ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹2 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಕಳ್ಳತನ

ಗದಗ ಜಿಲ್ಲೆ ನರೇಗಲ್‌ ಹೋಬಳಿಯಲ್ಲಿ ನಡೆದ ಘಟನೆ; ಬೆಳೆಗೆ ರೈತರ ಕಾವಲು
Last Updated 11 ಜನವರಿ 2020, 10:49 IST
ಅಕ್ಷರ ಗಾತ್ರ

ಗದಗ/ನರೇಗಲ್: ಒಣಮೆಣಸಿನಕಾಯಿ ಧಾರಣೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಜಿಲ್ಲೆಯ ನರೇಗಲ್‌ ಹೋಬಳಿ ವ್ಯಾಪ್ತಿಯ ತೋಟಗಂಟಿ ಗ್ರಾಮದಲ್ಲಿ ಗುರುವಾರ ರಾತ್ರಿ, ಜಮೀನಿನಲ್ಲಿ ರಾಶಿ ಹಾಕಿದ್ದ ಅಂದಾಜು ₹2 ಲಕ್ಷ ಮೌಲ್ಯದ ಮೆಣಸಿನಕಾಯಿಯನ್ನು ಕಳ್ಳರು ವಾಹನದಲ್ಲಿ ಹೇರಿಕೊಂಡು ಹೋದ ಘಟನೆ ನಡೆದಿದೆ.

ತೋಟಗಂಟಿ ಗ್ರಾಮದ ರೈತ ಕೃಷ್ಣ ಹನಮಂತಗೌಡ ಪಾಟೀಲ ಬೆಳೆ ಕಳೆದುಕೊಂಡ ರೈತ. ಇವರು 12 ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಕಟಾವಿನ ನಂತರ ಮೆಣಸಿನಕಾಯಿಯನ್ನು ಜಕ್ಕಲಿ ಮಾರ್ಗದ ಖಾಲಿ ಜಮೀನೊಂದರಲ್ಲಿ ಒಣಗಲು ಹಾಕಿದ್ದರು. ರಾತ್ರಿ ವೇಳೆ ಅದಕ್ಕೆ ತಾಡಪತ್ರಿ ಹೊದೆಸಿದ್ದರು. ಗುರುವಾರ ರಾತ್ರಿ 10 ಗಂಟೆಯವರೆಗೆ ಜಮೀನಿನಲ್ಲೇ ಕಾವಲಿದ್ದ ಅವರು, ಅಂದು ಕೃಷ್ಣ ಹುಣ್ಣಿಮೆ ಇದ್ದಿದ್ದರಿಂದ ಕುಟುಂಬ ಸದಸ್ಯರನ್ನು ಯಲ್ಲಮ್ಮನ ಗುಡ್ಡಕ್ಕೆ ಕಳುಹಿಸಲು ಗ್ರಾಮಕ್ಕೆ ಹೋದಾಗ, ಕಳ್ಳರು ಕೈಚಳಕ ತೋರಿಸಿದ್ದಾರೆ.

ಗ್ರಾಮಕ್ಕೆ ಹೋಗಿ ಒಂದು ಗಂಟೆ ನಂತರ ಮರಳಿ ಜಮೀನಿಗೆ ಬಂದಾಗ ರೈತನಿಗೆ ಮೆಣಸಿನಕಾಯಿ ಕಳುವಾಗಿರುವುದು ಗಮನಕ್ಕೆ ಬಂದಿದೆ. ಸಮೀಪದಲ್ಲೇ ವಾಹನದ ಚಕ್ರದ ಗುರುತು ಕಾಣಿಸಿದೆ. ಬೈಕ್‌ನಲ್ಲಿ ಇದನ್ನು ಹಿಂಬಾಲಿಸಿದಾಗ ದೂರದಲ್ಲಿ ಟಾಟಾಏಸ್‌ ವಾಹನ ಸಾಗುತ್ತಿರುವುದು ಕಂಡಿದೆ. ಹತ್ತಿರ ಹೋಗಿ ಜೋರಾಗಿ ಕೂಗಿದಾಗ, ಕಳ್ಳರು ವಾಹನ ನಿಲ್ಲಿಸಿ, ರೈತನತ್ತ ಒಂದೇ ಸಮನೆ ಕಲ್ಲುಗಳನ್ನು ಎಸೆದಿದ್ದಾರೆ. ‘ಇದರಿಂದ ಭಯಗೊಂಡ ನಾನು ಮನೆಗೆ ಓಡಿ ಬಂದೆ. ಮೊಬೈಲ್‌ ಅನ್ನು ಮನೆಯಲ್ಲೇ ಬಿಟ್ಟು ಬಂದಿದ್ದರಿಂದ ಮನೆಯವರನ್ನೂ ಸಂಪರ್ಕಿಸಲು ಆಗಲಿಲ್ಲ. ನಂತರ ನರೇಗಲ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದೆ’ ಎಂದುಕೃಷ್ಣ ಹನಮಂತಗೌಡರು ಹೇಳಿದರು.

‘ಪ್ರಕರಣ ದಾಖಲಿಸಿಕೊಂಡು, ಸ್ಥಳ ಪರಿಶೀಲನೆ ನಡೆಸಿದ್ದೇವೆ. ಒಣಮೆಣಸಿನಕಾಯಿ ರಾಶಿ ಹಾಕಿದ್ದ ಸ್ಥಳದವರೆಗೆ ವಾಹನ ಬಂದಿರುವ ಗುರುತು ಇದೆ’ ಎಂದು ನರೇಗಲ್ ಪಿಎಸ್‌ಐ ರಾಜೇಶ ಬಟಗುರ್ಕಿ ತಿಳಿಸಿದರು.

ಒಂದೂವರೆ ತಿಂಗಳ ಹಿಂದೆ ಈರುಳ್ಳಿ ಬೆಲೆ ಕೆ.ಜಿಗೆ ₹150ರ ಗಡಿ ದಾಟಿದಾಗ ನರೇಗಲ್‌ ಹೋಬಳಿಯ ಗುರುಬಸಯ್ಯ ಕಳಕಯ್ಯ ಪ್ರಭುಸ್ವಾಮಿಮಠ ಎಂಬ ರೈತ ಜಮೀನಿನಲ್ಲಿ ಬೆಳೆದಿದ್ದ ₹1 ಲಕ್ಷ ಮೌಲ್ಯದ ಈರುಳ್ಳಿಯನ್ನು ಕಳ್ಳರು ರಾತ್ರಿ ಕಿತ್ತುಕೊಂಡು ಹೋಗಿದ್ದರು. ಈಗ ಕಳ್ಳರ ಕಣ್ಣು ಮೆಣಸಿನಕಾಯಿಯತ್ತ ನೆಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT