ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಕಳಕಪ್ಪ ಬಂಡಿ ವಿರುದ್ಧ ಗರಂ ಆದ ಸಚಿವ ಬಿ.ಸಿ.ಪಾಟೀಲ

‘ಇವತ್ತೇ ಉಸ್ತುವಾರಿ ಬದಲಾಯಿಸಿ; ನನಗೇನೂ ಅಭ್ಯಂತರವಿಲ್ಲ’
Last Updated 11 ಏಪ್ರಿಲ್ 2022, 13:11 IST
ಅಕ್ಷರ ಗಾತ್ರ


ಗದಗ: ಅಕ್ರಮ ಮರಳು ಗಣಿಗಾರಿಕೆ ತಡೆ ವಿಚಾರವಾಗಿ ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಹಾಗೂ ರೋಣ ಬಿಜೆಪಿ ಶಾಸಕ ಕಳಕಪ್ಪ ಬಂಡಿ ನಡುವೆ ಸೋಮವಾರ ಮಾತಿನ ಚಕಮಕಿ ನಡೆಯಿತು.

ಅಕ್ರಮವಾಗಿ ಮರಳು ಸಾಗಣೆ, ಗಣಿಗಾರಿಕೆ ತಡೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಮತ್ತಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಎಸ್‌ಪಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆಯಲ್ಲಿ ಸೂಚಿಸಿದರು.

ಇದಕ್ಕೆ ಆಕ್ಷೇಪ ತೆಗೆದ ಶಾಸಕ ಕಳಕಪ್ಪ ಬಂಡಿ, ‘ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಬಿಗಿ ಕ್ರಮಗಳನ್ನು ಮಾಡಿದರೆ, ಮನೆ ಕಟ್ಟಲು ಮರಳು ಎಲ್ಲಿಂದ ತರಬೇಕು? ರಸ್ತೆ ಮಾಡಿಸಲು ಅಮೆರಿಕದಿಂದ ಮರಳು ತರಬೇಕಾ?’ ಎಂದು ವ್ಯಂಗ್ಯವಾಡಿದರು.

‘ನೀವು ಆಗಾಗ ಬಂದು ಅಧಿಕಾರಿಗಳಿಗೆ ಈ ರೀತಿ ನಿರ್ದೇಶನ ನೀಡಿದರೆ ಅವರು ಅದನ್ನೇ ಜಾರಿಗೊಳಿಸುತ್ತಾರೆ. ಇಲ್ಲೇ ಇರುವ ನಾವು ಜನರಿಗೆ ಏನು ಉತ್ತರ ಕೊಡಬೇಕು? ಮರಳು ಗಣಿಗಾರಿಕೆಗೆ ಬಿಗಿ ಕ್ರಮ ಅನುಸರಿಸಿ ಎಲ್ಲರನ್ನೂ ದೊಡ್ಡ ಜೈಲಿಗೆ ಕಳಿಸಿಬಿಡಿ. ನಿಮಗೆ ಹೆಸರು ಬರುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಸಿಟ್ಟಿಗೆದ್ದ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ, ‘ಅಧಿಕಾರಿಗಳ ಸಭೆಯಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ. ಕಾನೂನು ಏನಿದೆಯೋ ಅದೇ ರೀತಿ ಆಡಳಿತ ನಡೆಸಬೇಕು. ಅಲ್ಲದೇ, ನಾನೇನು ಕೇಳಿಕೊಂಡು ಬಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಆಗಿಲ್ಲ. ಬೇಡ ಎನ್ನುವುದಾದರೆ ಸಿಎಂಗೆ ಹೇಳಿ ಬದಲಾಯಿಸಿಕೊಳ್ಳಿ. ನನಗೇನೂ ಅಭ್ಯಂತವಿಲ್ಲ. ನೀವು ಆಕ್ಷೇಪ ವ್ಯಕ್ತಪಡಿಸಿದರೂ ನನ್ನ ಕಾರ್ಯವೈಖರಿ ಬದಲಾಗುವುದಿಲ್ಲ’ ಎಂದು ಹೇಳಿದರು.

ಬಳಿಕ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರು ಶಾಸಕ ಕಳಕಪ್ಪ ಬಂಡಿ ಅವರನ್ನು ಸಮಾಧಾನ ವ್ಯಕ್ತಪಡಿಸಿದರು.

ಲಾಠಿ ಹಿಡಿದು ನಿಲ್ಲಲು ಸಾಧ್ಯವೇ?

‘ಯಾರೋ ಟೀಕೆ ಮಾಡುತ್ತಾರೆ ಎಂದು ಸಿಎಂ ನಡುರಸ್ತೆಯಲ್ಲಿ ಲಾಠಿ ಹಿಡಿದು ನಿಲ್ಲಲು ಸಾಧ್ಯವಿಲ್ಲ’ ಎಂದು ಸಚಿವ ಬಿ.ಸಿ.ಪಾಟೀಲ ಹೇಳಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಕಾಂಗ್ರೆಸ್‌ ಮುಖಂಡರ ಹೇಳಿಕೆಗೆ ಪ್ರತ್ರಿಕ್ರಿಯಿಸಿದ ಅವರು, ‘ಸಿಎಂ ಬಸವರಾಜ ಬೊಮ್ಮಾಯಿ ಬಸವಣ್ಣನೂ ಹೌದು; ಬಸವರಾಜೂ ಹೌದು. ಅವರು ಮೂಖ ಬಸವಣ್ಣ ಅಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಿಎಂ ಪೊಲೀಸ್‌ ಇಲಾಖೆಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಆದರೂ, ಕಾಂಗ್ರೆಸ್‌ ನಾಯಕರು ದೂರುತ್ತಿರುವುದು ತಪ್ಪಿಲ್ಲ’ ಎಂದು ಹೇಳಿದರು.

‘ಜನತೆ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ. ಅವರ ಕಷ್ಟ ಸುಖ, ಬೇಕು ಬೇಡಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಕಾಂಗ್ರೆಸ್‌ ಮುಖಂಡರಿಗೆ ಮಾಡಲು ಕೆಲಸವಿಲ್ಲ. ವಿನಾಕಾರಣ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಯುದ್ಧದ ಕಾರಣದಿಂದಾಗಿ ಇಂಧನ ದರ ಏರಿಕೆಯಾಗಿದೆ. ಪರಿಸ್ಥಿತಿ ಸುಧಾರಿಸಿದ ನಂತರ ತೈಲದರ ಇಳಿಕೆಯಾಗಲಿದೆ. ಕೃಷಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಶೀಘ್ರ ಚಾಲನೆ ದೊರೆಯಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT