ವಿದ್ಯಾರ್ಥಿಗಳೇ ನಮ್ಮ ಬೆಳಕು: ಒಂದೇ ದಿನ ನಿವೃತ್ತಿಯಾದ ಶಿಕ್ಷಕ ದಂಪತಿ

ನರಗುಂದ: ಜನಮೆಚ್ಚಿದ ಶಿಕ್ಷಕರಾಗಿ ಹೆಸರು ಪಡೆದಿದ್ದ ಎಚ್.ಎಸ್. ಬೆಳಕೊಪ್ಪದ ಮತ್ತು ಪಿ.ಎಂ.ಹುಬ್ಬಳ್ಳಿ ಶಿಕ್ಷಕ ದಂಪತಿ ವೃತ್ತಿಯಿಂದ ಒಂದೇ ದಿನ ನಿವೃತ್ತರಾಗಿದ್ದಾರೆ. ಇವರಿಬ್ಬರೂ ಕೂಡ ನರಗುಂದ ತಾಲ್ಲೂಕಿನಲ್ಲಿ ಬರೋಬ್ಬರಿ 32 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ವಿಶೇಷವಾಗಿದೆ.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ಬಾರಿಗೆ ಕನ್ನಡ ಭಾಷಾ ಕಲಿಕೆ ಶಿಕ್ಷಕಿಯಾಗಿ ನೇಮಕಗೊಂಡ ಹುಬ್ಬಳ್ಳಿಯವರು 18 ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಕುರ್ಲಗೇರಿ ಸರ್ಕಾರಿ ಪ್ರೌಢಶಾಲೆ ಹಾಗೂ ಪಟ್ಟಣದ ಉರ್ದು ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಕಗೊಂಡ ಎಚ್.ಎಸ್.ಬೆಳಕೊಪ್ಪದ ಅವರು ಕಲಘಟಗಿ ತಾಲ್ಲೂಕಿನ ದೇವಿಕೊಪ್ಪದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. ನಂತರದ 25 ವರ್ಷಗಳ ಕಾಲ ನರಗುಂದ ತಾಲ್ಲೂಕಿನ ಹಿರೇಕೊಪ್ಪ ಹಾಗೂ ಕಣಕಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಕೊಕ್ಕೊ ತರಬೇತಿಯಲ್ಲಿ ಪರಿಣತರಾದ ಇವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾಪಟುಗಳನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೆ, ಇವರಿಂದ ಮಾರ್ಗದರ್ಶನ ಪಡೆದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತೀಯ ಸೇನೆ ಸೇರಿದ್ದಾರೆ.
ಉಚಿತ ಸೇವೆ ನೀಡಲು ಸಿದ್ಧ: ‘32 ವರ್ಷಗಳಿಂದ ಇಬ್ಬರು ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದೇವೆ. ಪ್ರತಿದಿನ ಇಬ್ಬರೂ ಒಂದೇ ಅವಧಿಗೆ ಮನೆಯಿಂದ ಶಾಲೆಗೆ ಹೋಗುತ್ತಿದ್ದೆವು. ಇದೀಗ ಒಂದೇ ದಿನ ನಿವೃತ್ತಿ ಆಗಿರುವುದು ಸಹ ಖುಷಿ ನೀಡಿದೆ. ವಿದ್ಯಾರ್ಥಿಗಳಿಗೆ ಉಚಿತ ಸೇವೆ ನೀಡಲು ಸಿದ್ಧರಿದ್ದೇವೆ’ ಎಂದು ಬೆಳಕೊಪ್ಪದ ಹೇಳಿದರು.
40 ವರ್ಷಗಳಿಂದ ಇಂದಿನವರೆಗೂ ‘ಪ್ರಜಾವಾಣಿ’ ಓದುತ್ತಿದ್ದೇವೆ. ‘ಪ್ರಜಾವಾಣಿ’ ಓದದ ದಿನ ಶೂನ್ಯಭಾವ ಕಾಡುತ್ತದೆ ಎನ್ನುತ್ತಾರೆ ಶಿಕ್ಷಕ ದಂಪತಿ.
*
ಶಿಕ್ಷಕನಾಗಿ ಸೇವೆ ಸಲ್ಲಿಸಿ ನಿವೃತ್ತಿ ಆಗುತ್ತಿರುವ ಬಗ್ಗೆ ಖುಷಿ ಇದೆ. ಕೊರೊನಾ ಸೋಂಕಿನಿಂದ ಕಳೆದ ಒಂದು ವರ್ಷದಿಂದ ತರಗತಿಗಳನ್ನು ನಡೆಸಲಾಗದ ಬಗ್ಗೆ ನೋವಿದೆ.
–ಬೆಳಕೊಪ್ಪದ, ನಿವೃತ್ತ ಶಿಕ್ಷಕ
*
ವಿದ್ಯಾರ್ಥಿಗಳಿಗೆ ಕಲಿಕೆಯ ಬಗ್ಗೆ ಆಸಕ್ತಿ ಮೂಡಿಸಬೇಕಿದೆ. ಶಿಕ್ಷಕರು ಅಧ್ಯಯನಶೀಲರಾಗಬೇಕು.
–ಪಿ.ಎಂ.ಹುಬ್ಬಳ್ಳಿ, ನಿವೃತ್ತ ಶಿಕ್ಷಕಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.