ಎರಡನೇ ದಿನ ಸಾರಂಗಿ, ಹಾರ್ಮೋನಿಯಂ ಜುಗಲ್ ಬಂದಿ..!

7
ಪುಲಿಗೆರೆ ಉತ್ಸವ;ಸೋಮೇಶ್ವರ ಸನ್ನಿಧಿಯಲ್ಲಿ ಹರಿದ ಸಂಗೀತ ಸುಧೆ

ಎರಡನೇ ದಿನ ಸಾರಂಗಿ, ಹಾರ್ಮೋನಿಯಂ ಜುಗಲ್ ಬಂದಿ..!

Published:
Updated:
Prajavani

ಲಕ್ಷ್ಮೇಶ್ವರ: ಇಲ್ಲಿನ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪುಲಿಗೆರೆ ಉತ್ಸವದ ಎರಡನೇ ದಿನವಾದ ಶನಿವಾರ ಬೆಳಿಗ್ಗೆ ಉದಯರಾಗದಲ್ಲಿ ಸರಫರಾಜ್ ಖಾನ್ ಅವರ ಸಾರಂಗಿ ಮತ್ತು ದೀಪಕ ಪಾಂಡೆ ಅವರ ಹಾರ್ಮೋನಿಯಂ ಜುಗಲ್ ಬಂದಿ ಶೋತೃಗಳನ್ನು ಸಂಗೀತ ಸುಧೆಯಲ್ಲಿ ಮೀಯಿಸಿತು.

ಸರಫರಾಜ್ ಅವರು ಸಾರಂಗಿಯ ಒಂದೊಂದೇ ತಂತಿಯನ್ನು ಮೀಟುತ್ತಿದ್ದಂತೆ ನಾದದ ಅಲೆಗಳು ಇಡೀ ದೇವಸ್ಥಾನದ ಆವರಣವನ್ನು ವ್ಯಾಪಿಸಿ, ಸಂಗೀತದ ಮಾಂತ್ರಿಕ ಲೋಕ ಸೃಷ್ಟಿಸಿತು.ಈ ಜುಗಲ್‌ಬಂದಿಯು ಚುಮು ಚಳಿಯನ್ನು ಓಡಿಸಿ, ಸಂಗೀತಾಸಕ್ತರಿಗೆ ಬೆಚ್ಚಗಿನ ಅನುಭವ ನೀಡಿತು.

ದೀಪಕ ಪಾಂಡೆ ಅವರು ಹಾರ್ಮೋನಿಯಂನಲ್ಲಿ ತಮ್ಮ ಪ್ರತಿಭೆ ಮೆರೆದರು. ಹಾರ್ಮೋನಿಯಂ ಕೀ ಬೋರ್ಡ್ ಮೇಲೆ ಬೆರಳಾಡಿಸಿ ಕಲಾರಸಿಕರನ್ನು ರಂಜಿಸಿದರು. ಇವರಿಗೆ ತಬಲಾ ಸಾಥ್ ನೀಡಿದ ಸುಮಿತ್ ನಾಯಕ ಅವರು ತಮ್ಮ ಕೈಚಳಕದಿಂದ ಸಭಿಕರ ಮೆಚ್ಚುಗೆಗೆ ಪಾತ್ರರಾದರು.

ಮೋಡಿ ಮಾಡಿದ ದ್ವಂದ್ವ ಗಾಯನ
ನಾಡಿನ ಹೆಸರಾಂತ ಹಿಂದೂಸ್ತಾನಿ ಕಲಾವಿದರಾದ ಶಕ್ತಿ ಪಾಟೀಲ ಮತ್ತು ರಾಧಾ ದೇಸಾಯಿ ಅವರು ಪ್ರಸ್ತುತಪಡಿಸಿದ ದ್ವಂದ್ವ ಗಾಯನ ಸಂಗೀತ ಪ್ರಿಯರನ್ನು ಮೋಡಿ ಮಾಡಿತು.

ಬಸಂತ್ ಮುಕ್ಕಾಲಿ ರಾಗದಲ್ಲಿ ದ್ವಂದ್ವ ಗಾಯನ ಆರಂಭಿಸಿದ ಈ ಕಲಾವಿದೆಯರು ತಮ್ಮ ಕಂಚಿನ ಕಂಠದಿಂದ ಮಧುರವಾದ ಧ್ವನಿಯನ್ನು ಹೊಮ್ಮಿಸಿ ಕಲಾಸಕ್ತರ ಮನಸೂರೆಗೊಂಡರು. ಒಬ್ಬರಿಗಿಂತ ಒಬ್ಬರು ಮಿಗಿಲು ಎನ್ನುವಂತೆ ತಮ್ಮ ಪ್ರತಿಭೆ ಮೆರೆದರು. ದ್ವಂದ್ವ ಗಾಯನವನ್ನು ಸಂಗೀತಾಸಕ್ತರು ಮೈಮರೆತು ಕೇಳಿ ಖುಷಿ ಪಟ್ಟರು.

ನಂತರ ಛೋಡಾ ಕ್ಯಾಲ್‍ನಲ್ಲಿ ಮರಾಠೆ ಭಜನೆ ಹಾಡಿದರಲ್ಲದೆ, ಕೊನೆಯಲ್ಲಿ ಅಕ್ಕಮಹಾದೇವಿಯ ‘ನೆಲದ ಮರೆಯಾ ನಿಧಾನದಂತೆ, ಫಲದ ಮರೆಯಾ ರುಚಿಯಂತೆ’ ವಚನವನ್ನು ಹಾಡಿದರು. ಇವರಿಗೆ ತಬಲಾ ಸಾಥ್ ನೀಡಿದ ಅಲ್ಲಮಪ್ರಭು ಕಡಕೋಳ ಅವರ ಕೈಚಳಕಕ್ಕೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಗುರುಪ್ರಸಾದ ಹೆಗಡೆ ಹಾರ್ಮೋನಿಯಂ ಸಾಥ್ ನೀಡಿದರು. ಭಾರತೀಯ ವಿದ್ಯಾಭವನದ ಅಶೋಕಕುಮಾರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !