ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲೆಗೆ ರಜತ ಮಹೋತ್ಸವ ಸಂಭ್ರಮ: ಅಭಿವೃದ್ಧಿಯಲ್ಲಿ ಕಾಣದ ಹೋರಾಟದ ಕಿಚ್ಚು

ಮುದ್ರಣ ಕಾಶಿಯ ಅಭಿವೃದ್ದಿಗೆ ಬೇಕಿದೆ ಬದ್ಧತೆ
Last Updated 5 ಆಗಸ್ಟ್ 2022, 2:27 IST
ಅಕ್ಷರ ಗಾತ್ರ

ಗದಗ: ಯಾವುದೇ ಜಿಲ್ಲೆಯ ಇತಿಹಾಸದಲ್ಲಿ 25 ವರ್ಷಗಳು ಪೂರ್ಣಗೊಳ್ಳುವುದು ದೊಡ್ಡ ಮೈಲುಗಲ್ಲು. ಅವಿಭಜಿತ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟು ಗದಗ ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಒಮ್ಮೆ ಸಿಂಹಾವಲೋಕನ ಮಾಡಿದರೆ ಭ್ರಮನಿರಸನ ಕಾಡುತ್ತದೆ.

ಪ್ರತ್ಯೇಕ ಜಿಲ್ಲೆ ರಚನೆಗಾಗಿ ನಡೆದಿದ್ದ ಅಂದಿನ ಹೋರಾಟದ ಕಿಚ್ಚು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಆದರೆ, ಜಿಲ್ಲೆ ರಚನೆಯಾದ ನಂತರ ಅಭಿವೃದ್ದಿ ವಿಚಾರದಲ್ಲಿ ಆ ಕಾವನ್ನು ಜನಪ್ರತಿನಿಧಿಗಳು ತಮ್ಮ ಎದೆಗಿಳಿಸಿಕೊಳ್ಳಲಿಲ್ಲ ಎಂಬುದು ಬೇಸರದ ಸಂಗತಿ. ಈ ಬಗ್ಗೆ ಸಾರ್ವಜನಿಕರು ಇಂದಿಗೂ ಕೂಡ ವಿವಿಧ ಸಂದರ್ಭಗಳಲ್ಲಿ ಬಹಿರಂಗವಾಗಿಯೇ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಪ್ರತ್ಯೇಕ ಜಿಲ್ಲೆಯ ಉದಯದ ಇತಿಹಾಸದ ಹಿಂದೆ ವಿವಿಧ ಬಗೆಯ ಹೋರಾಟಗಳ ಅಧ್ಯಾಯಗಳಿವೆ. ಆ ಅಧ್ಯಾಯಗಳ ಬಗ್ಗೆ ಒಬ್ಬೊಬ್ಬರೂ ಒಂದೊಂದು ರೀತಿಯ ಅಭಿಪ್ರಾಯ ಮಂಡಿಸುತ್ತಾರೆ. ಒಂದು ಘಟನೆಗೆ ಮೂರು ರೀತಿಯ ವ್ಯಾಖ್ಯಾನ ಕೊಡುತ್ತಾರೆ. ಅದೇನೇ ಇರಲಿ, ಪ್ರತ್ಯೇಕ ಜಿಲ್ಲೆ ಮಾಡಿಯೇ ತೀರಬೇಕು ಎಂಬ ಆಗ್ರಹದಿಂದ ಇಲ್ಲಿನ ಗಾಂಧಿ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಹೋರಾಟಗಾರರೊಬ್ಬರು ಬೆಂಕಿ ಹಚ್ಚಿಕೊಂಡಿದ್ದರು. ತೀವ್ರತರನಾದ ಸುಟ್ಟಗಾಯಗಳಿಂದ ಅವರು ಮೃತಪಟ್ಟಿದ್ದರು. ಅವರ ಸಾವು ಹೋರಾಟದ ಕಿಚ್ಚಿಗೆ ಮತ್ತಷ್ಟು ಇಂಬು ನೀಡಿತ್ತು. ಸಾವು ಖಂಡಿಸಿ ಕೆಲವರು ನಗರಸಭೆ, ತಹಶೀಲ್ದಾರ್‌ ಕಚೇರಿಗೆ ಬೆಂಕಿ ಇಟ್ಟರು. ಇದರಿಂದಾಗಿ ಅಲ್ಲಿದ್ದ ದಾಖಲೆಗಳೆಲ್ಲವೂ ಬೆಂಕಿಗೆ ಆಹುತಿಯಾಗಿದ್ದವು. 1997ಕ್ಕಿಂತ ಹಿಂದಿನ ಯಾವುದೇ ದಾಖಲೆಗಳು ಬೇಕಿದ್ದರೂ ಈಗಲೂ ಸಿಗುವುದಿಲ್ಲ. ದಾಖಲೆಗಳ ನಾಶದ ಹಿಂದಿನ ಉದ್ದೇಶಕ್ಕೂ ಭಿನ್ನ ವ್ಯಾಖ್ಯಾನಗಳು ಸಿಗುತ್ತವೆ!

‘ಗದಗ ಸಾಹಿತ್ಯ, ಸಂಸ್ಕೃತಿ, ಪರಂಪರೆ ಹಾಗೂ ಪ್ರಾಕೃತಿಕವಾಗಿ ಶ್ರೀಮಂತ ಜಿಲ್ಲೆ. ಆದರೆ, ಅವುಗಳನ್ನು ಬ್ರ್ಯಾಂಡಿಂಗ್‌ ಮಾಡುವಲ್ಲಿ ಜನಪ್ರತಿನಿಧಿಗಳು ಸೋತಿದ್ದಾರೆ. ಗದಗ ಜಿಲ್ಲೆಯಾಗಿದ್ದರ ಪರಿಣಾಮ
ಜಿಲ್ಲಾಧಿಕಾರಿ ಕಚೇರಿ, ಎಸ್‌ಪಿ ಕಚೇರಿಗಳು ಬಂದವಷ್ಟೇ. ತದನಂತರ, ಶಿಕ್ಷಣ ಸಂಸ್ಥೆಗಳು ಬಂದವು. ಇವುಗಳನ್ನು ಹೊರತು ಪಡಿಸಿದರೆ ಇಡೀ ಜಿಲ್ಲೆ ಇಂದಿಗೂ ಮೂಲಸೌಕರ್ಯಗಳಿಗಾಗಿ ಎದುರು ನೋಡುತ್ತಿದೆ. ಮುಂದುವರಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿ ನೋಡಿದರೆ ಹೋರಾಟದ ಹಿಂದಿನ ಕನಸಿಗೆ ತಣ್ಣೀರು ಎರಚಿದಂತೆ ಆಗುತ್ತದೆ’ ಎನ್ನುತ್ತಾರೆ ಪ್ರತ್ಯೇಕ ಜಿಲ್ಲೆ ಹೋರಾಟದಲ್ಲಿ ಭಾಗವಹಿಸಿದ್ದ ಅಂಬರೀಷ್‌ ಹಿರೇಮಠ.

****

ಒಂದು ಜಿಲ್ಲೆ ಹೇಗಿರಬೇಕಿತ್ತೋ ಆ ರೀತಿಯಾಗಿ ಗದಗ ಜಿಲ್ಲೆ ಇಲ್ಲ. ಜಿಲ್ಲೆಯನ್ನು ಅಭಿವೃದ್ಧಿಪಡಿಸುವ ಇಚ್ಛೆ ಜನಪ್ರತಿನಿಧಿಗಳು,ಅಧಿಕಾರಿಗಳಿಗೆ ಇಲ್ಲ. ಅಡ್ಜೆಂಸ್ಟ್‌ಮೆಂಟ್‌ ರಾಜಕಾರಣವೇ ಇದಕ್ಕೆಲ್ಲಾ ಕಾರಣ

- ಅಂಬರೀಷ್‌ ಹಿರೇಮಠ, ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT