ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲಾ ಕಸಾಪಕ್ಕೆ ವಿವೇಕಾನಂದಗೌಡ ಸಾರಥಿ

ಡಿಜಿಟಲೀಕರಣ, ಸ್ಟುಡಿಯೊ ನಿರ್ಮಾಣ, ಮಕ್ಕಳ ಸಮ್ಮೇಳನ ನಡೆಸುವ ಆಶಯ
Last Updated 22 ನವೆಂಬರ್ 2021, 4:33 IST
ಅಕ್ಷರ ಗಾತ್ರ

ಗದಗ: ತೀವ್ರ ಕುತೂಹಲ ಕೆರಳಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸ್ಥಾನದ ಚುನಾವಣೆ ಭಾನುವಾರ ನಡೆದು ಫಲಿತಾಂಶ ಕೂಡ ಪ್ರಕಟಗೊಂಡಿದ್ದು, ಶಿಕ್ಷಕ ಹಾಗೂ ಸಾಹಿತಿ ವಿವೇಕಾನಂದಗೌಡ ಪಾಟೀಲ ಜಯ ಸಾಧಿಸಿದ್ದಾರೆ.

ಜಿಲ್ಲಾ ಸಾರಸ್ವತ ಲೋಕದಲ್ಲಿ ಬದಲಾವಣೆಗಳನ್ನು ತರುವುದಾಗಿ ಹೇಳಿ ಹೊಸ ಕಸುಗಳನ್ನು ಬಿತ್ತಿದ್ದ ವಿವೇಕಾ
ನಂದಗೌಡ ಪಾಟೀಲ ಅವರಿಗೆ ಜಿಲ್ಲಾ ಕಸಾಪ ಆಜೀವ ಸದಸ್ಯರು ಕನ್ನಡದ ತೇರು ಎಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

‘ಕನ್ನಡ ಸಾಹಿತ್ಯ ಪರಿಷತ್‌ ಅನ್ನು ಎಲ್ಲ ಒಳಗೊಳ್ಳುವಿಕೆ ಪರಿಷತ್‌ ಆಗಿಸುವ ಆಶಯದೊಂದಿಗೆ ಈ ಚುನಾವಣೆಯನ್ನು ಎದುರಿಸಿದ್ದೆ. ಕನ್ನಡ ಭವನ ಕೇವಲ ಸಾಹಿತಿಗಳಿಗಷ್ಟೇ ಸೀಮಿತ ಆಗಬಾರದು. ಜಿಲ್ಲೆಯ ಜಾನಪದ ಕಲಾವಿದರು, ಚಿತ್ರ ಕಲಾವಿದರು ಎಲ್ಲರನ್ನೂ ಕೂಡಿಸಿಕೊಂಡು ಕನ್ನಡದ ತೇರು ಎಳೆಯಬೇಕು ಎಂಬುದು ನನ್ನ ಮನದ ಇಂಗಿತವಾಗಿತ್ತು. ಅದಕ್ಕೆ ಓಗೊಟ್ಟ ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ವಲಯ ಕನ್ನಡದ ಸೇವೆ ಮಾಡಲು ಅವಕಾಶ ಮಾಡಿಕೊಟ್ಟಿದೆ’ ಎಂದು ವಿವೇಕಾನಂದಗೌಡ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ ವಾಸಿಸುವ ಅನೇಕರಿಗೆ ನಮ್ಮ ನೆಲದ ಸಾಹಿತ್ಯ, ಸಂಸ್ಕೃತಿ, ವಿಶೇಷತೆಗಳ ಬಗ್ಗೆ ಅರಿವು ಇರುವುದಿಲ್ಲ. ಅದನ್ನು ಅರ್ಥ ಮಾಡಿಸುವ ಸಲುವಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಸಾಹಿತ್ಯ ಪರಿಷತ್‌ನಲ್ಲಿ ಸ್ಟುಡಿಯೊ ನಿರ್ಮಾಣ ಹಾಗೂ ಡಿಜಿಟಲೀಕರಣಕ್ಕೆ ಒತ್ತು ನೀಡುವುದಾಗಿಯೂ ಅವರು ಹೇಳಿದ್ದಾರೆ.

‘ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸುವ ವಿಚಾರವಿದ್ದು, ಮಕ್ಕಳಿಗಾಗಿ 100 ಪುಸ್ತಕಗಳನ್ನು ಹೊರತರುವ ಯೋಚನೆ ಇದೆ. ಇದರಲ್ಲಿ ಜಿಲ್ಲೆಯ ಕವಿಗಳು, ಕಲೆ, ಕಲಾವಿದರು, ಜನಪ್ರಿಯ ವ್ಯಕ್ತಿಗಳ ಪರಿಚಯ, ಸ್ಥಳ ಮಹಿಮೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತಾದ ಮಾಹಿತಿ ಇರಲಿದೆ. ಜತೆಗೆ ಹೆಚ್ಚಿನ ಅನುದಾನ ಸಿಕ್ಕಲ್ಲಿ ಸಾಹಿತ್ಯ ಪರಿಷತ್‌ನಲ್ಲೇ ಒಂದು ಸ್ಟುಡಿಯೊ ನಿರ್ಮಾಣ ಮಾಡಿ ಸ್ಥಳೀಯ ಸಾಹಿತಿಗಳು, ಕಲಾವಿದರನ್ನು ಹೊರ ಜಗತ್ತಿಗೆ ಪರಿಚಯಿಸುವ ಯೋಜನೆ ಕೂಡ ಇದೆ’ ಎನ್ನುತ್ತಾರೆ ಅವರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆಸುವ ಸಾಹಿತ್ಯ ಸಮ್ಮೇಳನಗಳಿಗೆ ಹೊಸ ಸ್ವರೂಪ ನೀಡುವ ಆಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ. ದೊಡ್ಡವರ ಜತೆಗೆ ಮಕ್ಕಳ ಸಮ್ಮೇಳನ ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪಸರಿಸುವ ಶಿಕ್ಷಕರಿಗಾಗಿಯೇ ಪ್ರತ್ಯೇಕವಾಗಿ ಒಂದು ಸಾಂಸ್ಕೃತಿಕ ಉತ್ಸವ ಕೂಡ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಡೆಯುವ ಸಮ್ಮೇಳನಗಳೆಲ್ಲವೂ ನಗರ ಕೇಂದ್ರಿತ ಆಗಿವೆ. ಸಾಹಿತ್ಯದ ಕಂಪನ್ನು ಹಳ್ಳಿ ಹಳ್ಳಿಗೂ ಪಸರಿಸುವ ಉದ್ದೇಶ ನನ್ನದು. ಹಾಗಾಗಿ, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನವನ್ನು ತಾಲ್ಲೂಕು ಕೇಂದ್ರಗಳಲ್ಲಿ, ತಾಲ್ಲೂಕು ಮಟ್ಟದ ಸಮ್ಮೇಳನಗಳನ್ನು ಹೋಬಳಿ, ಹಳ್ಳಿ ಮಟ್ಟದಲ್ಲಿ ನಡೆಸುವ ಉದ್ದೇಶವಿದೆ’ ಎಂದು ಅವರು ತಮ್ಮ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದ್ದಾರೆ.

-ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ಬದಲಾವಣೆ ಆಶಯಕ್ಕೆ ಓಗೊಟ್ಟ ಜಿಲ್ಲಾ ಸಾಹಿತ್ಯ ವಲಯ ನನ್ನ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿದೆ. ಇದು ಎಲ್ಲ ಸಾಹಿತಿಗಳ, ಸಂಸ್ಕೃತಿಯ ಗೆಲುವು

ವಿವೇಕಾನಂದಗೌಡ ಪಾಟೀಲ, ಜಿಲ್ಲಾ ಕಸಾಪದ ನೂತನ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT