ಮಂಗಳವಾರ, ಮಾರ್ಚ್ 21, 2023
20 °C
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಸ್.ಮಹಾಲಕ್ಷ್ಮಿ ನೇರಳೆ

ಮೆಗಾ ಲೋಕ ಅದಾಲತ್ ಆ.14ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ರಾಜಿಗೆ ಯೋಗ್ಯವಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿ ನ್ಯಾಯಾಲಯದ ಒತ್ತಡ ಕಡಿಮೆ ಮಾಡಲು ಆ. 14ರಂದು ಮೆಗಾ ಲೋಕ ಅದಾಲತ್‌ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಸ್.ಮಹಾಲಕ್ಷ್ಮಿ ನೇರಳೆ ತಿಳಿಸಿದರು.

ಗದಗ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಅವರು ಮಾಹಿತಿ ನೀಡಿ, ‘ಗದಗ, ರೋಣ, ಮುಂಡರಗಿ ಮತ್ತು ಲಕ್ಷ್ಮೇಶ್ವರ ಹಾಗೂ ನರಗುಂದದಲ್ಲಿ ಮೆಗಾ ಲೋಕ ಅದಾಲತ್‌ ನಡೆಯಲಿದೆ. ಚೆಕ್‌ ಬೌನ್ಸ್‌ ಪ್ರಕರಣಗಳು, ಬ್ಯಾಂಕ್ ಸಾಲ ವಸೂಲಾತಿ, ವೈವಾಹಿಕ ಹಾಗೂ ಜೀವನಾಂಶ (ವಿಚ್ಛೇದನ ಹೊರತುಪಡಿಸಿ) ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ಕಾನೂನಿನ ಅನ್ವಯ ರಾಜಿ ಆಗಬಹುದಾದ ಕ್ರಿಮಿನಲ್‌ ಪ್ರಕರಣಗಳು ಸೇರಿದಂತೆ ಹಲವು ಬಗೆಯ ಪ್ರಕರಣಗಳ ಇತ್ಯರ್ಥಕ್ಕೆ ಅವಕಾಶವಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದರಿಂದ ಸಾರ್ವಜನಿಕರು ಹೆಚ್ಚಿನ ಹಣ ಮತ್ತು ಸಮಯ ವ್ಯಯಿಸುವುದನ್ನು ತಡೆಯಬಹುದಾಗಿದೆ. ಕಕ್ಷಿದಾರರು ವಿರೋಧ ವ್ಯಕ್ತಪಡಿಸದೇ ಪರಸ್ಪರ ಉತ್ತಮ ಬಾಂಧವ್ಯ ಬೆಳಸಿಕೊಳ್ಳಲು ಲೋಕ ಅದಾಲತ್ ನೆರವಾಗಲಿದೆ’ ಎಂದು ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ.ಸಲಗರೆ ಮಾತನಾಡಿ, ‘ನಗರಸಭೆಯ ವಿವಿಧ ತೆರಿಗೆಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಕೂಡ ಅದಾಲತ್‌ ನೆರವಾಗಲಿದೆ’ ಎಂದು ತಿಳಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ ಮಾತನಾಡಿ, ‘ಕಳೆದ ವರ್ಷ ನಡೆದ ಲೋಕ ಅದಾಲತ್‌ ವೇಳೆ ಗದಗ ಜಿಲ್ಲಾ ನ್ಯಾಯಾಲಯವು ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿ ರಾಜ್ಯದಲ್ಲಿಯೇ ಉತ್ತಮ ಸಾಧನೆ ಮಾಡಿತ್ತು. ಈ ವರ್ಷವೂ ಕೂಡ ಸಾಕಷ್ಟು ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆ ಇದೆ. ಸಾರ್ವಜನಿಕರು ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್‌ನ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.
ಬಿಎಸ್ಎನ್ಎಲ್, ಬ್ಯಾಂಕ್, ಹೆಸ್ಕಾಂ, ನಗರಸಭೆ ಅಧಿಕಾರಿಗಳು
ಉಪಸ್ಥಿತರಿದ್ದರು.

ಆ.14ರಂದು ನಡೆಯುವ ಲೋಕ ಅದಾಲತ್‌ಗೆ ಈವರೆಗೆ 806 ಪ್ರಕರಣಗಳನ್ನು ಗುರುತಿಸಲಾಗಿದೆ. ಇನ್ನೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ

ಮಹಾಲಕ್ಷ್ಮಿ ‌ನೇರಳೆ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.