ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಗೆ ಮುಕ್ತಗೊಂಡ ಈಜುಕೊಳ

ಹೊಸತರಂತೆ ಕಂಗೊಳಿಸುತ್ತಿರುವ ಈಜುಕೊಳ; ಸ್ವಚ್ಛತೆಗೆ ಒತ್ತು ನೀಡಲು ಮನವಿ
Last Updated 26 ಸೆಪ್ಟೆಂಬರ್ 2022, 3:10 IST
ಅಕ್ಷರ ಗಾತ್ರ

ಗದಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಕೆ.ಎಚ್‌.ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿರುವ ಈಜುಕೊಳವನ್ನು ₹2.50 ಲಕ್ಷ ವೆಚ್ಚದಲ್ಲಿ ದುರಸ್ತಿಗೊಳಿಸಿದ್ದು, ಇಂದಿನಿಂದ ಸಾರ್ವಜನಿಕರ ಬಳಕೆಗೆ ಮುಕ್ತಗೊಳ್ಳಲಿದೆ. ಗುಣಮಟ್ಟದ ದುರಸ್ತಿ ಕಾರ್ಯ ನಡೆದಿರುವುದರಿಂದ ಮುಂದೆ ಇಲ್ಲಿ ಈಜು ಸ್ಪರ್ಧೆಗಳು ನಡೆಯುವ ಅವಕಾಶ ಕೂಡ ಒದಗಿಬಂದಿದೆ.

ಬಹಳ ದಿನಗಳಿಂದ ನೀರು ಬದಲಿಸದ ಕಾರಣ ಈಜುಕೊಳದ ನೀರು ಹಸಿರಾಗುವ ಹಂತ ತಲುಪಿತ್ತು. ಪಾಚಿ ಕಟ್ಟಿಕೊಂಡಿದ್ದರಿಂದ ಈಜುಪಟುಗಳು ಕೊಳದೊಳಗೆ ಜಾರಿ ಬೀಳುತ್ತಿದ್ದರು. ಹಸಿರುಮಿಶ್ರಿತ ನೀರಿನಲ್ಲೇ ಮಕ್ಕಳು, ಯುವಕರು, ವಯಸ್ಕರು ಅನಿವಾರ್ಯವಾಗಿ ಈಜುತ್ತಿದ್ದರು. ಇದರಿಂದಾಗಿ ಕೆಲವರಿಗೆ ಕಿರಿಕಿರಿ, ಮತ್ತೆ ಕೆಲವರಿಗೆ ಚರ್ಮರೋಗ ಕಾಣಿಸಿಕೊಂಡಿತ್ತು. ಈ ಕುರಿತಾಗಿ ಸಾರ್ವಜನಿಕರಿಂದ ಬಂದ ದೂರುಗಳಿಗೆ ಸ್ಪಂದಿಸಿರುವ ಇಲಾಖೆ ದುರಸ್ತಿ ನಡೆಸಿ, ಈಜಾಡಲು ಗುಣಮಟ್ಟದ ಕೊಳವನ್ನು ಒದಗಿಸಿಕೊಟ್ಟಿದೆ. ಇದಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ನಗರದ ಹೃದಯಭಾಗದಲ್ಲಿರುವ ಈಜುಕೊಳದ ನಿರ್ವಹಣೆ ಸಮರ್ಪಕವಾಗಿ ಇರಲಿಲ್ಲ. ಪಾಚಿ ಕಟ್ಟಿಕೊಂಡ ನೀರಿನಲ್ಲೇ ಈಜಾಡುವ ಪರಿಸ್ಥಿತಿ ಇತ್ತು. ಇದರಿಂದ ಕೆಲವು ಜನರಿಗೆ ಚರ್ಮರೋಗ ಕೂಡ ಕಾಣಿಸಿಕೊಂಡಿತ್ತು. ಹಾಗಾಗಿ, ಈಜು
ಕೊಳದ ದುರಸ್ತಿಗೆ ಕ್ರಮವಹಿಸಲಾಗಿತ್ತು. ಕೊಳದಲ್ಲಿದ್ದ 9 ಲಕ್ಷ ಲೀಟರ್‌ ನೀರನ್ನು ಹೊರಹಾಕಿದ ನಂತರ ಕಟ್ಟಿಕೊಂಡಿದ್ದ ಪಾಚಿ ಎಲ್ಲವನ್ನೂ ತೆಗೆಸಲಾಗಿದೆ. ಹಾಳಾಗಿದ್ದ ಟೈಲ್ಸ್‌ ಜಾಗಕ್ಕೆ ಹೊಸದನ್ನು ಅಳವಡಿಸಲಾಗಿದೆ. ಇಲಾಖೆ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಿದ್ದರಿಂದಾಗಿ, ಈಜುಕೊಳ ಈಗ ಮತ್ತೆ ಹೊಸತರಂತೆ ಕಂಗೊಳಿಸುತ್ತಿದೆ’ ಎನ್ನುತ್ತಾರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ.

‘ಮುಂದಿನ ದಿನಗಳಲ್ಲಿ ಈಜು ಸ್ಪರ್ಧೆಗಳನ್ನು ನಡೆಸುವ ಮತ್ತು ನಗರದ ಈಜುಪಟುಗಳನ್ನು ಕ್ರೀಡೆಗಳಿಗೆ ಸಜ್ಜುಗೊಳಿಸುವ ಉದ್ದೇಶವನ್ನೂ ಹೊಂದಲಾಗಿದೆ. ಈ ಸಂಬಂಧ ಡಿಡಿಪಿಐ ಜತೆಗೆ ಮಾತುಕತೆ ನಡೆಸಲಾಗಿದೆ. ಈಜಿನ ಕೌಶಲ ಗೊತ್ತಿರುವ ಮಕ್ಕಳಿಗೆ ಉಚಿತ ತರಬೇತಿ ನೀಡಿ ಅವರನ್ನು ಸ್ಪರ್ಧೆಗೆ ಅಣಿಗೊಳಿಸಲಾಗುವುದು’ ಎಂದು ಅವರು ಹೇಳಿದರು.

ಯುವತಿಯರು, ಮಹಿಳೆಯರಿಗೆ ಈಜು ತರಬೇತಿ ನೀಡಲು ಅನುಕೂಲಕರ ವಾತಾವರಣ ಸೃಷ್ಟಿಸಲಾಗಿದೆ. ಮಹಿಳಾ ಕೋಚ್‌ಗಳನ್ನೂ ನೇಮಿಸಲಾಗುವುದು. ಸುರಕ್ಷತೆಗಾಗಿ ಕೊಳವನ್ನು ಹೊರತುಪಡಿಸಿ, ಎರಡು ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಜತೆಗೆ ಮಹಿಳಾ ಹೋಂಗಾರ್ಡ್‌ ನೇಮಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ ಎಂದರು.

‘ಈಜುಕೊಳಕ್ಕೆ ತುಂಬಿಸಿರುವ ನೀರು ಪ್ರತಿದಿನ ಶುದ್ಧೀಕರಣಗೊಳ್ಳಲಿದೆ. ಗುಣಮಟ್ಟದ ಕೆಮಿಕಲ್ಸ್‌ ಬಳಸಿರುವುದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ. ಅಂಟುರೋಗಗಳೂ ಬಾಧಿಸುವುದಿಲ್ಲ. ಈಜಿನ ಮಜ ಅನುಭವಿಸಲು ನೆರವಾಗುವಂತೆ ಮ್ಯೂಸಿಕ್‌ ಸಿಸ್ಟಂ ಕೂಡ ಅಳವಡಿಸಲಾಗುವುದು. ಈಜಲು ಬರುವ ಪ್ರತಿಯೊಬ್ಬರೂ ಸ್ವಚ್ಛತೆಗೆ ಗಮನ ನೀಡಬೇಕು. ನೀರಿಗಿಳಿಯುವ ಮುನ್ನ ಹಾಗೂ ಈಜಾಡಿದ ನಂತ ಸ್ನಾನ ಮಾಡಬೇಕು. ಪ್ರತಿಯೊಬ್ಬರೂ ಸ್ವಿಮ್ಮಿಂಗ್‌ ದಿರಿಸು ಧರಿಸುವುದು ಕಡ್ಡಾಯ’ ಎನ್ನುತ್ತಾರೆ ಅವರು.

ಈಜುಪ್ರಿಯರ ಈಜಿನ ಖುಷಿ ಹೆಚ್ಚಿಸುವ ವಾತಾವರಣ ಕಲ್ಪಿಸಲಾಗಿದೆ. ಈಜುಪಟುಗಳು ಇಲ್ಲಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
ವಿಠ್ಠಲ ಜಾಬಗೌಡರ, ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT