ಗುರುವಾರ , ಮಾರ್ಚ್ 30, 2023
24 °C
ವಿಶ್ವವಿದ್ಯಾಲಯದ ಆವರಣಕ್ಕೆ ಹೊಸರಂಗು ನೀಡಿದ ಮುಂಗಾರು

ಗದಗ: ಸಾಬರಮತಿ ಆಶ್ರಮ ಪ್ರವಾಸಿಗರಿಗೆ ಮುಕ್ತ

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ: ನಾಗಾವಿ ಬಳಿ ಇರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯದ ಆವರಣದಲ್ಲಿನ ಸಾಬರಮತಿ ಆಶ್ರಮ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದ್ದು ಗಾಂಧಿ ಚಿಂತನೆ, ತತ್ವಾದರ್ಶಗಳನ್ನು ಯುವಜನತೆಗೆ ದಾಟಿಸುವ ಚಟುವಟಿಕೆಗಳಿಗೆ ಮತ್ತೇ ಚಾಲನೆ ದೊರೆತಿದೆ.

ಕೋವಿಡ್‌ ಎರಡನೇ ಅಲೆ ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಸಾಬರಮತಿ ಆಶ್ರಮಕ್ಕೆ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿತ್ತು. ಈಗ ಸೋಂಕು ಇಳಿಮುಖಗೊಂಡಿದ್ದು ಸರ್ಕಾರ ಪ್ರವಾಸಿತಾಣಗಳ ಭೇಟಿಗೆ ಅವಕಾಶ ನೀಡಿ ಪರಿಷ್ಕೃತ ಆದೇಶ ಹೊರಡಿಸಿದೆ.

‘ಸಾಬರಮತಿ ಆಶ್ರಮ ಈಗ ಗದಗ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವಾಗಿ ಗುರುತಿಸಿಕೊಂಡಿದೆ. ಆಶ್ರಮ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಜುಲೈ 1ರಿಂದ ಅವಕಾಶ ಕಲ್ಪಿಸಲಾಗಿದ್ದು, ಇಲ್ಲಿಗೆ ಬಂದವರು ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕ್ರಮವಹಿಸಲಾಗುವುದು’ ಎಂದು ಕುಲಸಚಿವ ಪ್ರೊ. ಬಸವರಾಜ ಎಲ್‌.ಲಕ್ಕಣ್ಣನವರ ತಿಳಿಸಿದ್ದಾರೆ.

‘ಲಾಕ್‌ಡೌನ್‌ಗೂ ಮುನ್ನ ನಡೆಯುತ್ತಿದ್ದಂತಹ ಎಲ್ಲ ಚಟುವಟಿಕೆಗಳನ್ನೂ ಪುನರಾಂಭಿಸಲಾಗಿದೆ. ಆಶ್ರಮದಲ್ಲಿ 500ಕ್ಕೂ ಹೆಚ್ಚು ಪುಸ್ತಕಗಳಿದ್ದು, ಅವುಗಳ ಪರಿಚಯ ಮತ್ತು ಪರಾಮರ್ಶೆ ಕಾರ್ಯಕ್ರಮ ನಡೆಯಲಿದೆ. ಜತೆಗೆ ಗಾಂಧಿ ಚಿಂತನ– ಮಂಥನ, ಸತ್ಸಂಗ ಕಾರ್ಯಕ್ರಮಗಳು ಎಂದಿನಂತೆ ಆಶ್ರಮದಲ್ಲಿ ನಡೆಯಲಿವೆ. ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯೆಯರಿಗೆ ನೀಡುತ್ತಿದ್ದ ಆಹಾರ ಮೌಲ್ಯವರ್ಧನೆ ಮತ್ತು ಮಾರಾಟಕ್ಕೆ ಸಂಬಂಧಿಸಿದ ತರಬೇತಿ ಕಾರ್ಯಕ್ರಮ ಕೂಡ ಮುಂದುವರಿಯಲಿದೆ’ ಎಂದು ಸಾಬರಮತಿ ಆಶ್ರಮದ ಸಂಚಾಲ ಪ್ರಕಾಶ್‌ ಎಸ್‌. ಮಾಚೇನಹಳ್ಳಿ ತಿಳಿಸಿದ್ದಾರೆ. 

ಈ ಸಲದ ಮುಂಗಾರು ವಿಶ್ವವಿದ್ಯಾಲಯದ ಆವರಣಕ್ಕೆ ಹೊಸಬಗೆಯ ರಂಗು ನೀಡಿದ್ದು, ಎಲ್ಲೆಲ್ಲೂ ಚಿಗುರಿರುವ ಹಸಿರಿನ ಸೊಬಗು ಎದೆಗೆ ಹೂಬಾಣ ಹೂಡುತ್ತದೆ. ಅಷ್ಟೇ ಅಲ್ಲದೆ, ‘ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಮಾತನಾಡಬೇಡ’ ಎಂಬ ಸಂದೇಶ ಸಾರುವ ಮೂರು ಕೋತಿಗಳ ಪ್ರತಿಮೆಯನ್ನು ಉದ್ಯಾನದಲ್ಲಿ ನೋಡುವ ಅವಕಾಶ ಪ್ರವಾಸಿಗರಿಗೆ ಬೋನಸ್ಸಾಗಿ ಸಿಗಲಿದೆ.

ಆಶ್ರಮಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಗಾಂಧಿ ಜೀವನ ಸಂದೇಶ ಹಾಗೂ ಆಶ್ರಮದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಪ‍್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5.30ರವರೆಗೆ ಪ್ರವಾಸಿಗರು ಭೇಟಿ ನೀಡಬಹುದು.
ಪ್ರಕಾಶ ಎಸ್. ಮಾಚೇನಹಳ್ಳಿ, ಸಂಚಾಲಕರು, ಸಾಬರಮತಿ ಆಶ್ರಮ

ಸರ್ಕಾರದ ಪರಿಷ್ಕೃತ ಎಸ್‌ಒಪಿ ಪ್ರಕಾರ ಸಾಬರಮತಿ ಆಶ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆಶ್ರಮಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಗೈಡ್‌ ಸಂಪೂರ್ಣ ಮಾಹಿತಿ ಒದಗಿಸಿಕೊಡುತ್ತಾರೆ.
ಪ್ರೊ. ಬಸವರಾಜ ಎಲ್‌.ಲಕ್ಕಣ್ಣನವರ, ಕುಲಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು