ಗುಲಾಬಿ ನೀಡಿ ಹೃದಯಸ್ಪರ್ಶಿ ಕೃತಜ್ಞತೆ

ಗದಗ: ಕೆ.ಎಚ್.ಪಾಟೀಲ ಪ್ರತಿಷ್ಠಾನ ಹಾಗೂ ಹುಲಕೋಟಿ ರೂರಲ್ ಮೆಡಿಕಲ್ ಸೊಸೈಟಿ ವತಿಯಿಂದ ತೆರೆದಿದ್ದ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಅವಿರತವಾಗಿ ಕಾರ್ಯನಿರ್ವಹಿಸಿದ ವೈದ್ಯರು, ದಾದಿಯರು ಹಾಗೂ ಸಿಬ್ಬಂದಿಗೆ ಗದಗ ಶಾಸಕ ಎಚ್.ಕೆ.ಪಾಟೀಲ ಗುಲಾಬಿ ಹೂವು ನೀಡುವ ಮೂಲಕ ಹೃದಯಸ್ಪರ್ಶಿ ಕೃತಜ್ಞತೆ ಸಲ್ಲಿಸಿದರು.
35 ದಿನಗಳ ಕಾಲ ತಮ್ಮ ಎಲ್ಲ ಸಮಯವನ್ನು 66 ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮುಡಿಪಿಟ್ಟ ವೈದ್ಯರು ಹಾಗೂ ಸಿಬ್ಬಂದಿಯ ಕಾರ್ಯವನ್ನು ಮನಸಾರೆ ಶ್ಲಾಘಿಸಿದ ಶಾಸಕರು, ‘ಕೋವಿಡ್ ಆಸ್ಪತ್ರೆ ತೆರೆದು ಸಂಕಷ್ಟದಲ್ಲಿದ್ದ ಬಡ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುವು ಮಾಡಿಕೊಟ್ಟಿದ್ದು ಹಾಗೂ ಆ ಕೆಲಸಕ್ಕೆ ನೆರವು ನೀಡಿದ ಎಲ್ಲರಿಗೂ ಮನಃಪೂರ್ವಕವಾಗಿ ನಮನ ಸಲ್ಲಿಸುವೆ. ಇದು ನನ್ನ ಸಾರ್ವಜನಿಕ ಜೀವನದಲ್ಲಿ ಎಂದೂ ಮರೆಯಲಾರದ ಅತ್ಯುತ್ತಮ ಸಾಂಘಿಕ ಸೇವೆ’ ಎಂದು ಹೇಳಿದರು.
‘ನಾವು ಮಾಡಿದ ಕೆಲಸ ಕಡಿಮೆ ಇರಬಹುದು. ಆದರೆ, ನಾವು ಯಾವ ಪರಿಸ್ಥಿತಿಯಲ್ಲಿ ಕೆಲಸ ಮಾಡಿದೆವು ಎಂಬುದು ಗಮನಾರ್ಹ. ನಮ್ಮ ಯೋಜನೆಗೆ ಸ್ಪಷ್ಟ ರೂಪ ನೀಡಿ, ಅತ್ಯುತ್ತಮ ಸೇವೆ ನೀಡಲು ಭೀಮ ಬಲ ತುಂಬಿದ್ದು ಜಿಮ್ಸ್‌ನ ವೈದ್ಯರು’ ಎಂದು ಅವರು ತಿಳಿಸಿದರು.
ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ ಡಾ. ನಾಗನೂರ ಮಾತನಾಡಿ, ‘ದೂರದೃಷ್ಟಿ ವ್ಯಕ್ತಿತ್ವದ ಶಾಸಕ ಎಚ್.ಕೆ.ಪಾಟೀಲ ಅವರು ತಂದೆ ಕೆ.ಎಚ್.ಪಾಟೀಲ ಅವರ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ನಡೆಯುತ್ತಿದ್ದಾರೆ. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಸೋಂಕಿತರಿಗೆ ಅತ್ಯುತ್ತಮ ಸೇವೆ ಒದಗಿಸಿರುವ ವೈದ್ಯರ ತಂಡ, ಮೂರನೇ ಅಲೆಯ ವೇಳೆಯೂ ಸೇವೆ ನೀಡಲು ಸಿದ್ಧರಿದ್ದಾರೆ’ ಎಂದು ಹೇಳಿದರು.
ಮಾಜಿ ಶಾಸಕ ಡಿ.ಆರ್.ಪಾಟೀಲ ಮಾತನಾಡಿ, ‘ಒಂದು ಯೋಜನೆ ಯಶಸ್ವಿಯಾಗಿ ಮುನ್ನಡೆಯುವಂತೆ ಮಾಡಿದ ಕೀರ್ತಿ ಶಾಸಕ ಎಚ್.ಕೆ.ಪಾಟೀಲರಿಗೆ ಸಲ್ಲುತ್ತದೆ. ಮೂರನೇ ಅಲೆಯ ಸಂದರ್ಭದಲ್ಲಿ ಸರ್ವ ಪಕ್ಷಗಳ ಸಮಿತಿ ರಚಿಸಿ, ಇಂತಹ ಯೋಜನೆಗಳ ಮೂಲಕ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸೋಂಕನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಬಹುದು’ ಎಂದು ಅಭಿಪ್ರಾಯಪಟ್ಟರು.
ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ನೆರವಾದ ಎಲ್ಲ ವರ್ಗದ ಸಿಬ್ಬಂದಿಗೂ ಕೆ.ಎಚ್.ಪಾಟೀಲ ಪ್ರತಿಷ್ಠಾನದ ವತಿಯಿಂದ ಗುಲಾಬಿ ಹೂವು ನೀಡಿ ಶುಭಾಶಯ ಸಲ್ಲಿಸಲಾಯಿತು.
ಎಚ್.ಕೆ.ಪಾಟೀಲರ ನೇತೃತ್ವದ ಕೋವಿಡ್ ಕೇರ್ ಆಸ್ಪತ್ರೆ ಸೇವೆ ನೀಡಿದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಹಲವರಿಗೆ ಸ್ಫೂರ್ತಿಯಾಗಿದೆ
ಡಾ. ನೂರಾನಿ, ಹಿರಿಯ ವೈದ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.