ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಕ್ರಾಮಿಕ ರೋಗ ನಿರ್ವಹಣೆ: ಬೇಕಿದೆ ಸಿದ್ಧತೆ

ಜನಜಾಗೃತಿ ಜಾಥಾ, ಲಾರ್ವಾ ಸಮೀಕ್ಷೆ, ಚರಂಡಿ ಸ್ವಚ್ಛತೆಗೆ ಸೂಚನೆ
Last Updated 23 ಮೇ 2022, 3:18 IST
ಅಕ್ಷರ ಗಾತ್ರ

ಗದಗ: ಮುಂಗಾರು ಪೂರ್ವ ಮಳೆ ಆರಂಭಗೊಂಡಿದ್ದು, ನಿರಂತರವಾಗಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದೆ. ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಎಂಬಂತೆ ಮಳೆ ಶುರುವಾದ ನಂತರ ನಗರ, ಪಟ್ಟಣಗಳ ಸ್ವಚ್ಛತೆಗೆ ಗಮನ ಹರಿಸುತ್ತಿದ್ದಾರೆ.

ಅವ್ಯವಸ್ಥೆಯಿಂದ ಕೂಡಿರುವ ಚರಂಡಿ ವ್ಯವಸ್ಥೆ ಸರಿಪಡಿಸಲು ಸಾಕಷ್ಟು ಸಮಯ ಬೇಕಾಗಿದ್ದು, ಕೊಳೆಚೆ ನೀರೆಲ್ಲವೂ ರಸ್ತೆ ಮೇಲೆ ಹರಿಯುತ್ತಿದೆ. ಗುಂಡಿ ಮತ್ತು ಚರಂಡಿಗಳು ಸೊಳ್ಳೆ ಉತ್ಪತ್ತಿ ಹಾಗೂ ಸಾಂಕ್ರಾಮಿಕ ರೋಗ ಹರಡುವ ತಾಣಗಳಾಗಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಅನೈರ್ಮಲ್ಯದಿಂದ ಹೆಚ್ಚುವ ರೋಗಗಳ ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಮುಂಚಿತವಾಗಿಯೇ ವ್ಯವಸ್ಥಿತ ಯೋಜನೆ ರೂಪಿಸಿದೆ. ಲಾರ್ವಾ ಸಮೀಕ್ಷೆ, ಜಾಗೃತಿ ಜಾಥಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮಕ್ಕಳ ಮೂಲಕ ತಿಳಿವಳಿಕೆ ಮೂಡಿಸುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಇದು ಸಾರ್ವಜನಿಕರಿಗೆ ಸ್ವಲ್ಪ ನೆಮ್ಮದಿ ತರಿಸಿದೆ.

‘ಗದಗ ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳ ನಿಯಂತ್ರಣಕ್ಕೆ ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಅವುಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲಾಗುವುದು. ಈ ವರ್ಷದಲ್ಲಿ ಏಪ್ರಿಲ್ ಅಂತ್ಯದವರೆಗೆ 17 ಡೆಂಗಿ, 6 ಚಿಕೂನ್‌ಗುನ್ಯಾ, 17 ಮಲೇರಿಯಾ ಪ್ರಕರಣಗಳು ದೃಢಪಟ್ಟಿವೆ. ಎಲ್ಲರಿಗೂ ಚಿಕಿತ್ಸೆ ನೀಡಿ ಗುಣಪಡಿಸಲಾಗಿದೆ’ ಎಂದು ಡಿಎಚ್‌ಒ ಡಾ.ಜಗದೀಶ್‌ ನುಚ್ಚಿನ ತಿಳಿಸಿದ್ದಾರೆ.

‘ಜಿಲ್ಲೆಯ ವಿವಿಧೆಡೆ ಜಾಥಾಗಳನ್ನು ನಡೆಸುವ ಮೂಲಕ ಡೆಂಗಿ ಜ್ವರದ ಮುಖ್ಯ ಲಕ್ಷಣಗಳು, ರೋಗ ಚಿಕಿತ್ಸೆ ಹಾಗೂ ರೋಗದ ನಿಯಂತ್ರಣ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಮಲೇರಿಯಾ, ಚಿಕೂನ್‌ಗುನ್ಯಾ, ಡೆಂಗಿ ನಿಯಂತ್ರಣಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ನಿರಂತರವಾಗಿ ಲಾರ್ವಾ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿ, ಕೊಳಚೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿಗಳ ಹೂಳೆತ್ತಿಸಬೇಕು ಎಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಸುಶೀಲಾ ಬಿ. ತಿಳಿಸಿದ್ದಾರೆ.

ಕೀಟಜನ್ಯರೋಗ ತಡೆಗೆ ಆರೋಗ್ಯ ಇಲಾಖೆ ಸಿದ್ಧ

ನರಗುಂದ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೊಳ್ಳೆಗಳು ಹೆಚ್ಚಾಗಿ ಕೀಟಜನ್ಯರೋಗಗಳು ಹರಡುವುದು ಸಾಮಾನ್ಯವಾಗಿದೆ. ಆದರೆ ಸೊಳ್ಳೆಗಳ ನಿಯಂತ್ರಣ ಪರಿಣಾಮಕಾರಿಯಾಗುತ್ತಿಲ್ಲ ಎಂದು ನಾಗರಿಕರು ಆರೋಪಿಸುತ್ತಾರೆ.

ಬೇಸಿಗೆಯಲ್ಲಿ ಸೊಳ್ಳೆಗಳಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಜತೆಗೆ ಮಳೆ ಸುರಿಯುತ್ತಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿಗೆ ಆಹ್ವಾನ ನೀಡಿದಂತಿದೆ.

ಸೊಳ್ಳೆಗಳ ನಿಯಂತ್ರಣಕ್ಕೆ ತಾಲ್ಲೂಕು ಆರೋಗ್ಯ ಇಲಾಖೆ ಮಲೇರಿಯಾ ದಿನಾಚರಣೆ, ಡೆಂಗಿ ದಿನಾಚರಣೆ ನಡೆಸಿ ಜಾಗೃತಿ ಕಾರ್ಯಕ್ರಮ ಮೂಡಿಸುತ್ತಿದೆ. ಪಟ್ಟಣ ಹಾಗೂ ಹಳ್ಳಿಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಿ ನೀರನ್ನು ಸಂಗ್ರಹಿಸುವ ಬಗ್ಗೆ ತಿಳವಳಿಕೆ ನೀಡುವ ಕಾರ್ಯಕ್ರಮ ಪ್ರತಿ ಎರಡು ವಾರಕ್ಕೊಮ್ಮೆ ನಡೆಸುತ್ತಿದೆ.

ಸೊಳ್ಳೆ ನಿಯಂತ್ರಣಕ್ಕೆ ಲಾರ್ವಾಹಾರಿ ಮೀನು

ನರೇಗಲ್:‌ ಪಟ್ಟಣದ ವ್ಯಾಪ್ತಿಯಲ್ಲಿ ಮಿತಿಮೀರಿದ ಸೊಳ್ಳೆಗಳ ಕಾಟವನ್ನು ತಡೆಯಲು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಲಾರ್ವಾ ಸಮೀಕ್ಷೆ, ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಇದರ ಜೊತೆಗೆ ಲಾರ್ವಾಹಾರಿ ಮೀನುಗಳನ್ನು ಕೆರೆ, ಕಣವಿ, ಬಾವಿ ಹಾಗೂ ಕೊಳಚೆ ಪ್ರದೇಶ ಸೇರಿದಂತೆ ಇನ್ನಿತರ ಕಡೆ ಬಿಡಲಾಗಿದೆ. ಇದರಿಂದ ಡೆಂಗಿ, ಚಿಕೂನ್‌ಗುನ್ಯ, ಮಲೇರಿಯಾ ರೋಗ ಹರಡುವಿಕೆ ನಿಯಂತ್ರಣಕ್ಕೆ ಕಾರಣವಾಗಿದೆ. ಆದರೆ ಸ್ಥಳೀಯ ಪಟ್ಟಣ ಪಂಚಾಯ್ತಿಯಿಂದ ಸೊಳ್ಳೆ ನಿಯಂತ್ರಣಕ್ಕೆ ಸ್ವಚ್ಛತೆ, ಡಿಡಿಟಿ ಸಿಂಪಡಣೆ ನಡೆಸುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಭರದಿಂದ ಸಾಗಿದೆ ಲಾರ್ವಾ ಸಮೀಕ್ಷೆ

ರೋಣ: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ತಾಲ್ಲೂಕಿನ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆ ಮನೆಗೂ ಆಶಾ ಕಾರ್ಯಕರ್ತೆಯರು ಲಾರ್ವಾ ಸಮೀಕ್ಷೆ ನಡೆಸಿ ತೆರೆದಿಟ್ಟ ನೀರಿನ ದೋಣಿ, ಬ್ಯಾರಲ್‌ಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸಾಕಷ್ಟು ಜಾಗೃತಿ ವಹಿಸಿದ್ದರೂ ರೋಣ, ಗಜೇಂದ್ರಗಡ ತಾಲ್ಲೂಕುಗಳು ಸೇರಿ ಒಂದು ಚಿಕೂನ್‌ಗುನ್ಯಾ, ಐದು ಡೆಂಗಿ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

‘ಆರೋಗ್ಯ ಶಿಕ್ಷಣಾಧಿಕಾರಿ ಮತ್ತು ಅವರ ತಂಡ ಹತ್ತು ಹಲವು ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪಟ್ಟಣ ಪ್ರದೇಶಗಳಲ್ಲಿ ನರ್ಸ್‌ಗಳು ಮನೆ ಮನೆಗೆ ತೆರಳಿ ಲಾರ್ವಾ ಸಮೀಕ್ಷೆ ಮಾಡುತ್ತಿದ್ದಾರೆ. ತೆರೆದಿಟ್ಟ ನೀರಿನ ಗುಂಡಿಗಳನ್ನು ತೆರವುಗೊಳಿಸಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಟಿಎಚ್‌ಒ ಡಾ ಬಿ.ಎಸ್.ಭಜಂತ್ರಿ ತಿಳಿಸಿದ್ದಾರೆ.

‘ಜಾಗೃತಿ ಕಾರ್ಯಕ್ರಮ ಮತ್ತಷ್ಟು ಹೆಚ್ಚಲಿ’

ರೋಣ: ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪಟ್ಟಣದ ಹಲವೆಡೆ ಸಿಕ್ಕಾಪಟ್ಟೆ ತಗ್ಗು ಗುಂಡಿಗಳು ಬಿದ್ದಿರುವುದರಿಂದ ಕೊಳಚೆ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಡೆಂಗಿ, ಮಲೇರಿಯಾ ಭೀತಿ ಎದುರಾಗಿದೆ. ಸ್ಥಳೀಯ ಸಂಸ್ಥೆಯವರು ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಈ ವಿಷಯದಲ್ಲಿ ಜನ ಜಾಗೃತಿ ಮೂಡಿಸಲು ಗ್ರಾಮೀಣ ಮಟ್ಟದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಸ್ಥಳೀಯರಾದ ವಿಜಯ ಕೊಪ್ಪದ, ಗಗನ್ ರಡ್ಡೇರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಡಾ. ಬಸವರಾಜ ಹಲಕುರ್ಕಿ, ಪ್ರಕಾಶ್‌ ಗುದ್ನೆಪ್ಪನವರ, ಚಂದ್ರು ರಾಥೋಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT