ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿ ಹೇಳಿದ್ದಕ್ಕೆ ದೊಡ್ಡಮ್ಮನನ್ನೇ ಕೊಂದರು

ಐದು ದಿನಗಳಲ್ಲೇ ಪ್ರಕರಣ ಭೇದಿಸಿದ ಗದಗ ಪೊಲೀಸರು;ಎಸ್‌ಪಿ ಯತೀಶ್‌ ಪ್ರಶಂಸೆ
Last Updated 16 ನವೆಂಬರ್ 2020, 5:14 IST
ಅಕ್ಷರ ಗಾತ್ರ

ಗದಗ: ಅವಳಿ ನಗರವನ್ನು ಬೆಚ್ಚಿ ಬೀಳಿಸಿದ್ದ ವೃದ್ಧೆ ಕೊಲೆ ಪ್ರಕರಣವನ್ನು ಪೊಲೀಸರು ಐದು ದಿನಗಳಲ್ಲೇ ಭೇದಿಸಿದ್ದು, ಭಾನುವಾರ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಜೈಲ್‌ ರೋಡ್‌ ನಿವಾಸಿಯಾದ ಧನುಷ್‌ (22) ಹಾಗೂ ವಿನಯ್‌ ಬಂಧಿತ ಆರೋಪಿಗಳು.

ಗದಗ ನಗರದ ಕೆ.ಸಿ. ರೋಡ್‌ ನಿವಾಸಿಯಾದ ‍ಪುಷ್ಪಾ (65) ನ.11ರಂದು ಕೊಲೆಯಾಗಿದ್ದರು. ಆರೋಪಿ ಧನುಷ್‌, ಪುಷ್ಪಾ ಅವರ ತಂಗಿಯ ಮಗ ಎಂದು ‍ಪೊಲೀಸರು ತಿಳಿಸಿದ್ದಾರೆ.

‘ನ.10ರಂದು ಸ್ನೇಹಿತನ ಜತೆಗೆ ಶಿವಮೊಗ್ಗದಿಂದ ಗದಗಕ್ಕೆ ಬಂದಿದ್ದ ಧನುಷ್‌ ಆ ದಿನ ರಾತ್ರಿ ದೊಡ್ಡಮ್ಮನ ಮನೆಯಲ್ಲೇ ಉಳಿದುಕೊಂಡಿದ್ದ. ನ.11ರ ಬೆಳಿಗ್ಗೆ ದೊಡ್ಡಮ್ಮನ ಮನೆಯಲ್ಲೇ ಇಬ್ಬರೂ ತಿಂಡಿ ತಿಂದಿದ್ದಾರೆ. ಆನಂತರದಲ್ಲಿ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಸಿಟ್ಟಿಗೆದ್ದ ಆರೋಪಿಗಳು ಪುಷ್ಪಾ ಅವರ ತಲೆ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿದ್ದಾರೆ. ಕತ್ತಿಯಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಪುಷ್ಪಾ ಅವರ ಮೈಮೇಲಿದ್ದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ’ ಎಂದು ಎಸ್‌ಪಿ ಯತೀಶ್‌ ಎನ್‌. ತಿಳಿಸಿದ್ದಾರೆ.

ಬುದ್ಧಿ ಹೇಳಿದ್ದಕ್ಕೆ ಕೊಲೆ: ಕೆಲಸಕ್ಕೆ ಹೋಗದೆ ತಿರುಗಾಡಿಕೊಂಡಿದ್ದ ಧನುಷ್‌ಗೆ ದೊಡ್ಡಮ್ಮ ಪುಷ್ಪಾ ಅವರು ಆಗಾಗ ಬುದ್ಧಿ ಹೇಳುತ್ತಿದ್ದುದೇ ಕೊಲೆಗೆ ಕಾರಣ ಎನ್ನಲಾಗಿದೆ.

‘ಪುಷ್ಪಾ ಅವರು ಶಿವಮೊಗ್ಗದಲ್ಲಿರುವ ತಂಗಿಗೆ ಆಗಾಗ ಕರೆಮಾಡಿ, ಮಗನಿಗೆ ಸರಿಯಾಗಿ ಬುದ್ಧಿ ಹೇಳು. ಸುಮ್ಮನೆ ತಿರುಗಾಡಿಕೊಂಡು ಇದ್ದರೆ ಭವಿಷ್ಯದ ಗತಿ ಏನು? ಎಂದು ತಿಳಿಹೇಳುತ್ತಿದ್ದರು. ಆಗ ಧನುಷ್‌ ತಾಯಿ ಮಗನಿಗೆ ಕೆಲಸಕ್ಕೆ ಸೇರು ಎಂದು ಒತ್ತಾಯಿಸುತ್ತಿದ್ದರು. ಈ ವಿಚಾರವಾಗಿ ತಾಯಿ ಮತ್ತು ಧನುಷ್‌ ನಡುವೆ ಜಗಳ ನಡೆಯುತ್ತಿತ್ತು. ಇದರಿಂದ ಸಿಟ್ಟಿಗೆದ್ದ ಧನುಷ್‌ ಇಷ್ಟಕ್ಕೆಲ್ಲಾ ಕಾರಣ ದೊಡ್ಡಮ್ಮನೇ ಕಾರಣ ಎಂದು ನ.11ರಂದು ಸ್ನೇಹಿತನ ಜತೆಗೂಡಿ ಪುಷ್ಪಾ ಅವರನ್ನು ಕೊಂದಿದ್ದಾನೆ’ ಎಂದು ಎಸ್‌ಪಿ ಯತೀಶ್‌ ಎನ್‌. ತಿಳಿಸಿದ್ದಾರೆ.

ಸಿಪಿಐ ಭೀಮನಗೌಡ ಎ.ಬೀರಾದಾರ, ಎಸ್‌ಐ ಎಂ.ಜಿ.ನಾಯಕ,ಎಎಸ್‌ಐ ಆರ್‌.ಜಿ.ಬೇವಿನಕಟ್ಟಿ ಸಿಬ್ಬಂದಿಯಾದ ಪಿ.ಎಚ್‌.ದೊಡ್ಡಮನಿ, ಚಂದ್ರು ದೊಡ್ಡಮನಿ, ಎಸ್‌.ಸಿ.ಕೊರಡೂರ, ಆರ್‌.ಐ.ಗುಂಜಳ, ಪಿ.ಸಿ. ಪಾಟೀಲ, ಕೆ.ಎಂ.ಮುಲ್ಲಾನವರ, ಎ.ಪಿ.ದೊಡ್ಡಮನಿ, ಎ.ಎಫ್‌.ಹಣಜಿ, ಬಸವವರಾಜ ಗುಡ್ಲಾನೂರ, ಡಿ.ಎಚ್‌.ಮಂಜಲಾಪುರ, ಎಸ್‌.ಸಿ.ನೇಕಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಸುಳಿವು ಸಿಗದಂತೆ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬೆಟಗೇರಿ ಬಡಾವಣೆ ‍ಪೊಲೀಸರು ಚಾಕಚಕ್ಯತೆಯಿಂದ ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲ ಪೊಲೀಸರಿಗೆ ಎಸ್‌ಪಿ ಅವರು ಪ್ರಶಂಸಾ ಪತ್ರ ನೀಡಿ, ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT