ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ತುಟ್ಟಿಯಾದ ಮೇವು, ಟ್ರ್ಯಾಕ್ಟರ್ ಶೇಂಗಾ ಹೊಟ್ಟಿನ ಬೆಲೆ ₹25 ಸಾವಿರ!

Published 2 ಮಾರ್ಚ್ 2024, 5:07 IST
Last Updated 2 ಮಾರ್ಚ್ 2024, 5:07 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಈ ವರ್ಷ ತಾಲ್ಲೂಕಿನಲ್ಲಿ ಉಂಟಾಗಿರುವ ಭೀಕರ ಬರಗಾಲದ ಪರಿಣಾಮ ಜಾನುವಾರುಗಳಿಗೆ ಹೊಟ್ಟು ಮತ್ತು ಮೇವಿನ ಕೊರತೆಯ ಸಮಸ್ಯೆ ಎದುರಾಗಿದೆ.

ಪ್ರತಿವರ್ಷ ರೈತರು ತಮ್ಮ ದನಕರುಗಳ ಆಹಾರಕ್ಕಾಗಿ ಶೇಂಗಾ, ಬಿಳಿಜೋಳ ಬಿತ್ತನೆ ಮಾಡುವುದು ಸಂಪ್ರದಾಯ. ಅದರಂತೆ ಈ ವರ್ಷ ಕೂಡ ಸಾವಿರಾರು ಹೆಕ್ಟೇರ್‌ನಲ್ಲಿ ಶೇಂಗಾ ಮತ್ತು ಬಿಳಿಜೋಳ ಬಿತ್ತನೆ ಮಾಡಿದ್ದರು. ಆದರೆ ಸಕಾಲಕ್ಕೆ ಮಳೆ ಆಗದ ಕಾರಣ ಬೆಳೆ ಬರಲಿಲ್ಲ. ಇದರಿಂದಾಗಿ ಮೇವಿನ ಕೊರತೆ ಉಂಟಾಗಿದ್ದು ರೈತರು ಜಾನುವಾರುಗಳನ್ನು ಸಾಕಲು ಕಷ್ಟಪಡುತ್ತಿದ್ದಾರೆ.

ಬಹಳಷ್ಟು ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ವಿಶೇಷವಾಗಿ ಅಡರಕಟ್ಟಿ, ದೊಡ್ಡೂರು, ಸೂರಣಗಿ, ಗೋವನಾಳ, ಗೊಜನೂರು, ಬಟ್ಟೂರು ಸೇರಿದಂತೆ ಎಲ್ಲ ಹದಿನಾಲ್ಕು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ದನಕರುಗಳ ಸಾಕಣೆ ಹೆಚ್ಚಾಗಿದೆ. ಅದರಲ್ಲೂ ದೊಡ್ಡೂರು ಗ್ರಾಮದ ಉಂಡೇನಹಳ್ಳಿ ಮತ್ತು ಮುನಿಯನ ತಾಂಡಾ ಹಾಗೂ ಗೊಜನೂರು ಗ್ರಾಮದ ಅಕ್ಕಿಗುಂದ ತಾಂಡಾದಲ್ಲಿ ಜಾನುವಾರುಗಳ ಸಂಖ್ಯೆ ಅಧಿಕವಾಗಿದೆ.

ಈ ವರ್ಷ ಮಳೆ ಆಗದ ಕಾರಣ ಕೃಷಿಯಲ್ಲಿ ರೈತರಿಗೆ ನಷ್ಟ ಉಂಟಾಗಿದ್ದು ಹೈನುಗಾರಿಕೆ ಅವರ ಕೈ ಹಿಡಿದಿದೆ. ಆದರೆ ಇಲ್ಲಿಯೂ ಮೇವಿನ ಕೊರತೆ ಅವರನ್ನು ಕಾಡುತ್ತಿದೆ.

ಪ್ರಸ್ತುತ ವರ್ಷ ಎರೆಭೂಮಿಯಲ್ಲಿ ಮಾತ್ರ ಜೋಳ ಬೆಳೆದಿದೆ. ಮಸಾರಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಜೋಳ ಸಂಪೂರ್ಣ ಹಾಳಾಗಿದೆ. ಹೀಗಾಗಿ ಬೆಳೆದಷ್ಟು ಸೊಪ್ಪಿಗೆ ಭಾರಿ ಬೇಡಿಕೆ ಬಂದಿದೆ. ಈ ಕಾರಣಕ್ಕಾಗಿ ಅದರ ಬೆಲೆಯೂ ಗಗನಮುಖಿ ಆಗುತ್ತಿದ್ದು ರೈತರನ್ನು ಮತ್ತೆ ಕಂಗೆಡಿಸಿದೆ. ಒಂದು ಟ್ರ್ಯಾಕ್ಟರ್ ಜೋಳದ ಸೊಪ್ಪಿಯ ಬೆಲೆ ಈಗ ₹ 8 ಸಾವಿರ ದಾಟಿದೆ. ಇನ್ನು ಲಭ್ಯ ಇರುವ ಅಲ್ಪಸ್ವಲ್ಪ ಶೇಂಗಾ ಹೊಟ್ಟಿನ ಬೆಲೆ ಕೇಳಿಯೇ ರೈತರು ಭಯ ಬೀಳುವಂತಾಗಿದೆ. ಒಂದು ಟ್ರ್ಯಾಕ್ಟರ್ ಶೇಂಗಾ ಹೊಟ್ಟಿನ ಬೆಲೆ ಈಗಾಗಲೇ ₹25 ಸಾವಿರ ದಾಟಿದ್ದು ಮುಂದಿನ ದಿನಗಳಲ್ಲಿ ಈ ಬೆಲೆ ಇನ್ನೂ ಹೆಚ್ಚಾಗುವ ಲಕ್ಷಣಗಳು ಕಾಣುತ್ತಿವೆ.

‘ಈ ವರ್ಷ ಮಳಿ ಇಲ್ಲದ್ದಕ್ಕ ಹೊಟ್ಟು, ಸೊಪ್ಪಿ ದುಬಾರಿ ಆಗ್ಯಾವು. ಮಳೆಗಾಲ ಬರತನ ಹೊಟ್ಟು ಸೊಪ್ಪಿಗೆ ರೊಕ್ಕ ಹಾಕಬೇಕಾಗೇತ್ರಿ’ ಎಂದು ಅಡರಕಟ್ಟಿ ಗ್ರಾಮದ ರೈತರ ಕಲ್ಲಪ್ಪ ಆತಂಕ ವ್ಯಕ್ತಪಡಿಸಿದರು.

‘ಮಳೆ ಕೊರತೆಯಿಂದಾಗಿ ಈ ವರ್ಷ ತಾಲ್ಲೂಕಿನ ದನಕರುಗಳಿಗೆ ಹೊಟ್ಟು, ಸೊಪ್ಪಿಗೆ ಬರ ಬಂದಿದೆ. ಕಾರಣ ಸಂಬಂಧಿಸಿದ ತಾಲ್ಲೂಕಾಡಳಿತ ದನಕರುಗಳಿಗೆ ಮೇವಿನ ಕೊರತೆ ಆಗದಂತೆ ಸೂಕ್ತ ವ್ಯವಸ್ಥೆ ಮಾಡಬೇಕು’ ಎಂದು ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಾಕಪ್ಪ ಸಾತಪುತೆ ತಾಲ್ಲೂಕಾಡಳಿಕ್ಕೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT