವಲ್ಲಿ ಸಮ್ಮೇಳನ ಯಶಸ್ವಿಯಾಯಿತು.

‘ಕಪ್ಪತಗುಡ್ಡದಲ್ಲಿ ಒಂದು ದೇವಸ್ಥಾನ ಇದ್ದು ಅಲ್ಲಿ ಸಾಕಷ್ಟು ಹಸ್ತಪ್ರತಿಗಳು ಇವೆ. ಆದರೆ, ಆ ದೇವಾಲಯದವರು ದೇವರಿಗೆ ಸಂಬಂಧಿಸಿದ ವಸ್ತು ಎಂದು ಹೇಳಿ ಆ ಹಸ್ತಪ್ರತಿಗಳನ್ನು ಯಾರೊಬ್ಬರಿಗೂ ನೋಡಲು ಕೊಡುವುದಿಲ್ಲ’ ಎಂಬ ಡಾ.ರಮೇಶ ಕಲ್ಲನಗೌಡರ ಅವರ ಮಾತು ಜನರಿಗೆ ಹಸ್ತಪ್ರತಿಗಳ ಬಗ್ಗೆ ಇರುವ ಮೌಢ್ಯತೆಯನ್ನು ಬಿಂಬಿಸುತ್ತದೆ.

‘ದೇಶದ ಅನೇಕ ಜನರಿಗೆ ಹಸ್ತಪ್ರತಿಗಳ ಮಹತ್ವದ ಬಗ್ಗೆ ಪರಿಜ್ಞಾನ ಇರುವುದಿಲ್ಲ. ಆದರೆ, ಬಹಳಷ್ಟು ಮಂದಿ ಅವುಗಳನ್ನು ಆಸ್ತಿಯಂತೆ ಪರಿಗಣಿಸಿ ಮನೆಯಲ್ಲೇ ಇಟ್ಟುಕೊಂಡಿರುತ್ತಾರೆ. ಬೇರೆಯವರು ಕೇಳಿದರೆ ನೋಡಲು ಸಹ ಕೊಡುವುದಿಲ್ಲ. ಇನ್ನು ಕೆಲವರು ಮೌಢ್ಯದಿಂದ ಅವುಗಳನ್ನು ನೀರಿಗೆ ಬಿಟ್ಟುಬಿಡುತ್ತಾರೆ. ಈ ನಿಟ್ಟಿನಲ್ಲಿ ಹಸ್ತಪ್ರತಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಅಭಿಯಾನದಂತೆ ನಡೆಯಬೇಕು’ ಎನ್ನುತ್ತಾರೆ ಕಲ್ಲನಗೌಡರ.

‘ದೇಶಕ್ಕೆ ಬ್ರಿಟಿಷರ ಆಗಮನದ ನಂತರ, ಪ್ರಾಚೀನ ಹಸ್ತಪ್ರತಿಗಳ ಮೇಲೆ ಅವರಿಗೆ ಕುತೂಹಲ ಉಂಟಾಯಿತು. ಅನೇಕ ಬ್ರಿಟಿಷ್‌ ಅಧಿಕಾರಿಗಳು ಕುದುರೆ ಮೇಲೆ ಸವಾರಿ ಮಾಡುತ್ತಾ ದೇಶದಾದ್ಯಂತ ಸಂಚರಿಸಿ, ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಬಹುತೇಕ ಹಸ್ತಪ್ರತಿಗಳೆಲ್ಲವೂ ಈಗ ಬ್ರಿಟಿಷ್‌ ಲೈಬ್ರರಿಯಲ್ಲಿವೆ. ಕರ್ನಾಟಕದಲ್ಲಿ ಆರ್‌.ಸಿ.ಹೀರೆಮಠ, ಡಾ. ಎಂ.ಎಂ.ಕಲಬುರ್ಗಿ, ಫ.ಗು.ಹಳಕಟ್ಟಿ ಹಾಗೂ ಮೊದಲಾದವರು ಪ್ರಾಚೀನ ಹಸ್ತಪ್ರತಿಗಳ ಕುರಿತಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಇವರೆಲ್ಲರೂ ಕನ್ನಡ ಹಸ್ತಪ್ರತಿಗಳ ಸಂಪಾದನೆಯ ಹೊಸ ಸಾಧ್ಯತೆಯ ಬಾಗಿಲುಗಳನ್ನು ತೆರೆದು ತೋರಿಸಿದ್ದಾರೆ’ ಎಂದು ಅವರು ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಡಾ.ವೀರೇಶ್‌ ಬಡಿಗೇರ್‌, ಡಾ.ಕೆ.ರವೀಂದ್ರನಾಥ್‌, ಡಾ. ಹಳ್ಳಿಕೇರಿ, ಡಾ.ಎಸ್‌.ಎಸ್‌.ಅಗಡಿ, ಡಾ.ಚನ್ನವೀರಪ್ಪ ಮೊದಲಾದವರು ಹಸ್ತಪ್ರತಿ ಸಂಪಾದನೆ, ಸಂಶೋಧನೆ ಹಾಗೂ ಪ್ರಕಟಣೆ ವಿಭಾಗದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಯಾರೋ ಬರೆದಿರುವಂತಹ ಹಸ್ತಪ್ರತಿಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮೂಲ ಸಾಹಿತ್ಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸಂಪಾದಿಸಿ, ಪ್ರಕಟಣೆ ಮಾಡುವ ನಿಜಕ್ಕೂ ಸವಾಲಿನಿಂದ ಕೂಡಿರುವ ಕೆಲಸ. ಇದು ತಾಳ್ಮೆ ಮತ್ತು ಶ್ರದ್ಧೆ ಬೇಡುತ್ತದೆ’ ಎಂದು ಹೇಳಿದರು.

ವೈವಿಧ್ಯಮಯ ಹಸ್ತಪ್ರತಿಗಳ ಪ್ರದರ್ಶನ

‘ಕೈ ಎತ್ತಿ ಬರೆದರೆ ಹಸ್ತಪ್ರತಿ, ಕೈ ಎತ್ತಲಾರದೆ ಬರೆದರೆ ಮೋಡಿಲಿಪಿ ಎನ್ನುತ್ತಾರೆ. ಈ ಪ್ರದರ್ಶನದಲ್ಲಿ 28 ಬಗೆಯ ಅಮೂಲ್ಯ ಹಸ್ತಪ್ರತಿಗಳು ಹಾಗೂ ಕಡತಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ನೋಡಿದವರೆಲ್ಲರೂ ತುಂಬ ಮೆಚ್ಚುಗೆ ವ್ಯಕ್ತಪಡಿಸಿದರು’ ಎಂದು ಹಂ‍ಪಿ ಕನ್ನಡ ವಿವಿಯ ಹಸ್ತಪ್ರತಿ ಶಾಸ್ತ್ರ ವಿಭಾಗದ ಸಂರಕ್ಷಣಾಗಾರ ಲಕ್ಷ್ಮೇಂದ್ರಸ್ವಾಮಿ ಹೇಳಿದರು.

ಎರಡು ದಿನಗಳ ಸಮ್ಮೇಳನದಲ್ಲಿ ಲೆಕ್ಕದ ಕಡತ ಸುರುಳಿ ಹಸ್ತಪ್ರತಿ, 20 ಅಡಿ ಉದ್ದದ ಉದ್ಧರಣೆ ಪಠಲ, ತಾಮ್ರ ಶಾಸನಗಳನ್ನು ನೂರಾರು ಮಂದಿ ಕಣ್ತುಂಬಿಕೊಂಡರು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT