ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ- ವಂಚನೆ ಆರೋಪಿ ವಿಜಯ ಶಿಂದೆ ಬಂಧನ

ಸೈಬರ್‌ ಪೊಲೀಸರ ಕಾರ್ಯಾಚರಣೆಗೆ ಎಸ್‌ಪಿ ಶಿವಪ್ರಕಾಶ್‌ ದೇವರಾಜು ಮೆಚ್ಚುಗೆ
Last Updated 20 ಜುಲೈ 2022, 3:58 IST
ಅಕ್ಷರ ಗಾತ್ರ

ಗದಗ: ಅಧಿಕ ಬಡ್ಡಿ, ನಿವೇಶನ ಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ಜನರಿಗೆ ಮೋಸ ಮಾಡಿದ್ದ ಆರೋಪಿ ವಿಜಯ ರಾಘವೇಂದ್ರ ಶಿಂದೆಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಿವಪ್ರಕಾಶ್‌ ದೇವರಾಜು ತಿಳಿಸಿದರು.

ನಗರದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಸ್ಥಳೀಯ ರಾಜೀವ್‌ ಗಾಂಧಿ ನಗರದ ನಿವಾಸಿ ಪುಟ್ಟರಾಜ ಫೈನಾನ್ಸ್‌ ಕಾರ್ಪೊರೇಷನ್‌ ಮಾಲೀಕ ವಿಜಯ ಶಿಂದೆ ಜನರಿಗೆ ಆಮಿಷ ಒಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದ. ವಂಚನೆಗೊಳಗಾದ 25 ಮಂದಿಯಿಂದ ಸುಮಾರು ₹5 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದ್ದ. ಈತನಿಂದ ಮೋಸ ಹೋದವರು ಯಾರಾದರೂ ಇದ್ದಲ್ಲಿ ಮುಂದೆ ಬಂದು ದೂರು ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘ಫೈನಾನ್ಸ್‌ನಲ್ಲಿ ಹಣ ಮತ್ತು ಚಿನ್ನವನ್ನು ಠೇವಣಿ ಮಾಡಿದರೆ ಉತ್ತಮ ಲಾಭ ನೀಡಲಾಗುವುದು ಎಂದು ನಂಬಿಸಿ 2020 ಅಕ್ಟೋಬರ್ 1ರಂದು ಸಂತೋಷ ಪ್ರಭಾಕರ ಮುಟಗಾರ ಅವರಿಂದ ವಿಜಯ ರಾಘವೇಂದ್ರ ಶಿಂದೆ ₹10 ಲಕ್ಷ ಹಾಗೂ 407 ಗ್ರಾಂ ಚಿನ್ನವನ್ನು ತೆಗೆದುಕೊಂಡಿದ್ದರು. ಆದರೆ ಈವರೆಗೆ ಹಣವನ್ನು ಹಿಂದಿರುಗಿಸಿಲ್ಲ. ಹಣವನ್ನು ನೀಡಬೇಕೆಂದು ಕೇಳಿದರೆ ಸತಾಯಿಸಿದ್ದಾರೆ. 15 ದಿನ, ತಿಂಗಳು ನಂತರ ಕೊಡುವೆ ಎಂದು ಹಣ ಮತ್ತು ಚಿನ್ನವನ್ನು ಮರಳಿ ಕೊಡದೇ ವಂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತೋಷ ಮುಟಗಾರ ನೀಡಿದ ದೂರಿನ ಮೇರೆಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಯಿತು’ ಎಂದು ಅವರು ತಿಳಿಸಿದರು.

‘ಡಿಸಿಆರ್‌ಬಿ ಡಿಎಸ್‍ಪಿ ವಿಜಯ ಬಿರಾದಾರ ನೇತೃತ್ವದಲ್ಲಿ ಸೈಬರ್ ಠಾಣೆ ಇನ್‌ಸ್ಪೆಕ್ಟರ್‌ ಮಹಾಂತೇಶ ಟಿ., ಸಿಬ್ಬಂದಿಯಾದ ಎ.ಪಿ.ದೊಡ್ಡಮನಿ, ಎಂ.ವಿ.ಹೂಲಹಳ್ಳಿ, ಎಸ್.ಜಿ.ಹರ್ಲಾಪೂರ, ಸಿ.ಎಲ್.ದೊಡ್ಡಮನಿ ಅವರನ್ನು ಒಳಗೊಂಡ ವಿಶೇಷ ತಂಡ ರಚಿಸಿ ಫೈನಾನ್ಸ್ ಮಾಲೀಕನ ಪತ್ತೆ ಕಾರ್ಯ ಆರಂಭಿಸಲಾಯಿತು. ಜುಲೈ 17ರಂದು ವಿಜಯ ಶಿಂದೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ’ ಎಂದು ಅವರು ವಿವರಿಸಿದರು.

ವಿಜಯ ಶಿಂದೆ ವಿರುದ್ಧ ಕಲಂ 21 ಬಡ್ಸ್ ಕಾಯ್ದೆ (ಬ್ಯಾನಿಂಗ್ ಆಫ್ ಅನ್‌ರೆಗ್ಯುಲೇಡೆಟ್ ಡೆಪಾಸಿಟ್ ಸ್ಕೀಮ್ಸ್‌ ಆ್ಯಕ್ಟ್ 2019 ) ಅಡಿ ತನಿಖೆ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ಎಷ್ಟು ಜನರಿಂದ ಹಣ ಮತ್ತು ಚಿನ್ನವನ್ನು ಸಂಗ್ರಹಿಸಿದ್ದ ಎಂಬುದನ್ನು ತನಿಖೆ ನಡೆಸಿ ಪತ್ತೆಹಚ್ಚಲಾಗುವುದು ಎಂದು ತಿಳಿಸಿದರು.

ಒಸಿ, ಮಟ್ಕಾ, ಗ್ಯಾಂಬ್ಲಿಂಗ್ ಮತ್ತಿತರ ಕೃತ್ಯಗಳ ತಡೆಗೆ ವಿಶೇಷ ಕ್ರಮಕೈಗೊಳ್ಳಲಾಗುತ್ತಿದೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ವ್ಯಕ್ತಿಗಳನ್ನು ಗಡೀಪಾರು ಮಾಡಲು ಕ್ರಮವಹಿಸಲಾಗಿದೆ
ಶಿವಪ್ರಕಾಶ್‌ ದೇವರಾಜು, ಎಸ್‌ಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT