ಗುರುವಾರ , ಜುಲೈ 29, 2021
21 °C
ಸಾವಿರಾರು ಲೀಟರ್‌ ಮಳೆ ನೀರು ಹಿಡಿದಿಟ್ಟ ಚೆಕ್ ಡ್ಯಾಂ, ಕೃಷಿ ಹೊಂಡಗಳು

ಗದಗ | ರೈತರಿಗೆ ವರವಾದ ಜಲಾಮೃತ ಯೋಜನೆ

ನಾಗರಾಜ ಎಸ್. ಹಣಗಿ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ಸತತ ಬರಗಾಲಕ್ಕೆ ತುತ್ತಾಗುತ್ತಿದ್ದ ತಾಲ್ಲೂಕಿನಲ್ಲಿ ಹರಿಯುವ ಹಳ್ಳಗಳಿಗೆ ಚೆಕ್‌ಡ್ಯಾಂಗಳನ್ನು ನಿರ್ಮಿಸಿದ ಫಲವಾಗಿ, ಅಂತರ್ಜಲ ವೃದ್ಧಿಸಿದೆ, ನೀರಿನ ಬವಣೆಯೂ ನೀಗಿದೆ. ಈ ವರ್ಷದ ಬೇಸಿಗೆಯಲ್ಲಿ ತಾಲ್ಲೂಕಿನಲ್ಲಿ ಎಲ್ಲೂ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಸಾವಿರಾರು ಕೊಳವೆ ಬಾವಿಗಳು ಮರುಪೂರಣಗೊಂಡು ಸಮೃದ್ಧ ನೀರಿನ ಇಳುವರಿ ಕೊಡುತ್ತಿವೆ. ಇದಕ್ಕೆಲ್ಲಾ ಕಾರಣ, ಈ ಚೆಕ್‌ಡ್ಯಾಂಗಳು.

ಕೃಷಿಹೊಂಡಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇಂಗುಗುಂಡಿ ನಿರ್ಮಾಣ ಹೀಗೆ ಹತ್ತು ಹಲವು ಯೋಜನೆಗಳನ್ನು ಪರಿಣಾಮಕಾರಿಯಾಗಿ ಆಯಾ ಇಲಾಖೆಗಳು ಅನುಷ್ಠಾನ ಮಾಡಿದರ ಫಲವಾಗಿ, ನೀರಿನ ಹಾಹಾಕಾರಕ್ಕೆ ಸ್ವಲ್ಪ ಮುಕ್ತಿ ಲಭಿಸಿದೆ.

ಮಾಗಡಿ ಗ್ರಾಮದಿಂದ ತಂಗೋಡದವರೆಗೆ ಹರಿದು ಮುಂದೆ ತುಂಗಭದ್ರೆಯ ಒಡಲನ್ನು ಸೇರುವ ದೊಡ್ಡ ಹಳ್ಳಕ್ಕೆ ಹತ್ತಾರು ಚೆಕ್ ಡ್ಯಾಂಗಳನ್ನು ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಿಸಿದ್ದು ತಾಲ್ಲೂಕಿಗೆ ದೊಡ್ಡ ವರವಾಗಿದೆ. ಪ್ರತಿ ಮಳೆಗಾಲದಲ್ಲೂ ದೊಡ್ಡ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ಹರಿದುಹೋಗುವುದು ಇದರಿಂದ ತಪ್ಪಿದೆ. ಸಮೀಪದ ದೊಡ್ಡೂರು ಗ್ರಾಮದ ಹಳ್ಳಕ್ಕೆ ತೋಟದ ಅವರ ಹೊಲದ ಹತ್ತಿರ ಕಟ್ಟಿರುವ ಚೆಕ್ ಡ್ಯಾಂನ ನೀರಿನಿಂದ 25 ರಿಂದ 30 ಎಕರೆ ಕೃಷಿ ಭೂಮಿಗೆ ನೀರಿನ ಅನುಕೂಲವಾಗಿದೆ.

2015ರಿಂದ 2020ರವರೆಗೆ ತಾಲ್ಲೂಕಿನಲ್ಲಿ 970 ಕೃಷಿಹೊಂಡಗಳು ನಿರ್ಮಾಣಗೊಂಡಿದ್ದು ಸಾಕಷ್ಟು ನೀರು ಉಳಿತಾಯವಾಗಿದೆ. ವಾರದ ಹಿಂದೆ ಸುರಿದ ಭಾರಿ ಮಳೆಗೆ ಸಮೀಪದ ಯಳವತ್ತಿ, ಮಾಡಳ್ಳಿ, ಯತ್ನಳ್ಳಿ ಗ್ರಾಮಗಳಲ್ಲಿನ ಕೃಷಿಹೊಂಡಗಳಿಗೆ ಸಾಕಷ್ಟು ನೀರು ಹರಿದು ಬಂದಿದೆ. ಕೃಷಿ ಇಲಾಖೆ ಜಲಾಮೃತ ಯೋಜನೆಯಡಿ ರೈತರ ಹೊಲಗಳಲ್ಲೇ ದೊಡ್ಡ ದೊಡ್ಡ ಇಂಗು ಗುಂಡಿಗಳನ್ನು ನಿರ್ಮಿಸಿ ಅಲ್ಲಿ ನೀರು ನಿಲ್ಲುವಂತೆ, ಇಂಗುವಂತೆ ಮಾಡುವ ಯೋಜನೆಯನ್ನೂ ಜಾರಿಗೆ ತಂದಿದೆ.

‘ಶ್ಯಾಬಳ ಗ್ರಾಮದ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್, ಒಡೆಯರಮಲ್ಲಾಪುರ ಹಳ್ಳಕ್ಕೆ ಚೆಕ್‌ಡ್ಯಾಂ ಮತ್ತು   ಹಲವು ಕೃಷಿಹೊಂಡಗಳನ್ನು ನನ್ನ ಕ್ಷೇತ್ರ ವ್ಯಾಪ್ತಿಯಡಿ ನಿರ್ಮಿಸಿ ಮಳೆ ನೀರು ಪೋಲಾಗದಂತೆ ನೋಡಿಕೊಡಿದ್ದೇನೆ’ ಎಂದು ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್‌.ಪಿ ಬಳಿಗಾರ ಹೇಳಿದರು.

’ತಾಲ್ಲೂಕಿನಲ್ಲಿ ಇನ್ನೂ ಅನೇಕ ಹಳ್ಳಗಳು ಹರಿದಿದ್ದು ಅಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಅವಕಾಶ ಇದೆ. ಸದ್ಯ ನಿರ್ಮಾಣಗೊಂಡಿರುವ ಚೆಕ್ ಡ್ಯಾಂಗಳಲ್ಲಿ ಹೂಳು ತುಂಬಿಕೊಂಡಿದ್ದು ಅದನ್ನು ತೆಗೆಸುವ ಕೆಲಸವನ್ನು ಸಣ್ಣ ನೀರಾವರಿ ಇಲಾಖೆ ಮಾಡಬೇಕು’ ಎಂದು ಬಾಲೆಹೊಸೂರು ಗ್ರಾಮದ ಫಕ್ಕೀರೇಶ ಮ್ಯಾಟಣ್ಣವರ ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು