ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಐತಿಹಾಸಿಕ ತಾಣಗಳಿಗಿಲ್ಲ ಸೌಕರ್ಯ

ಉತ್ತಮ ರಸ್ತೆ, ವಸತಿ ವ್ಯವಸ್ಥೆಗಳಿಲ್ಲದೆ ಜನತೆ ಹೈರಾಣು
Last Updated 30 ಜನವರಿ 2023, 4:49 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ ಕಿರಿದಾಗಿದ್ದರೂ ಕಲೆ, ಸಾಹಿತ್ಯ, ಸಂಸ್ಕೃತಿ, ಧಾರ್ಮಿಕ ಕ್ಷೇತ್ರಗಳು ಹಾಗೂ ಪ್ರಾಕೃತಿಕ ಸೊಬಗು ಶ್ರೀಮಂತವಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಸಾಕಷ್ಟು ಅವಕಾಶಗಳು ಇದ್ದರೂ ಸರ್ಕಾರ, ಜಿಲ್ಲಾಡಳಿತ ಕ್ರಮವಹಿಸದಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ.

ಹೊರ ಜಿಲ್ಲೆ ಹಾಗೂ ರಾಜ್ಯಗಳಿಂದ ಪ್ರವಾಸಿಗರು ಆಗಾಗ ಭೇಟಿ ನೀಡುವ ಸಾಕಷ್ಟು ಧಾರ್ಮಿಕ, ಐತಿಹಾಸಿಕ, ಪ್ರಾಕೃತಿಕ ತಾಣಗಳಿವೆ. ಆದರೆ, ಪ್ರವಾಸಿಗರಿಗೆ ಬೇಕಿರುವ ಅಗತ್ಯ ಮೂಲಸೌಕರ್ಯಗಳು ಇಲ್ಲದ ಕಾರಣ ತೊಂದರೆ ಅನುಭವಿಸುವಂತಾಗಿದೆ.

ಗದಗ ತಾಲ್ಲೂಕಿನ ಲಕ್ಕುಂಡಿ ಗ್ರಾಮ ಐತಿಹಾಸಿಕವಾಗಿ ಶ್ರೀಮಂತವಾಗಿದೆ. ಆದರೆ, ಪುಸ್ತಕದಲ್ಲಿ ಓದಿ ಮಸ್ತಕದಲ್ಲಿ ಏನೇನೋ ಕಲ್ಪನೆಗಳನ್ನು ಇಟ್ಟುಕೊಂಡು ಬರುವ ಪ್ರವಾಸಿಗರಿಗೆ ಊರಿನ ಚಿತ್ರಣ ಬೇಸರ ತರಿಸುತ್ತದೆ. ಲಕ್ಕುಂಡಿ ಗ್ರಾಮಕ್ಕೆ ತಲುಪಲು ಸರಿಯಾದ ರಸ್ತೆ ಇಲ್ಲ. ಊರಿನಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲ. ಚರಂಡಿ ನೀರು ರಸ್ತೆ ಮೇಲೆ ಹರಿಯುವುದನ್ನು ನೋಡಿದಾಗ ಪೆಚ್ಚೆನಿಸುತ್ತದೆ.

ಅದೇ ರೀತಿಯಾಗಿ, ಗದಗ ನಗರದಲ್ಲಿರುವ ವೀರನಾರಾಯಣ ದೇವಸ್ಥಾನ ಹಾಗೂ ತ್ರಿಕೂಟೇಶ್ವರ ಗುಡಿಗಳು ಮೂಲಸೌಕರ್ಯಗಳಿಲ್ಲದೇ ನಲುಗುತ್ತಿವೆ. ಜಿಲ್ಲಾಡಳಿತ ಇವುಗಳ ಅಭಿವೃದ್ಧಿಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದ್ದುದರಲ್ಲಿ, ಇತ್ತೀಚೆಗೆ ಮರುವೈಭವ ಪಡೆದಿರುವ ಗದಗ ಮೃಗಾಲಯ ಮತ್ತು ಸಾಲುಮರದ ತಿಮ್ಮಕ್ಕ ಉದ್ಯಾನ ಅಚ್ಚುಕಟ್ಟಾಗಿವೆ. ಬಸವೇಶ್ವರ ಪುತ್ಥಳಿ ಸ್ಥಳವನ್ನು ಇನ್ನಷ್ಟು ನಿಗಾ ಮಾಡಬೇಕಿದೆ.

ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳನ್ನು ತಲುಪಲು ಪ್ರಮುಖವಾಗಿ ಉತ್ತಮ ರಸ್ತೆಗಳಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ದಾಟಿಕೊಂಡು ಗಮ್ಯ ತಲುಪಿದರೆ ಅಲ್ಲಿ ಕನಿಷ್ಠ ಸೌಕರ್ಯಗಳಿಗೂ ಕಣ್ಣು-ಬಾಯಿ ಬಿಡುವ ಪರಿಸ್ಥಿತಿ ಇದೆ. ಶೌಚಾಲಯ, ಕುಡಿಯುವ ನೀರು, ಉಳಿದುಕೊಳ್ಳಲು ವಸತಿ ಹಾಗೂ ಹೋಟೆಲ್‌ ವ್ಯವಸ್ಥೆ ಅಭಿವೃದ್ಧಿ ಪಡಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರವಾಸಿಗರ ನಿರಾಸಕ್ತಿ
ಮುಂಡರಗಿ:
ತಾಲ್ಲೂಕಿನ ಗುಮ್ಮಗೋಳ, ಬಿದರಳ್ಳಿ, ಡಂಬಳ, ವಿಠಲಾಪುರ, ಕಪ್ಪತಗುಡ್ಡ ಮೊದಲಾದ ಭಾಗಗಳಲ್ಲಿ ಹಲವಾರು ಪ್ರವಾಸಿ ಹಾಗೂ ಯಾತ್ರಾ ಕ್ಷೇತ್ರಗಳಿವೆ. ಅದರೆ ಅಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರು, ವಿದ್ಯುತ್, ವಸತಿ ಮೊದಲಾದ ಅಗತ್ಯ ಸೌಲಭ್ಯಗಳು ಇಲ್ಲದ್ದರಿಂದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದಾರೆ.

ತಾಲ್ಲೂಕಿನ ಡೊಣಿ ಬಳಿ ಕಪ್ಪತಗುಡ್ಡದ ಕಪ್ಪತಮಲ್ಲಿಕಾರ್ಜುನ ದೇವಸ್ಥಾನವಿದೆ. ಇದು ಕಪ್ಪತಗುಡ್ಡದ ವ್ಯಾಪ್ತಿಯ ಒಂದು ಪ್ರಮುಖ ಯಾತ್ರಾ ಸ್ಥಳವಾಗಿದ್ದು, ಅಲ್ಲಿ ಯಾವ ಸೌಲಭ್ಯಗಳು ಇಲ್ಲ. ಮಳೆಗಾಲದಲ್ಲಿ ಸದಾ ಹಸಿರಿನಿಂದ ಕಂಗೊಳಿಸುವ ಕಪ್ಪತಗುಡ್ಡಕ್ಕೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ ಅಲ್ಲಿ ಅಗತ್ಯ ಸೌಲಭ್ಯಗಳಿಲ್ಲದ್ದರಿಂದ ಪುನಃ ಅಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ.

ಕಪ್ಪತಗಿರಿ ಸಾಲಿನುದ್ದಕ್ಕೂ ಹಲವು ತೀರ್ಥ ಕ್ಷೇತ್ರಗಳಿವೆ. ಶಿಂಗಟಾಲೂರ ವೀರಭದ್ರೇಶ್ವರ ದೇವಸ್ಥಾನ ಹೊರತುಪಡಿಸಿ ಬಹುತೇಕ ಕ್ಷೇತ್ರಗಳಿಗೆ ಮೂಲ ಸೌಲಭ್ಯಗಳಿಲ್ಲ.

ತಾಲ್ಲೂಕಿನ ಗುಮ್ಮಗೋಳ ಗ್ರಾಮದಲ್ಲಿ ತುಂಬಾ ಪ್ರಾಚೀನವಾದ ಹಾಗೂ ಅದ್ಭುತ ಶಿಲ್ಪ ವೈಭವ ಹೊಂದಿರುವ ಗೋಣಿಬಸವೇಶ್ವರ ದೇವಸ್ಥಾನವಿದೆ. ಸದ್ಯ ಗ್ರಾಮಕ್ಕೆ ತೆರಳಲು ಬಸ್ ಸೇರಿದಂತೆ ಯಾವ ಸೌಕರ್ಯಗಳು ಅಲ್ಲಿಲ್ಲ. ಹೀಗಾಗಿ ಪ್ರವಾಸಿಗರು ಅತ್ತ ಸುಳಿಯುತ್ತಿಲ್ಲ. ಸುಂದರ ದೇವಸ್ಥಾನವು ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ಮುಳುಗಡೆಯಾಗಲಿದ್ದು, ಅದರ ಸ್ಥಳಾಂತರ ಅಥವಾ ಪುನರ್ ನಿರ್ಮಾಣಕ್ಕೆ ಈವರೆಗೂ ಯೋಜನೆ ಸಿದ್ಧವಾಗಿಲ್ಲ.

ತಾಲ್ಲೂಕಿನ ಬಿದರಳ್ಳಿ ಗ್ರಾಮದ ಬಿದರಳ್ಳೆಮ್ಮ (ರೇಣುಕಾಂಬಾ) ಹಾಗೂ ವಿಠಲಾಪುರದ ರಸಲಿಂಗ ದೇವರುಗಳಿಗೆ ನಾಡಿನ ವಿವಿಧ ಭಾಗಳಲ್ಲಿ ಭಕ್ತ ಸಮೂಹವಿದೆ. ಅದರೆ ಎರಡೂ ಗ್ರಾಮಗಳಲ್ಲಿ ಭಕ್ತರ ವಸತಿ ಸೇರಿದಂತೆ ಇನ್ನುಳಿದ ಯಾವ ಸೌಲಭ್ಯಗಳಿಲ್ಲ. ಜೊತೆಗೆ ಎರಡೂ ದೇವಸ್ಥಾನಗಳು ಹಿನ್ನೀರಿನ ಬಾಧೆಗೊಳಗಾಗಿವೆ.

ಗಂಗಾಪುರ ಗ್ರಾಮದ ಬಳಿ ಕಪ್ಪತಗುಡ್ಡದ ಮೇಲೆ ಮಜ್ಜಿಗೇರಿ ಬಸವಣ್ಣನ, ಶಿಂಗಟಾಲೂರ ಗ್ರಾಮದ ಬಳಿ ಸಂಜೀವಿನಿ ಹನುಮಪ್ಪನ ದೇವಸ್ಥಾನಗಳಿವೆ. ಈವರೆಗೂ ಅಲ್ಲಿಗೆ ತೆರಳಲು ರಸ್ತೆ ಇಲ್ಲ. ಈಗಿರುವ ಯಾತ್ರಾ ಸ್ಥಳಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಅವೆಲ್ಲ ಜಿಲ್ಲೆಯ ಪ್ರಸಿದ್ಧ ಹಾಗೂ ಸದಾ ಜನಭರಿತ ಯಾತ್ರಾ ಸ್ಥಳಗಳಾಗಲಿವೆ ಎಂಬುದು ಜನಾಭಿಪ್ರಾಯವಾಗಿದೆ.

ಸೌಲಭ್ಯ ವಂಚಿತ ಧಾರ್ಮಿಕ ಕ್ಷೇತ್ರಗಳು
ಶಿರಹಟ್ಟಿ
: ತಾಲ್ಲೂಕಿನರುವ ಬಹುತೇಕ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಮೂಲಸೌಲಭ್ಯಗಳ ಕೊರತೆಯಿದ್ದು, ಇದರಿಂದ ಪ್ರವಾಸೋದ್ಯಮ ಕುಂಠಿತಗೊಂಡಿದೆ. ತಾಲ್ಲೂಕಿನ ವರವಿಯ ಮೌನೇಶ್ವರ, ಶ್ರೀಮಂತಗಡದ ಹೊಳಲಮ್ಮದೇವಿಯ ದೇವಸ್ಥಾನ, ಸಾಸಲವಾಡದ ಶಂಕರಲಿಂಗ ದೇವಸ್ಥಾನ, ಐತಿಹಾಸಿಕ ತಾಣವಾದ ಮಾಗಡಿ ಪಕ್ಷಿಧಾಮವನ್ನು ವೀಕ್ಷಿಸಲು ಹೊರ ರಾಜ್ಯ, ಜಿಲ್ಲೆಗಳಿಂದ ಬರುವ ಪ್ರವಾಸಿಗರಿಗೆ ಹಾಗೂ ಭಕ್ತರ ಸರಿಯಾದ ಮೂಲಸೌಕರ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಈ ತಾಣಗಳಲ್ಲಿ ಶೌಚಾಲಯ, ಸ್ನಾನಗೃಹ, ಕುಡಿಯುವ ಸರಿಯಾದ ನೀರಿನ ಸೌಲಭ್ಯ ಇಲ್ಲ. ವಸತಿಯಲ್ಲಿ ಪ್ರವಾಸಿಗರು ಅನುಭವಿಸುವ ತೊಂದರೆಯಂತೂ ಹೇಳತೀರದು. ಇಂತಹ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕಿದೆ. ಈ ಸ್ಥಳಗಳಲ್ಲಿ ನೀರು, ವಸತಿ, ಶೌಚಾಲಯ, ವಸತಿ ಸೇರಿದಂತೆ ಮುಂತಾದ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಭಕ್ತರು ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಕ್ರಮ ವಹಿಸಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

ಪ್ರವಾಸಿ ಸ್ಥಳಕ್ಕೆ ಬರಲು ಹಿಂದೇಟು
ಡಂಬಳ:
ಸ್ಥಳೀಯ ದೊಡ್ಡಬಸವೇಶ್ವರ ದೇವಸ್ಥಾನ, ಸೋಮೇಶ್ವರ ದೇವಸ್ಥಾನ ಪುರಾತತ್ವ ಇಲಾಖೆಯಿಂದ ಅಭಿವೃದ್ಧಿಗೊಂಡಿವೆ. ಆದರೆ, ಡಂಬಳ ಹೋಬಳಿಯ ಬಹುತೇಕ ಧಾರ್ಮಿಕ ಹಾಗೂ ಪ್ರಾಚೀನ ಕಾಲದ ದೇವಸ್ಥಾನಗಳಲ್ಲಿ ಪ್ರವಾಸಿಗರಿಗೆ ಅಗತ್ಯವಾಗಿ ಬೇಕಿರುವ ಕನಿಷ್ಠ ಮೂಲಸೌಲಭ್ಯಗಳು ಇಲ್ಲದಂತಾಗಿದೆ.

ಗದಗ, ಕೊಪ್ಪಳ, ಧಾರವಾಡ, ಹುಬ್ಬಳ್ಳಿ, ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಡಂಬಳದ ಪ್ರವಾಸಿ ತಾಣಗಳ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ವಿದೇಶದಿಂದಲೂ ಪ್ರವಾಸಿಗರು ಬರುತ್ತಿರುತ್ತಾರೆ. ಪ್ರವಾಸಿಗರಿಗೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಲಭ್ಯಗಳ ಕೊರತೆ ಇದೆ. ಪ್ರವಾಸಿತಾಣಗಳಿಗೆ ಹೋಗಲು ಸೂಕ್ತ ರಸ್ತೆ ವ್ಯವಸ್ಥೆಯೇ ಇಲ್ಲ. ಹೀಗಾಗಿ ಪ್ರವಾಸಿಗರು ಇಲ್ಲಿನ ಸ್ಥಳಗಳಿಗೆ ಭೇಟಿ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈಗ ಕೆಲವೊಂದು ದೇವಸ್ಥಾನಗಳು ಅಭಿವೃದ್ಧಿಯಾಗಿವೆ. ಅಂತೆಯೇ ಎಲ್ಲವೂ ಅಭಿವೃದ್ಧಿಯಾಗಬೇಕಿದೆ. ಪ್ರವಾಸಿಗರಿಗೆ ಸೂಕ್ತ ವಸತಿ ವ್ಯವಸ್ಥೆಯಾಗಬೇಕು. ಸಮರ್ಪಕ ರಸ್ತೆ ನಿರ್ಮಾಣವಾಗಬೇಕು. ಪ್ರವಾಸಿತಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಬೇಕು ಎನ್ನುತ್ತಾರೆ ಸಾಮಾ ಜಿಕ ಕಾರ್ಯಕರ್ತ ಶರಣಪ್ಪ ಶಿರುಂದ, ಡಂಬಳದ ಚಂದ್ರು ಯಳಮಲಿ, ಗುಡದಪ್ಪ ತಳಗೇರಿ.

ಪ್ರಜಾವಾಣಿ ತಂಡ: ಕೆ.ಎಂ.ಸತೀಶ್‌ ಬೆಳ್ಳಕ್ಕಿ, ನಾಗರಾಜ ಎಸ್‌.ಹಣಗಿ, ಲಕ್ಷ್ಮಣ ಎಚ್.ದೊಡ್ಡಮನಿ, ಕಾಶೀನಾಥ ಬಿಳಿಮಗ್ಗದ, ನಿಂಗರಾಜ ಹಮ್ಮಿಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT