ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಲ್‌: ವಿಂಡ್‌ ಕಂಪನಿ ಹಾವಳಿಗೆ ನಲುಗಿದ ಗ್ರಾಮೀಣರು

ಚಂದ್ರು ಎಂ. ರಾಥೋಡ್
Published 18 ಮಾರ್ಚ್ 2024, 4:34 IST
Last Updated 18 ಮಾರ್ಚ್ 2024, 4:34 IST
ಅಕ್ಷರ ಗಾತ್ರ

ನರೇಗಲ್‌: ಹೋಬಳಿ ವ್ಯಾಪ್ತಿಗೆ ಲಗ್ಗೆಯಿಟ್ಟಿರುವ ಬಹುರಾಷ್ಟ್ರೀಯ ಪವನ ವಿದ್ಯುತ್‌ ಉತ್ಪಾದಕ ಖಾಸಗಿ ಕಂಪನಿಗಳು ಹಾಗೂ ಸೋಲಾರ್‌ ಕಂಪನಿಯವರ ಅತಿ ಭಾರದ ವಾಹನಗಳ ಓಡಾಟದಿಂದಾಗಿ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

ಅದರಲ್ಲೂ ಕೃಷಿ ಚಟುವಟಿಕೆಗಳಿಗೆ ಮೀಸಲಿರುವ ರಸ್ತೆ, ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ನಿರ್ಮಾಣಗೊಂಡ ರಸ್ತೆ, ಬಂಡಿ ರಸ್ತೆ, ಹಳ್ಳಿಯಿಂದ ಹಳ್ಳಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳ ಮೇಲೆ ವಿಂಡ್‌ ಕಂಪನಿಯ ಬೃಹತ್‌ ವಾಹನಗಳ ಓಡಾಟದಿಂದಾಗಿ ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ನಿರ್ಮಾಣಗೊಂಡಿವೆ. ವಿಂಡ್‌ ಕಂಪನಿಯ ಫ್ಯಾನ್‌ ರೆಕ್ಕೆ, ಕಂಬ ಹಾಗೂ ಕಬ್ಬಿಣವನ್ನು ಹೊತ್ತು ಬರುವ ಅತಿ ಉದ್ದ ಹಾಗೂ ಬೃಹತ್‌ ಆಕಾರದ ವಾಹನಗಳ ಹಾವಳಿಗೆ ಹಳ್ಳಿಗರು ನಲುಗಿದ್ದಾರೆ.

ಈ ಮೊದಲು ರಾತ್ರಿ ವೇಳೆ ಸಂಚಾರ ಮಾಡುತ್ತಿದ್ದ ಬೃಹತ್‌ ವಾಹನಗಳು ಈಚೆಗೆ ಹಗಲಲ್ಲೇ ರಾಜಾರೋಶವಾಗಿ ಸಂಚಾರ ಮಾಡುತ್ತಿವೆ. ಅತಿಭಾರದ ವಾಹನಗಳ ಹಿಂದೆ ಮುಂದೆ ಎಸ್ಕಾರ್ಟ್‌ ವ್ಯವಸ್ಥೆ ಮಾಡಿಕೊಂಡು ಸಂಚಾರ ಮಾಡುತ್ತಿದ್ದ ಖಾಸಗಿ ಕಂಪನಿಯವರು ಈಗಂತು ಅದನ್ನು ಬಿಟ್ಟಿದ್ದಾರೆ. ಇಕ್ಕಟ್ಟಿನ ರಸ್ತೆಯಲ್ಲಿ ದೊಡ್ಡವಾಹನಗಳು ಬಂದಾಗ ಎದುರಿಗೆ ಹಾಗೂ ಹಿಂದುಗಡೆಯಿಂದ ಬರುವ ಸಾಮಾನ್ಯ ವಾಹನಗಳ ಸವಾರರು ವಿಧಿಯಿಲ್ಲದೆ ಒದ್ದಾಡುತ್ತಿದ್ದಾರೆ. ಕೆಲವೊಮ್ಮೆ ತಾಸುಗಟ್ಟಲೆ ಕಾಯ್ದು ನಂತರ ದಾರಿಮಾಡಿಕೊಂಡು ಹೋಗುತ್ತಾರೆ.

ಮಾರ್ಚ್‌ 14ರಂದು ಬೆಳಿಗ್ಗೆ ಮಾರನಬಸರಿ-ರೋಣ ಮಾರ್ಗದ ರೈತರ ಬಂಡಿ, ಟ್ರಾಕ್ಟರ್‌ ಹಾಗೂ ಇತರೆ ಸಣ್ಣಪುಟ್ಟ ವಾಹನಗಳು ಓಡಾಡುವ ರಸ್ತೆಗೆ ಬಂದ ವಿಂಡ್‌ ಕಂಪನಿ ಬೃಹತ್ ವಾಹನ ದಾರಿಯಲ್ಲಿ ಅಡ್ಡಗಟ್ಟಿ ನಿಂತಿತ್ತು. ರಾತ್ರಿ 9 ಗಂಟೆಯಾದರೂ ತೆರವು ಮಾಡಲು ಮುಂದಾಗದ ಕಾರಣ ರೈತರು ಕಂಪನಿಯ ಸಿಬ್ಬಂದಿ ವಿರುದ್ದ ವಾಗ್ವಾದಕ್ಕೆ ಇಳಿದರು. ಈ ವೇಳೆ ಸರಿಯಾಗಿ ಸ್ಪಂದಿಸದೆ ಕೃಷಿಕರ ವಿರುದ್ದ ಮಾತನಾಡಿದ ಕಾರಣ ಹೋರಾಟ ಮಾಡುವ ಎಚ್ಚರಿಕೆ ನೀಡಿದರು. ಆಗ ಸ್ಥಳಕ್ಕೆ ಬಂದ ಕಂಪನಿ ಅಧಿಕಾರಿಗಳು ರೈತರಲ್ಲಿ ಕ್ಷಮೆಯಾಚಿಸಿ ಸಮಸ್ಯೆ ಇತ್ಯರ್ಥಗೊಳಿಸಿದ್ದರು.

ನರೇಗಲ್‌ ಹೋಬಳಿಯಲ್ಲಿ ಅಪಘಾತಗಳ ಸಂಖ್ಯೆ ಏರುತ್ತಿದೆ. ಅನೇಕರು ಗಾಯಮಾಡಿಕೊಂಡು ಆಸ್ಪತ್ರೆ ಸೇರಿರುವ ಘಟನೆಗಳು ನಡೆದಿವೆ. ಹೀಗೆ ಅಪಘಾತ ನಡೆದಾಗ ಪ್ರಕರಣ ದಾಖಲಾಗುವುದು ತುಂಬ ಕಡಿಮೆ. ಕಾರಣ ಅಪಘಾತ ಜರುಗಿದ ಸ್ಥಳದಲ್ಲಿಯೇ ದುಡ್ಡು ಕೊಟ್ಟು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನವನ್ನು ವಿಂಡ್‌ ಕಂಪನಿಯವರು ಮಾಡುತ್ತಾರೆ.

ನರೇಗಲ್-ಗಜೇಂದ್ರಗಡ ಮಾರ್ಗದಲ್ಲಿ ಎರಡು ಕಡೆ, ನರೇಗಲ್‌ ಜಕ್ಕಲಿ ಮಾರ್ಗದಲ್ಲಿ ಎರಡು ಕಡೆ, ನರೇಗಲ್-ಕೋಟುಮಚಗಿ ಒಂದು ಕಡೆ ಹಾಗೂ ಅಬ್ಬಿಗೇರಿ ಸೇರಿದಂತೆ ವಿವಿಧ ಕಡೆಗಳಲ್ಲಿ ರೆನಿವ್ಯೂ, ಎವರ್‌ ರಿನಿವ್ಯೂ, ಟಾಟಾ, ಕೆ.ಎಸ್.‌ವಿಂಡ್‌ ಮತ್ತು ರಿನಿವೇಬಲ್ಸ್‌ ಸೇರಿದಂತೆ ಬಹು ರಾಷ್ಟ್ರೀಯ ಪವನ ವಿದ್ಯುತ್‌ ಉತ್ಪಾದನೆ ಮಾಡುವ ಹಾಗೂ ಸೋಲಾರ್‌ ಉತ್ಪಾದನೆಯ ಅಂದಾಜು 10 ಖಾಸಗಿ ಕಂಪನಿಗಳು ಹೋಬಳಿ ವ್ಯಾಪ್ತಿಯಲ್ಲಿ ಬಂದು ಠಿಕಾಣಿ ಹೂಡಿವೆ.

ಅಲ್ಲದೇ ಎಲ್ಲವೂ ಈ ಭಾಗದಲ್ಲಿಯೇ ಜಿರೋ ಪಾಯಿಂಟ್‌ಗಳನ್ನು ಮಾಡಿಕೊಂಡಿವೆ. ಆದ್ದರಿಂದ ವಿಂಡ್‌ ಕಂಪನಿಗಳಿಗೆ ಸರಬರಾಜು ಮಾಡಲಾಗುವ ಪ್ರತಿಯೊಂದು ಸಾಮಗ್ರಿಯೂ ದೂರದಿಂದ ನರೇಗಲ್‌ ಹೋಬಳಿಯ ವ್ಯಾಪ್ತಿಯ ಘಟಕಗಳಲ್ಲಿ ಬಂದು ಸಂಗ್ರಹಿಸಲಾಗುತ್ತದೆ. ಇಲ್ಲಿಂದ ರೋಣ, ಗಜೇಂದ್ರಗಡ, ನಿಡಗುಂದಿ, ನಿಡಗುಂದಿಕೊಪ್ಪ, ಹಾಲಕೆರೆ, ಮಾರನಬಸರಿ, ಹೊಸಳ್ಳಿ, ಜಕ್ಕಲಿ, ಕಳಕಾಪುರ, ಅಬ್ಬಿಗೇರಿ, ಕೃಷ್ಣಾಪುರ, ಬೂದಿಹಾಳ, ತೋಟಗಂಟಿ, ದ್ಯಾಂಪುರ, ಕೋಚಲಾಪುರ, ರಾಜೂರ, ಸೂಡಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಹಾಗೂ ಅಲ್ಲಿನ ಘಟಕಗಳಿಗೆ ವಿಂಡ್‌ ಕಂಬ, ರೆಕ್ಕೆ ಹಾಗೂ ಇತರೆ ಸಾಮಗ್ರಿಗಳನ್ನು ಸರಬರಾಜು ಮಾಡಲಾಗುತ್ತದೆ. ಹೀಗಾಗಿ ಪ್ರತಿಯೊಂದಕ್ಕೂ ನರೇಗಲ್‌ ಹೋಬಳಿಯ ಗ್ರಾಮೀಣ ರಸ್ತೆಗಳನ್ನು ಖಾಸಗಿ ಕಂಪನಿಯವರು ಬಳಕೆ ಮಾಡುತ್ತಿದ್ದಾರೆ. ಆದ್ದರಿಂದ ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಖಾಸಗಿ ಕಂಪನಿಯವರಿಂದಲೇ ರಸ್ತೆಗಳನ್ನು ದುರಸ್ತಿ ಪಡಿಸಿ ಅಭಿವೃದ್ದಿಗೆ ಮುಂದಾಗಬೇಕು ಇಲ್ಲವಾದರೆ ಅವರ ವಾಹನಗಳ ಸಂಚಾರ ನಿಷೇಧಿಸಬೇಕು. ಜಿಲ್ಲಾಡಳಿತ ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ನರೇಗಲ್‌ ಸಮೀಪದ ಹಳ್ಳದ ರಸ್ತೆಯಲ್ಲಿ ತೆರೆದಿರುವ ಕೊಳವೆ ಬಾವಿ
ನರೇಗಲ್‌ ಸಮೀಪದ ಹಳ್ಳದ ರಸ್ತೆಯಲ್ಲಿ ತೆರೆದಿರುವ ಕೊಳವೆ ಬಾವಿ
ನರೇಗಲ್-ನಿಡಗುಂದಿ ಮಾರ್ಗದ ಎಡಭಾಗದ ಹೊಲವೊಂದರಲ್ಲಿ ನಡೆದಿರುವ ವಿಂಡ್‌ ಕಂಪನಿ ಕಾಮಗಾರಿಗಾಗಿ ಕಿರುಹಳ್ಳಕ್ಕೆ ಗರಸು ಹಾಕಿ ಮುಚ್ಚಿರುವುದು
ನರೇಗಲ್-ನಿಡಗುಂದಿ ಮಾರ್ಗದ ಎಡಭಾಗದ ಹೊಲವೊಂದರಲ್ಲಿ ನಡೆದಿರುವ ವಿಂಡ್‌ ಕಂಪನಿ ಕಾಮಗಾರಿಗಾಗಿ ಕಿರುಹಳ್ಳಕ್ಕೆ ಗರಸು ಹಾಕಿ ಮುಚ್ಚಿರುವುದು
ನರೇಗಲ್-ನಿಡಗುಂದಿ ಮಾರ್ಗದ ಎಡಭಾಗದ ಹೊಲವೊಂದರಲ್ಲಿ ನಡೆದಿರುವ ವಿಂಡ್‌ ಕಂಪನಿ ಕಾಮಗಾರಿಗಾಗಿ ಕಿರುಹಳ್ಳಕ್ಕೆ ಗರಸು ಹಾಕಿ ಮುಚ್ಚಿರುವುದು
ನರೇಗಲ್-ನಿಡಗುಂದಿ ಮಾರ್ಗದ ಎಡಭಾಗದ ಹೊಲವೊಂದರಲ್ಲಿ ನಡೆದಿರುವ ವಿಂಡ್‌ ಕಂಪನಿ ಕಾಮಗಾರಿಗಾಗಿ ಕಿರುಹಳ್ಳಕ್ಕೆ ಗರಸು ಹಾಕಿ ಮುಚ್ಚಿರುವುದು
ನರೇಗಲ್-ಗಜೇಂದ್ರಗಡ ಮಾರ್ಗ ಮಧ್ಯ ವಿಂಡ್‌ ಕಂಪನಿ ಘಟಕದ ಎದುರಿನ ಡಾಂಬರ್‌ ರಸ್ತೆಯಲ್ಲಿ ಬಿದ್ದಿರುವ ಕಲ್ಲಿನ ಕಡಿಗಳು
ನರೇಗಲ್-ಗಜೇಂದ್ರಗಡ ಮಾರ್ಗ ಮಧ್ಯ ವಿಂಡ್‌ ಕಂಪನಿ ಘಟಕದ ಎದುರಿನ ಡಾಂಬರ್‌ ರಸ್ತೆಯಲ್ಲಿ ಬಿದ್ದಿರುವ ಕಲ್ಲಿನ ಕಡಿಗಳು
ನರೇಗಲ್-ಗಜೇಂದ್ರಗಡ ಮಾರ್ಗ ಮಧ್ಯೆ ವಿಂಡ್‌ ಕಂಪನಿ ಘಟಕದ ಎದುರಿನ ಡಾಂಬರ್‌ ರಸ್ತೆಯಲ್ಲಿ ಬಿದ್ದಿರುವ ಕಲ್ಲಿನ ಕಡಿಗಳು
ನರೇಗಲ್-ಗಜೇಂದ್ರಗಡ ಮಾರ್ಗ ಮಧ್ಯೆ ವಿಂಡ್‌ ಕಂಪನಿ ಘಟಕದ ಎದುರಿನ ಡಾಂಬರ್‌ ರಸ್ತೆಯಲ್ಲಿ ಬಿದ್ದಿರುವ ಕಲ್ಲಿನ ಕಡಿಗಳು
ನರೇಗಲ್-ಗಜೇಂದ್ರಗಡ ಮಾರ್ಗದ ನಿಡಗುಂದಿಕೊಪ್ಪ ಕ್ರಾಸ್‌ ಬಳಿ ಸೂಚನಾ ಫಲಕವನ್ನು ಹಾನಿಗೊಳಿಸಿರುವುದು
ನರೇಗಲ್-ಗಜೇಂದ್ರಗಡ ಮಾರ್ಗದ ನಿಡಗುಂದಿಕೊಪ್ಪ ಕ್ರಾಸ್‌ ಬಳಿ ಸೂಚನಾ ಫಲಕವನ್ನು ಹಾನಿಗೊಳಿಸಿರುವುದು
ನರೇಗಲ್‌ ಸಮೀಪದ ಮಾರನಬಸರಿ ಗ್ರಾಮದ ರೈತರು ಜಮೀನುಗಳಿಗೆ ಸಂಚಾರ ಮಾಡುವ ರಸ್ತೆಯಲ್ಲಿ ನಿಂತಿರುವ ವಿಂಡ್‌ ಕಂಪನಿ ವಾಹನ
ನರೇಗಲ್‌ ಸಮೀಪದ ಮಾರನಬಸರಿ ಗ್ರಾಮದ ರೈತರು ಜಮೀನುಗಳಿಗೆ ಸಂಚಾರ ಮಾಡುವ ರಸ್ತೆಯಲ್ಲಿ ನಿಂತಿರುವ ವಿಂಡ್‌ ಕಂಪನಿ ವಾಹನ
ನರೇಗಲ್‌ ಸಮೀಪದ ಹೊರವಲಯದ ಜಮೀನು ರಸ್ತೆ ಪಕ್ಕದಲ್ಲಿ ನಿಂತಿರುವ ವಿಂಡ್‌ ಕಂಪನಿ ಬೃಹತ್‌ ವಾಹನ
ನರೇಗಲ್‌ ಸಮೀಪದ ಹೊರವಲಯದ ಜಮೀನು ರಸ್ತೆ ಪಕ್ಕದಲ್ಲಿ ನಿಂತಿರುವ ವಿಂಡ್‌ ಕಂಪನಿ ಬೃಹತ್‌ ವಾಹನ
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಹೊಲಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಕಡಿದಿರುವ ಗಿಡಗಳು
ನರೇಗಲ್‌ ಸಮೀಪದ ಜಕ್ಕಲಿ ಗ್ರಾಮದ ಹೊಲಗಳ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಕಡಿದಿರುವ ಗಿಡಗಳು
ನರೇಗಲ್‌ ಸಮೀಪದ ನಿಡಗುಂದಿಕೊಪ್ಪ ಹಾಗೂ ಹಾಲಕೆರೆ ಗ್ರಾಮಗಳ ನಡುವೆ ನಿರ್ಮಾಣ ಮಾಡಲಾಗುತ್ತಿರುವ ವಿಂಡ್‌ ಕಂಪನಿ ಘಟಕ
ನರೇಗಲ್‌ ಸಮೀಪದ ನಿಡಗುಂದಿಕೊಪ್ಪ ಹಾಗೂ ಹಾಲಕೆರೆ ಗ್ರಾಮಗಳ ನಡುವೆ ನಿರ್ಮಾಣ ಮಾಡಲಾಗುತ್ತಿರುವ ವಿಂಡ್‌ ಕಂಪನಿ ಘಟಕ
ಗ್ರಾಮೀಣ ಭಾಗದ ಜನರಿಗೆ ತೊಂದರೆ ಆಗದಂತೆ ಹಾಗೂ ಅಲ್ಲಿನ ಹಳ್ಳ ಸರುವುಗಳಂತ ಜಲಮೂಲಗಳಿಗೆ ತೊಂದರೆ ಆಗದಂತೆ ಕಾಮಗಾರಿ ಮಾಡುವಂತೆ ಸಭೆ ಕರೆದು ವಿಂಡ್‌ ಕಂಪನಿಯವರಿಗೆ ತಿಳಿಸಲಾಗುವುದು.
- ವೈಶಾಲಿ ಎಂ.ಎಲ್‌. ಜಿಲ್ಲಾಧಿಕಾರಿ ಗದಗ
ವಿಂಡ್‌ ಕಂಪನಿಯಿಂದ ತೊಂದರೆ‌ ಜನರಿಗೆ ಆಗುತ್ತಿದ್ದರೆ ಅವರ ವಿರುದ್ದ ಕ್ರಮ ಜರುಗಿಸಲಾಗುವುದು ಹಾಗೂ ಅಗತ್ಯ ಕೆಲಸಗಳನ್ನು ಅವರಿಂದ ಮಾಡಿಸಲಾಗುವುದು
- ಕಿರಣಕುಮಾರ ಜಿ. ಕುಲಕರ್ಣಿ ಗಜೇಂದ್ರಗಡ ತಹಶೀಲ್ದಾರ
ವಿಂಡ್‌ ಕಂಪನಿಯವರು ಸಾಮಾನ್ಯವಾಗಿ ರೈತರಿಗೆ ಪರಿಹಾರ ನೀಡಿ ರಸ್ತೆ ನಿರ್ಮಾಣ ಮಾಡಿಕೊಂಡು ಸಂಚಾರ ಮಾಡುತ್ತಾರೆ ಅದನ್ನು ಹೊರತುಪಡಿಸಿ ಜನರಿಗೆ ತೊಂದರೆ ನೀಡುವ ಮಾಹಿತಿ ಬಂದರೆ ಕ್ರಮ ಜರುಗಿಸಲಾಗುವುದು
ಶಿವಾನಂದ ಬನ್ನಿಕೊಪ್ಪ ನರೇಗಲ್‌ ಪಿ.ಎಸ್.‌ಐ
ಬೃಹತ್‌ ಪ್ರಮಾಣದ ವಾಹನಗಳ ಓಡಾಟದಿಂದ ಹೊಲಕ್ಕೆ ಹಾಗೂ ವಿವಿಧ ಹಳ್ಳಿಗೆ ಹೋಗುವ ಎಲ್ಲಾ ರಸ್ತೆಗಳು ಹದಗೆಟ್ಟಿವೆ ಇದರಿಂದ ಕೃಷಿಕರು ನಿತ್ಯವು ಪರದಾಡುತ್ತಿದ್ದಾರೆ. ಇದರ ಪರಿಣಾಮ ಮಳೆಗಾಲದಲ್ಲಿ ಜಾಸ್ತಿಯಾಗಲಿದೆ.
- ಈರಪ್ಪ ಚಿನ್ನೂರ ರೈತ
ವಿಂಡ್‌ ಕಂಪನಿಯ ವಾಹನಗಳು ಜನರನ್ನು ಲೆಕ್ಕಿಸದೇ ಸಂಚಾರ ಮಾಡುತ್ತಾರೆ ಇದರಿಂದ ಯಾವುದೇ ಹಳ್ಳಿಗೆ ಹೋದರು ಜೀವ ಕೈಯಲ್ಲಿ ಹಿಡಿದುಕೊಂಡ ಹೋಗಬೇಕಿದೆ
- ಮಲ್ಲಪ್ಪ ಪಲ್ಲೇದ ಜಕ್ಕಲಿ
ರಸ್ತೆ ಪಕ್ಕದ ಹೊಲಗಳು ವಿಂಡ್‌ ಕಂಪನಿಯ ವಾಹನಗಳ ಓಡಾಟಕ್ಕೆ ಏನು ಬೆಳೆಯದಂತಾಗಿವೆ ಇಕ್ಕಟ್ಟಿನ ರಸ್ತೆಗೆ ಬಂದಾಗ ಕೆಲವೊಮ್ಮೆ ಹೊಲಗಳಿಗೆ ನುಗ್ಗುವ ವಾಹನಗಳ ಕುರಿತು ಕೇಳಲು ಹೋದರೆ ನಮ್ಮ ವಿರುದ್ದವೇ ತಿರುಗಿ ಬೀಳುತ್ತಾರೆ
- ಗುಡದಪ್ಪ ಗೋಡಿ ನರೇಗಲ್

ರಸ್ತೆ ಸಂಚಾರಕ್ಕಾಗಿ ಮುಚ್ಚಿರುವ ಕಿರು ಹಳ್ಳ

ನರೇಗಲ್-ಗಜೇಂದ್ರಗಡ ಮಾರ್ಗದ ರಸ್ತೆಯ ನಿಡಗುಂದಿ ಗ್ರಾಮದ ವ್ಯಾಪ್ತಿಗೆ ಒಳಪಡುವ ನಿಡಗುಂದಿಕೊಪ್ಪ ಕ್ರಾಸ್‌ ಹಾಗೂ ನಿಡಗುಂದಿ ಬಸವೇಶ್ವರ ದೇವಸ್ಥಾನದ ನಡುವೆ ನಿಡಗುಂದಿ ಗ್ರಾಮಕ್ಕೆ ಹೋಗುವಾಗ ಎಡಕ್ಕೆ ಬರುವ ಹೊಲವೊಂದರಲ್ಲಿ ಬೃಹತ್‌ ಕಂಬ ಅಳವಡಿಸುತ್ತಿದ್ದಾರೆ. ಆದಕಾರಣ ವಿಂಡ್‌ ಕಂಪನಿಯವರು ತಮ್ಮ ಬೃಹತ್‌ ವಾಹನಗಳ ಸಂಚಾರಕ್ಕಾಗಿ ರಸ್ತೆ ಪಕ್ಕದಲ್ಲಿದ್ದ ಕಿರು ಹಳ್ಳದ ದಾರಿ ವಿಸ್ತರಣೆ ಮಾಡಿದ್ದಾರೆ.

ಫ್ಯಾನ್‌ ಕಂಬ ಹಾಗೂ ಕಬ್ಬಿಣವನ್ನು ಹೊತ್ತು ಸಾಗುವ ವಾಹನಗಳ ಬೇಡಿಕೆಗೆ ಅನುಗುಣವಾಗಿ ದೊಡ್ಡಪ್ರಮಾಣದಲ್ಲಿ ಕಿರುಹಳ್ಳಕ್ಕೆ ಅಡ್ಡಲಾಗಿ ಗರಸು ಹಾಕಿ ಮುಚ್ಚಿದ್ದಾರೆ. ಅಷ್ಟೇ ಅಲ್ಲದೆ ಅಲ್ಲಿ ಬೆಳೆಯಲಾಗಿದ್ದ ಹಾಗೂ ಅರಣ್ಯ ಇಲಾಖೆಯಿಂದ ನೆಡಲಾಗಿದ್ದ ಕೆಲವು ಗಿಡಗಳನ್ನು ನಾಶಪಡಿಸಿದ್ದಾರೆ. ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿ ಅಥವಾ ದೊಡ್ಡ ಗಾತ್ರದ ಪೈಪುಗಳನ್ನು ಜೋಡಣೆ ಮಾಡಿದ ನಂತರ ಸಂಚಾರ ಮಾಡಿದರೆ ತೊಂದರೆ ಆಗುತ್ತಿರಲಿಲ್ಲ. ಕೇವಲ ಗರಸು ಹಾಕಿ ಮುಚ್ಚಿರುವ ಕಾರಣ ಮಳೆಗಾಲದಲ್ಲಿ ನೀರು ಹರಿದು ಹೋಗಲು ದಾರಿ ಇಲ್ಲದಂತಾಗುತ್ತದೆ.

ಮೇಲ್ಬಾಗದ ಹೊಲಗಳಿಂದ ಹರಿದು ಬರುವ ಮಳೆ ನೀರು ಮುಂದಕ್ಕೆ ಹರಿದು ಹೋಗದೆ ಅಕ್ಕಪಕ್ಕದ ಹೊಲಗಳಿಗೆ ನುಗ್ಗುತ್ತದೆ. ಇದರಿಂದ ಮಣ್ಣಿನ ಫಲವತ್ತತೆ ನಾಶವಾಗುತ್ತದೆ ಮತ್ತು ಕೃಷಿ ಮೇಲೆ ದುಷ್ಪರಿಣಾಮ ಬೀರತ್ತದೆ ಎನ್ನುವುದು ರೈತರ ವಾದವಾಗಿದೆ.

ರಸ್ತೆ ಪಕ್ಕದ ಸೂಚನಾ ಫಲಕಗಳ ನಾಶ

ವಾಹನ ಸವಾರರಿಗೆ ದಾರಿ ಹಾಗೂ ಮುಂದಿನ ಗ್ರಾಮದ ಎಷ್ಟು ಕಿ.ಮೀ. ದೂರ ಇದೆ ಎನ್ನುವ ಮಾಹಿತಿಯನ್ನು ನೀಡುತ್ತಿದ್ದ ಸೂಚನಾ ಫಲಕಗಳನ್ನು ವಿಂಡ್‌ ಕಂಪನಿಯವರು ನಾಶಪಡಿಸಿದ್ದಾರೆ.

ಮಾರನಬಸರಿ-ನಿಡಗುಂದಿಕೊಪ್ಪ ಕ್ರಾಸ್‌ ಬಳಿ ಇದ್ದ ಸೂಚನಾ ಫಲಕವು ಗಜೇಂದ್ರಗಡ ರೋಣ ಹಾಲಕೆರೆ ನರೇಗಲ್‌ ಯಲಬುರ್ಗಾ ಕಡೆಗೆ ಅಂದರೆ ನಾಲ್ಕು ದಿಕ್ಕಿನ ಮಾರ್ಗಗಳನ್ನು ಮತ್ತು ಅದರ ಊರುಗಳ ಹೆಸರನ್ನು ತೋರಿಸುತ್ತಿತ್ತು. ಆದರೆ ವಿಂಡ್‌ ಕಂಪನಿಯ ದೊಡ್ಡ ಗಾತ್ರದ ವಾಹನಗಳ ಸಂಚಾರಕ್ಕಾಗಿ ಕಾಮಗಾರಿ ಮಾಡುವಾಗ ರಸ್ತೆ ವಿಸ್ತರಣೆ ಮಾಡುವಾಗ ಸೂಚನಾ ಫಲಕಕ್ಕೆ ಹಾನಿ ಮಾಡಲಾಗಿದೆ. ಆದರೆ ಇಲ್ಲಿಯವರೆಗೂ ಮರು ನಿರ್ಮಾಣಕ್ಕೆ ಮುಂದಾಗಿಲ್ಲ. ಇದರಿಂದ ವಾಹನ ಸವಾರರಿಗೆ ತೊಂದರೆ ಆಗುತ್ತಿದೆ.

ತೆರೆದ ಕೊಳವೆ ಬಾವಿ; ಮಳೆ ನೀರು ಹರಿಯಲು ದಾರಿ ಇಲ್ಲ

ಜಕ್ಕಲಿಗೆ ಹೋಗುವ ಸಂದರ್ಭದಲ್ಲಿ ತೋಟಗಂಟಿ ಬಸವೇಶ್ವರದ ದೇವಸ್ಥಾನದ ಎದುರಿಗೆ ಮಾರನಬಸರಿ ರಸ್ತೆವರೆಗೆ ವಿಂಡ್‌ ಕಂಪನಿಯವರು ನಿರ್ಮಾಣ ಮಾಡಿರುವ ಗರಸು ರಸ್ತೆಯಲ್ಲಿ ಮಳೆ ನೀರು ಹರಿದು ಹಳ್ಳಕ್ಕೆ ತಲುಪಲು ದಾರಿ ಇಲ್ಲದಂತಾಗಿದೆ.

ಈ ಮಾರ್ಗದಲ್ಲಿ ಮೇಲ್ಭಾಗದ ಹೊಲಗಳಿಂದ ಹರಿದು ಬರುವ ನೀರು ಸರುವಿನ ಮೂಲಕ ಹಳ್ಳವನ್ನು ತಲುಪುತಿತ್ತು. ಆದರೆ ಇದನ್ನು ವಿಸ್ತರಣೆ ಮಾಡುವಾಗ ರಸ್ತೆ ಪಕ್ಕದಲ್ಲಿ ನೀರುವ ಹರಿಯಲು ಅರ್ಧದವರೆಗೆ ವ್ಯವಸ್ಥೆ ಮಾಡಿದರೆ ಇನ್ನುಳಿದ ಕಡೆ ಗರಸು ಹಾಕಿ ಮುಚ್ಚಲಾಗಿದೆ. ಆದ್ದರಿಂದ ಮಳೆ ನೀರು ಹರಿಯುವ ವೇಳೆ ರಸ್ತೆಗೆ ಬರುವ ಸಾಧ್ಯತೆಯಿದೆ. ಇದರಿಂದ ರೈತರ ಸಂಚಾರಕ್ಕೆ ತೊಂದರೆಯಾಗುತ್ತದೆ. ರಸ್ತೆ ಪಕ್ಕದಲ್ಲಿ ಹಾಕಲಾಗಿದ್ದ ಕೊಳವೆಗೆ ಕೇಸಿಂಗ್‌ ಪೈಪ್‌ ಹಾಕಿ ಮುಚ್ಚಲಾಗಿತ್ತು. ಆದರೆ ವಿಂಡ್‌ ಕಂಪನಿಯವರು ರಸ್ತೆ ಅಗಲೀಕರಣದ ವೇಳೆ ಕೊಳವೆ ಬಾವಿಗೆ ಹಾಕಲಾಗಿದ್ದ ಪೈಪ್‌ ಒಡೆದಿದ್ದಾರೆ. 

ಅಲ್ಲದೇ ನರೇಗಲ್ ಪಟ್ಟಣದಿಂದ ಗಜೇಂದ್ರಗಡ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ಸ್ಥಾಪಿಸಲಾಗಿರುವ ಖಾಸಗಿ ಕಂಪನಿಯ ಘಟದ ಮೂಲಕ ಸಂಚರಿಸುವ ವಾಹನಗಳಿಂದ ಡಾಂಬರ್‌ ರಸ್ತೆಯಲ್ಲಿ ಬಿದ್ದಿರುವ ಕಲ್ಲಿನ ಕಡಿಗಳು ಬೈಕ್‌ ಸವಾರರಿಗೆ ಅಪಘಾತಕ್ಕೆ ಆಹ್ವಾನ ನೀಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT