ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೇಶ್ವರ: ಮತ್ತೆ ಖಾಲಿಯಾದ ತುಂಗಭದ್ರೆ ಒಡಲು

Published 26 ಮಾರ್ಚ್ 2024, 13:39 IST
Last Updated 26 ಮಾರ್ಚ್ 2024, 13:39 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಹಾವೇರಿ ಜಿಲ್ಲೆ ಮೇವುಂಡಿ ಹತ್ತಿರದ ತುಂಗಭದ್ರಾ ನದಿ ನೀರಿಲ್ಲದೆ ಬಣಗುಡುತ್ತಿದೆ. ಇದರಿಂದಾಗಿ ಲಕ್ಷ್ಮೇಶ್ವರದ ಜನತೆಗೆ ಮತ್ತೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ.

ಮೈಲಾರ ಜಾತ್ರೆ ಪೂರ್ವ ನದಿಗೆ ನೀರು ಬಿಡಲಾಗಿತ್ತು. ಅದು ಇಲ್ಲಿಯವರೆಗೆ ಲಕ್ಷ್ಮೇಶ್ವರಕ್ಕೆ ನೀರು ಪೂರೈಸಲು ಅನುಕೂಲ ಆಗಿತ್ತು. ಆದರೆ ಮತ್ತೆ ಇದೀಗ ನದಿ ಖಾಲಿ ಆಗಿದ್ದು, ಈಗಾಗಲೇ ಪಟ್ಟಣದ ಜನತೆಗೆ ನೀರಿನ ಕೊರತೆ ತಲೆದೋರಿದೆ.

ಪುರಸಭೆ ನೀರನ್ನು ಪೂರೈಸಲು ಹರಸಾಹಸ ಪಡುತ್ತಿದೆ. ಇದೇ ತಿಂಗಳು ಮತ್ತೊಮ್ಮೆ ನದಿಗೆ ನೀರು ಬಿಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅದು ಯಾವಾಗ ಬರುತ್ತದೆಯೋ ಗೊತ್ತಿಲ್ಲ. ಸದ್ಯ ಪುರಸಭೆಯು ಪಟ್ಟಣದಲ್ಲಿರುವ ಕೊಳವೆ ಬಾವಿಗಳ ನೀರು ಪೂರೈಸುತ್ತಿದೆ. ಆದರೂ ಕೆಲ ಭಾಗಗಳಲ್ಲಿ ನೀರಿನ ತೊಂದರೆ ಜನರನ್ನು ಕಾಡುತ್ತಿದೆ.

‘ಮಾರ್ಚ್ 29ಕ್ಕೆ ಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಐದು ದಿನಗಳಲ್ಲಿ ನೀರು ಮೇವುಂಡಿ ಹತ್ತಿರ ನಮ್ಮ ಜಾಕ್‍ವೆಲ್ ತಲುಪುವ ನಿರೀಕ್ಷೆ ಇದೆ. ನಂತರ ಮತ್ತೆ ಎಂದಿನಂತೆ ನದಿ ನೀರು ಪೂರೈಸಲಾಗುವುದು. ಅದಕ್ಕೂ ಪೂರ್ವದಲ್ಲಿ ಜಾಕ್‍ವೆಲ್ ಸಮೀಪ ರೈತರು ಅನಧಿಕೃತವಾಗಿ ನೀರನ್ನು ಬಳಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಡಕ್ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ವಾಸುದೇವ ಸ್ವಾಮಿ ಮತ್ತು ನಾನು ಮೇವುಂಡಿಗೆ ತೆರಳಿ ರೈತರಿಗೆ ಮನವರಿಕೆ ಮಾಡಲಿದ್ದೇವೆ. ಅಲ್ಲಿಯೇ ಕಾಯಂ ಆಗಿ ಪೊಲೀಸ್ ವ್ಯಾನ್ ನಿಲ್ಲಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT