ಶುಕ್ರವಾರ, ನವೆಂಬರ್ 22, 2019
23 °C
ಮುಂಡರಗಿ ಪಟ್ಟಣದಲ್ಲಿ ಮೂಲಸೌಕರ್ಯ ಕೊರತೆ; ಮಕ್ಕಳು, ಮಹಿಳೆಯರ ಮೇಲೆ ನಿರಂತರ ದಾಳಿ

ಬೀದಿನಾಯಿ, ಹಂದಿಗಳ ಕಾಟಕ್ಕೆ ಹೈರಾಣಾದ ನಾಗರಿಕರು

Published:
Updated:
Prajavani

ಮುಂಡರಗಿ: ಪಟ್ಟಣದ ಬಹುತೇಕ ಭಾಗಗಳಲ್ಲಿ ಬೀದಿನಾಯಿಗಳು ಹಾಗೂ ಹಂದಿಗಳ ಕಾಟ ವಿಪರೀತವಾಗಿದ್ದು, ಸಾರ್ವಜನಿಕರು  ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಮಕ್ಕಳು, ವೃದ್ಧರ ಮೇಲೆ ದಾಳಿ ನಡೆಸುವ ಹಂದಿಗಳು ಮತ್ತು ಬೀದಿ ನಾಯಿಗಳು ಹಲವರನ್ನು ಕಚ್ಚಿ ಗಾಯಗೊಳಿಸಿವೆ.

ಪಟ್ಟಣದ ಮಂಜುನಾಥ ದೇವಸ್ಥಾನದ ಬಳಿ ಇತ್ತೀಚೆಗೆ ಬೀದಿ ನಾಯಿಯೊಂದು ಪತ್ರಿಕಾ ವಿತರಕ ಸೇರಿದಂತೆ ಐವರನ್ನು ಕಚ್ಚಿ ಗಾಯಗೊಳಿಸಿವೆ.

ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಅನೇಕರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಂಡರಗಿ ಪಟ್ಟಣವು 35 ರಿಂದ 40 ಸಾವಿರ ಜನಸಂಖ್ಯೆ ಹೊಂದಿದ್ದು, ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಎಂಬ ಖ್ಯಾತಿಯನ್ನೂ ಹೊಂದಿದೆ. ಆದರೆ, ಇದಕ್ಕೆ ಕಪ್ಪು ಚುಕ್ಕಿ ಎನ್ನುವಂತೆ ಹಂದಿಗಳು ಮತ್ತು ನಾಯಿಗಳ ಕಾಟ ಉಲ್ಬಣಗೊಂಡಿದೆ. ಇದರ ಜತೆಗೆ ಪಟ್ಟಣದ ಹೊರಭಾಗಗಳಲ್ಲಿ ನಿರ್ಮಾಣವಾಗಿರುವ ಕೆಲವು ಹೊಸ ಬಡಾವಣೆಗಳಲ್ಲಿ ರಸ್ತೆ, ಚರಂಡಿ, ಬೀದಿ ದೀಪದಂತಹ ಪ್ರಾಥಮಿಕ ಸೌಲಭ್ಯಗಳಿಂದಲೂ ಜನರು ವಂಚಿತರಾಗಿದ್ದಾರೆ.

ಪಟ್ಟಣದ ಜಾಗೃತ ವೃತ್ತದ ಹಲವು ಅಂಗಡಿಗಳಲ್ಲಿ ಮೀನು, ಮಾಂಸ ಮಾರಾಟ ಮಾಡಲಾಗುತ್ತಿದೆ. ಇದರ ಸುತ್ತಮುತ್ತಲಿನ ಪ್ರದೇಶಗಳು ಬೀದಿ ನಾಯಿಗಳ ತಾಣವಾಗಿದೆ. ಜಾಗೃತ ವೃತ್ತವು ಪಟ್ಟಣದ ಜನದಟ್ಟಣೆ ಪ್ರದೇಶವಾಗಿದ್ದು, ಈ ಮಾರ್ಗವಾಗಿ ಪ್ರತಿನಿತ್ಯ ಮಹಿಳೆಯರು, ಮಕ್ಕಳು, ವೃದ್ಧರು ಸ್ಥಳೀಯ ತೋಂಟದಾರ್ಯ ಮಠ, ಅನ್ನದಾನೀಶ್ವರ ಮಠ, ಸಿಬಿಎಸ್‌ಇ ಶಾಲೆಗಳಿಗೆ ತೆರಳುತ್ತಾರೆ. ಮೀನು, ಮಾಂಸದ ತ್ಯಾಜ್ಯಕ್ಕೆ ಮುಗಿಬೀಳುವ ಬೀದಿ ನಾಯಿಗಳು, ಪರಸ್ಪರ ಕಾದಾಡುತ್ತಾ ರಸ್ತೆಯಲ್ಲಿ ಹೋಗುವವರ ಮೇಲೆ ದಾಳಿ ನಡೆಸುತ್ತವೆ.

ರಾತ್ರಿ ವೇಳೆಯಂತೂ ಜಾಗೃತ ವೃತ್ತದ ಮೂಲಕ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಸಂಚರಿಸಲು ಸಾಧ್ಯವಿಲ್ಲದಂತಹ ಸ್ಥಿತಿ ಇದೆ. ಈ ಮಾರ್ಗವಾಗಿ ಯಾರಾದರೂ ಬಂದರೆ ನಾಯಿಗಳು ಗುಂಪಾಗಿ ದಾಳಿ ನಡೆಸುತ್ತವೆ. ಈಗಾಗಲೇ ಹಲವು ಮಕ್ಕಳು ಮತ್ತು ಮಹಿಳೆಯರು ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿ ಚಿಕಿತ್ಸೆ ಪಡೆದಿದ್ದಾರೆ.

ಪಟ್ಟಣದ ಕಡ್ಲಿಪೇಟೆ, ಸುಣಗಾರ ಓಣಿ, ದುರ್ಗಾದೇವಿ ನಗರ, ಅಂಬೇಡ್ಕರ್ ನಗರ, ಬಸವೇಶ್ವರ ನಗರ, ಅನ್ನದಾನೀಶ್ವರ ನಗರ ಮೊದಲಾದ ಭಾಗಗಳಲ್ಲಿ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಬೀದಿ ನಾಯಿಗಳನ್ನು ನಿಯಂತ್ರಿಸಬೇಕು ಎಂದು ಸಾರ್ವಜನಿಕರು ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ಇದುವರೆಗೆ ಪುರಸಭೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ವಹಿಸಿಲ್ಲ.

‘ಪಟ್ಟಣದ ಜಾಗೃತ ವೃತ್ತದಲ್ಲಿ ಹಲವು ಕುಟುಂಬಗಳು ಮಾಂಸದ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಅವರಿಗೆ ಸುಸಜ್ಜಿತ ಮಾಂಸದ ಅಂಗಡಿಗಳನ್ನು ನಿರ್ಮಿಸಿಕೊಟ್ಟರೆ ಅವರೆಲ್ಲ ಅಲ್ಲಿಗೆ ತೆರಳುತ್ತಾರೆ. ಬೀದಿ ನಾಯಿಗಳ ಹಾವಳಿಗೂ ಇದರಿಂದ ಕಡಿವಾಣ ಬೀಳುತ್ತದೆ. ಪುರಸಭೆಗೆ ಮಾಂಸ ಮಾರಾಟದ ಮಳಿಗೆಗಳನ್ನು ನಿರ್ಮಿಸಿ ಕೊಡುವುದಾದರೆ ಪಟ್ಟಣದ ಈದ್ಗಾ ಮೈದಾನದ ಪಕ್ಕದಲ್ಲಿ ಇಸ್ಲಾಂ ಸಮಾಜದ ವತಿಯಿಂದ ಮಳಿಗೆಗಳನ್ನು ನಿರ್ಮಿಸಿಕೊಡಲು ಸಿದ್ಧರಿದ್ದೇವೆ’ ಎನ್ನುತ್ತಾರೆ ತಾಲ್ಲೂಕು ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ನಬೀಸಾಬ್ ಕೆಲೂರ.

ಮಿತಿ ಮೀರಿದ ಹಂದಿಗಳ ಹಾವಳಿ

ಪಟ್ಟಣವು ಒಟ್ಟು 23 ವಾರ್ಡುಗಳನ್ನು ಹೊಂದಿದ್ದು, ಪ್ರತಿಯೊಂದು ವಾರ್ಡಿನಲ್ಲಿಯೂ ಹಂದಿಗಳ ಹಾವಳಿ ಮಿತಿ ಮೀರಿದೆ. ಪಟ್ಟಣದಲ್ಲಿ ಒಟ್ಟಾರೆ 5 ಸಾವಿರಕ್ಕಿಂತಲೂ ಹಂದಿಗಳು ಇರಬಹುದು ಎನ್ನುವುದು ಪುರಸಭೆ ಅಂದಾಜು. ಪಟ್ಟಣದ ಹಲವೆಡೆ ಖಾಲಿ ನಿವೇಶನಗಳಿವೆ. ಅವುಗಳಲ್ಲಿ ಮುಳ್ಳಿನ ಗಿಡಗಳು ಬೆಳೆದಿದ್ದು ಹಂದಿಗಳ ಆವಾಸ ಕೇಂದ್ರವಾಗಿ ಬದಲಾಗಿದೆ. ಖಾಲಿ ನಿವೇಶನಗಳಲ್ಲಿ ವಾಸಿಸುವ ಹಂದಿಗಳು, ಈ ಭಾಗದಿಂದ ಮಹಿಳೆಯರು ಮತ್ತು ಮಕ್ಕಳು ನಡೆದುಕೊಂಡು ಹೋದಾಗ ಸಾಮೂಹಿಕವಾಗಿ ದಾಳಿ ಮಾಡುತ್ತವೆ.

ಮಕ್ಕಳು ಬಹಿರ್ದೆಸೆಗೆ ರಸ್ತೆ ಅಥವಾ ಚರಂಡಿಯ ಬದಿಯಲ್ಲಿ ಕುಳಿತರೆ ಹಂದಿಗಳು  ಮಕ್ಕಳ ಮೇಲೆ ಎರಗುತ್ತವೆ. ಬಯಲು ಬಹಿರ್ದೆಸೆಗೆ ಹೋದ ಹಲವು ಮಕ್ಕಳು ಹಂದಿ ದಾಳಿಯಲ್ಲಿ ಗಾಯಗೊಂಡಿದ್ದಾರೆ. ಮಹಿಳೆಯರು ಮನೆಯ ಮುಂದೆ ಬಿಸಿಲಿಗೆ ಹರಡುವ ಆಹಾರ ಧಾನ್ಯಗಳು ಇತರೆ ಆಹಾರ ಪದಾರ್ಥಗಳನ್ನು ಸಹ ಹಂದಿಗಳಿಗೆ ಕ್ಷಣಾರ್ಧದಲ್ಲಿ ತಿಂದು ಹಾಕುತ್ತವೆ.

ವಿಷವಿಕ್ಕುವ ಸಾರ್ವಜನಿಕರು

ಬೀದಿ ನಾಯಿ ಹಾಗೂ ಹಂದಿಗಳ ಕಾಟದಿಂದ ಬೇಸತ್ತಿರುವ ಸಾರ್ವಜನಿಕರು ಇವುಗಳನ್ನು ನಿಯಂತ್ರಿಸಲು ಆಹಾರದಲ್ಲಿ ವಿಷವಿಡುತ್ತಿದ್ದಾರೆ. ವಿಷ ತಿಂದು ಹಂದಿಗಳು ಎಲ್ಲೆಂದರಲ್ಲಿ ಬಿದ್ದು ಸಾಯುತ್ತವೆ. ಸತ್ತ ಹಂದಿಗಳನ್ನು ಸಾಗಿಸಲು ಸಾರ್ವಜನಿಕರು ಪುರಸಭೆಯ ಕಾರ್ಮಿಕರಿಗೆ ದಮ್ಮಯ್ಯ ಎನ್ನಬೇಕಾಗುತ್ತದೆ.

ಹಂದಿಗಳ ಮಾಲೀಕರು ಯಾರೆಂಬುದು ಪುರಸಭೆಯವರಿಗಾಗಲಿ, ಸಾರ್ವಜನಿಕರಿಗಾಗಲಿ ಮಾಹಿತಿ ಇಲ್ಲ. ಪಟ್ಟಣದಲ್ಲಿರುವ ಹಂದಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಬೇಕು ಎಂದು ಸಾರ್ವಜನಿಕರು ಹಲವು ಬಾರಿ ಪುರಸಭೆಯ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಕಳೆದ ವರ್ಷ ಪುರಸಭೆ ಕಾಟಾಚಾರಕ್ಕೆ ಎನ್ನುವಂತೆ ನಾಲ್ಕು ಹಂದಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸಿತು. ಆದರೆ, ಸಮಸ್ಯೆ ಬಗೆಹರಿದಿಲ್ಲ. ಇನ್ನಷ್ಟು ಉಲ್ಬಣಿಸಿದೆ.

***

ಇತ್ತೀಚೆಗೆ ಪುರಸಭೆಯ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಶೀಘ್ರ ಹಂದಿ ಮಾಲೀಕರು ಹಾಗೂ ಸಾರ್ವಜನಿಕರ ಸಭೆ ಕರೆದು ಸೂಕ್ತ ಕ್ರಮ ಕೈಗೊಳ್ಳುತ್ತೇನೆ
- ಎಸ್.ಎಚ್.ನಾಯ್ಕರ ಮುಖ್ಯಾಧಿಕಾರಿ

ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಹಂದಿಗಳ ಕಾಟ ವಿಪರೀತವಾಗಿದ್ದು, ಅವುಗಳನ್ನು ತ್ವರಿತವಾಗಿ ಸ್ಥಳಾಂತರಿಸದಿದ್ದರೆ, ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ

-ಮಂಜುನಾಥ ಮುಧೋಳ,ನಿವಾಸಿ

ತಾಲ್ಲೂಕಿನ ಪಕ್ಕದಲ್ಲೇ ಕಪ್ಪತಗುಡ್ಡದ ಅರಣ್ಯ ಪ್ರದೇಶವಿದೆ. ಅಲ್ಲಿಗೆ ಹಂದಿಗಳನ್ನು ಸ್ಥಳಾಂತರಿಸಿದರೆ, ಹಂದಿಗಳಿಗೂ ಕ್ಷೇಮ, ಸಾರ್ವಜನಿಕರಿಗೂ ಕ್ಷೇಮ

-ಪವನ ಚೋಪ್ರಾ, ವ್ಯಾಪಾರಿ, ಮುಂಡರಗಿ

ಪ್ರತಿಕ್ರಿಯಿಸಿ (+)