2 ತಿಂಗಳು ಗದಗ ಉಸ್ತುವಾರಿಯಾಗಿದ್ದ ಮಹೇಶ್‌ 3 ಬಾರಿ ಭೇಟಿ, 10ಕ್ಕೂ ಹೆಚ್ಚು ಸಭೆ..!

7

2 ತಿಂಗಳು ಗದಗ ಉಸ್ತುವಾರಿಯಾಗಿದ್ದ ಮಹೇಶ್‌ 3 ಬಾರಿ ಭೇಟಿ, 10ಕ್ಕೂ ಹೆಚ್ಚು ಸಭೆ..!

Published:
Updated:
Deccan Herald

ಗದಗ: ‘ಹಿಂದುಳಿದ ಸಮುದಾಯದಲ್ಲಿ ಜನಿಸಿ ಮಂತ್ರಿಯಾಗಿದ್ದೇನೆ. ಇದು ಸಾಮಾನ್ಯ ಸಾಧನೆಯಲ್ಲ. ಇಂತಹ ಸಾಧನೆಗೆ ದೇಶದ ಸಂವಿಧಾನವು ಅವಕಾಶ ನೀಡಿದೆ’.

ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಮೊದಲ ಬಾರಿಗೆ ಮುದ್ರಣಕಾಶಿಗೆ ಭೇಟಿ ನೀಡಿದ ಎನ್.ಮಹೇಶ್, 72ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಆಡಿದ ಮಾತುಗಳಿವು.

ಉಸ್ತುವಾರಿ ಸಚಿವರಾದ ನಂತರ ಲಭಿಸಿದ ಎರಡು ತಿಂಗಳ ಅವಧಿಯಲ್ಲೇ ಅವರು ಮೂರು ಬಾರಿ ಗದಗ ಜಿಲ್ಲೆಗೆ ಭೇಟಿ ನೀಡಿದ್ದರು. ಆ.15 ಅವರ ಮೊದಲ ಭೇಟಿಯಾದರೆ, ಸೆ. 20ರಂದು ಗದುಗಿನಲ್ಲಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ನಡೆದ ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನೆ ಕೊನೆಯ ಕಾರ್ಯಕ್ರಮ. ಪ್ರತಿ ಭೇಟಿಯಲ್ಲೂ ‘ಸರಣಿ ಸಭೆ’ಗಳನ್ನು ನಡೆಸುತ್ತಿದ್ದರು.ಭೂಮಿಪೂಜೆ, ಕಾಮಗಾರಿ ಉದ್ಘಾಟನೆಗಿಂತಲೂ ಪ್ರಗತಿ ಪರಿಶೀಲನಾ ಸಭೆಗಳಿಗೆ ಆದ್ಯತೆ ನೀಡುತ್ತಿದ್ದರು. ಜಿಲ್ಲೆಯ ನಾಲ್ಕೂ ವಿಧಾನಸಭಾ ಕ್ಷೇತ್ರಗಳ ಶಾಸಕರೊಂದಿಗೆ ಸಮನ್ವಯ ಸಾಧಿಸಿ, ಪ್ರತಿ ಸಭೆಯಲ್ಲೂ ಎಲ್ಲ ಕ್ಷೇತ್ರಗಳ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಭಾಗವಹಿಸುವಂತೆ ನೋಡಿಕೊಳ್ಳುತ್ತಿದ್ದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರೂ ಆಗಿದ್ದ ಅವರು, ಸ್ವಾಂತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ನಡೆದ ಮೊದಲ ಸುದ್ದಿಗೋಷ್ಠಿಯಲ್ಲೇ ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕ್ರಮ ವಹಿಸುವ ಭರವಸೆ ನಿಡಿದ್ದರು.‘ರಾಜ್ಯದ ಎಲ್ಲ ಶಾಸಕರು ಹಾಗೂ ಸಂಸದರು ತಲಾ ಒಂದೊಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವಂತೆ ಕೋರಿ ಶೀಘ್ರವೇ ಪತ್ರ ಬರೆಯುತ್ತೇನೆ’ ಎಂದಿದ್ದರು.

ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪ್ರಕೃತಿ ವಿಕೋಪ ಪರಿಹಾರ ಪ್ರಗತಿ ಪರಿಶೀಲನಾ ಸಭೆ,ಪ್ರವಾಸೋದ್ಯಮ ಇಲಾಖೆ ಜಿಲ್ಲಾ ಸಮಿತಿ ಸಭೆ, ಜಿಲ್ಲಾ ಕ್ರೀಡಾ ಸಮಿತಿ ಸಭೆ,ರಾಷ್ಟ್ರೀಯ ಹೆದ್ದಾರಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿ, ಕಾಮಗಾರಿ ವಿಳಂಬಕ್ಕೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು. ‘ರೈತರ, ಬಡವರ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ಸೂಚನೆ ನೀಡಿದ್ದರು.

ಸೆ.11ರಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿದ್ದ ಅವರು, ‘ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ 30 ತಿಂಗಳಲ್ಲಿ ಮುಕ್ತಾಯವಾಗಬೇಕಿತ್ತು. ಆದರೆ, ದಶಕ ಕಳೆದರೂ ಕಾಮಗಾರಿಗಳು ಮುಗಿದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅದೇ ದಿನ ಸ್ವಾಮಿ ವಿವೇಕಾನಂದರ ಷಿಕಾಗೊ ಉಪನ್ಯಾಸದ 125ನೇ ವರ್ಷಾಚರಣೆ ಕಾರ್ಯಕ್ರಮವನ್ನೂ ಅವರು ಉದ್ಘಾಟಿಸಿದ್ದರು.

ಕೊನೆಯ ಬಾರಿ ಸೆ.20 ಗದಗ ಉತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು, ಅಂದು 3 ಸಭೆಗಳನ್ನು ನಡೆಸಿದ್ದರು. ಅದೇ ದಿನ ಮಳೆಯಿಂದ ಹಾನಿಗೊಳಗಾದ ಗದುಗಿನ ಮಂಜುನಾಥ ನಗರ, ವಾಂಬೆ ಬಡಾವಣೆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎನ್‌.ಮಹೇಶ್ ರಾಜೀನಾಮೆ ಬೆನ್ನಲ್ಲೇ, ಮುಂದಿನ ಗದಗ ಜಿಲ್ಲಾ ಉಸ್ತುವಾರಿ ಪಟ್ಟ ಯಾರಿಗೆ ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ.

ಗದಗ ಜಿಲ್ಲಾ ಉಸ್ತುವಾರಿ ಸಚಿವರು

ಎಸ್.ಎಸ್. ಪಾಟೀಲ– (1994–99)

ಎಚ್.ಕೆ.ಪಾಟೀಲ– (1999ರಿಂದ 2004, 2004ರಿಂದ 2006, 2013ರಿಂದ 2018)

ಬಾಲಚಂದ್ರ ಜಾರಕಿಹೊಳಿ– (2006ರಲ್ಲಿ 3ತಿಂಗಳು)

ಬಿ.ಶ್ರೀರಾಮುಲು– (2006ರ ಅಂತ್ಯದಿಂದ 2008)

ಸಿ.ಸಿ.ಪಾಟೀಲ– (2008ರಿಂದ 2011)

ಕಳಕಪ್ಪ ಬಂಡಿ– (2012ರಿಂದ 2013)
ಎನ್‌. ಮಹೇಶ್‌ (2018 ಜುಲೈ 31ರಿಂದ ಅ.11)

* ಇವನ್ನೂ ಓದಿ...

ಸಚಿವ ಎನ್.‌ಮಹೇಶ್ ಸಂಪುಟಕ್ಕೆ ರಾಜೀನಾಮೆ

ಎನ್‌.ಮಹೇಶ್ ರಾಜೀನಾಮೆ: ಕಾರ್ಯಕರ್ತರಿಗೆ ದಿಗ್ಭ್ರಮೆ

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !