ಮುದ್ರಣ ನಗರಿಗೆ ಮಂಜಿನ ಮುಸುಕು!

7
ರಸ್ತೆ ಪಕ್ಕದಲ್ಲಿ ಬೆಂಕಿ ಹಾಕಿಕೊಂಡು ಮೈ ಕಾಯಿಸಿಕೊಳ್ಳುವ ಅಲೆಮಾರಿಗಳು

ಮುದ್ರಣ ನಗರಿಗೆ ಮಂಜಿನ ಮುಸುಕು!

Published:
Updated:
Deccan Herald

ಗದಗ: ಆಗಷ್ಟೇ ಮಂಜಿನ ಪರದೆ ಸರಿದು ಹರಿಯುತ್ತಿರುವ ಬೆಳಕು. ಮೂಡಣದಲ್ಲಿ ಇನ್ನೇನು ಹೊಂಬಣ್ಣ ಚೆಲ್ಲುತ್ತಾ ಸೂರ್ಯ ಮೂಡುವ ಹೊತ್ತು. ಆನಂದದಿ ಆಗಸದಲ್ಲಿ ಹಾರಾಟ ಪ್ರಾರಂಭಿಸಿದ ಬಾನಾಡಿಗಳ ಕಲರವ. ಇದರ ಮಧ್ಯೆ ಚುಮು ಚುಮು ಚಳಿಯಲ್ಲೇ ಮಫ್ಲರ್‌ ಸುತ್ತಿಕೊಂಡು ವಾಯುವಿಹಾರಕ್ಕೆ ಹೊರಟ ಜನರು. ರಸ್ತೆ ಪಕ್ಕದ ಗುಡಿಸಲ ಮುಂದೆ ಬೆಂಕಿ ಹಾಕಿಕೊಂಡು ಮೈ ಕಾಯಿಸಿಕೊಳ್ಳುತ್ತಿರುವ ಅಲೆಮಾರಿಗಳು. ಕಳೆದೊಂದು ವಾರದಿಂದ ನಗರದಲ್ಲಿ ಕಂಡುಬರುತ್ತಿರುವ ನಸುಕಿನ ದೃಶ್ಯಗಳಿವು.

ಕಳೆದೊಂದು ವಾರದಿಂದ ತಾಪಮಾನ ಸರಾಸರಿ 17 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಡಿಸೆಂಬರ್‌ ತಿಂಗಳ ಚಳಿ ನಿಧಾನವಾಗಿ ಮುದ್ರಣನಗರಿಯನ್ನು ತಬ್ಬಿಕೊಳ್ಳಲು ಪ್ರಾರಂಭಿಸಿದೆ. ಬೆಳಿಗ್ಗೆ ಮತ್ತು ಸಂಜೆ ಮೈಕೊರೆಯುವ ಚಳಿಯ ಅನುಭವವಾಗುತ್ತಿದೆ. ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದ್ದು, ವಾಹನಗಳು ದೀಪ ಹಾಕಿಕೊಂಡು ಸಂಚರಿಸುತ್ತಿವೆ. ಬೆಳಿಗ್ಗೆ ಶಾಲೆಗೆ ಹೊರಟ ಪುಟಾಣಿಗಳು ಚಳಿಯಿಂದ ರಕ್ಷಿಸಿಕೊಳ್ಳಲು, ಸ್ವೆಟರ್‌ ಧರಿಸಿ, ತಲೆಗೆ ಉಣ್ಣೆಯ ಟೋಪಿ ಹಾಕಿಕೊಳ್ಳುತ್ತಿದ್ದಾರೆ.

ಡಿಸೆಂಬರ್‌ ತಿಂಗಳಲ್ಲಿ ಜಿಲ್ಲೆಯ ಕನಿಷ್ಠ ಉಷ್ಣಾಂಶ ಸರಾಸರಿ 16ರಿಂದ 17 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಕಳೆದೊಂದು ವಾರದಿಂದ ತಾಪಮಾನ ಇದೇ ಸರಾಸರಿಗೆ ಇಳಿದಿದೆ.ಇನ್ನೊಂದು ವಾರದಲ್ಲಿ ಉಷ್ಣಾಂಶದಲ್ಲಿ ಇನ್ನಷ್ಟು ಇಳಿಕೆ ಕಂಡುಬರಲಿದೆ ಎಂದು ಹವಾಮಾನ ಇಲಾಖೆಯ ವೆಬ್‌ಸೈಟ್‌ ಮನ್ಸೂಚನೆ ನೀಡಿದೆ.2010ರ ಡಿಸೆಂಬರ್‌ 22ರಂದು ಜಿಲ್ಲೆಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ಅಂದರೆ 9.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು.ಇದೇ ಇದುವರೆಗಿನ ಸಾರ್ವಕಾಲಿಕ ದಾಖಲೆ.
ಹಗಲು ವೇಳೆ ಮೋಡ ಕವಿದ ವಾತಾವರಣ ಮುಂದುವರಿದಿರುವುದರಿಂದ ಬಿಸಿಲಿನ ತಾಪ ಗಣನೀಯವಾಗಿ ಕಡಿಮೆಯಾಗಿದೆ. ಮಧ್ಯಾಹ್ನದ ವೇಳೆ ಕಳೆದೊಂದು ವಾರದಿಂದ ನಗರದಲ್ಲಿ ಸರಾಸರಿ 28ರಿಂದ 29 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಳಿ ತೀವ್ರತೆ ಕಡಿಮೆ ಇದೆ. ಆದರೆ, ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಇದ್ದು, ಶೀತಗಾಳಿಯಿಂದ ಮಕ್ಕಳಿಗೆ ಜ್ವರ, ನೆಗಡಿ ಕಾಣಿಸಿಕೊಂಡಿದೆ’ಎಂದು ನಗರದ ನಿವಾಸಿ ಗೃಹಿಣಿ ಪ್ರಮೀಳಾ ನೀರಲಗಿ ಹೇಳಿದರು.

*
ತೇವಾಂಶದ ಕೊರತೆಯಿಂದ ಹಿಂಗಾರು ಬೆಳೆಗಳು ಒಣಗಲು ಪ್ರಾರಂಭಿಸಿವೆ. ಸದ್ಯ ರಾತ್ರಿ, ಬೆಳಗಿನ ಜಾವ ಮಂಜು ಸುರಿಯುತ್ತಿರುವುದರಿಂದ ಜೋಳ, ಕಡಲೆ ಬೆಳೆಗಳಿಗೆ ಅನುಕೂಲವಾಗಿದೆ.
-ಶರಣಪ್ಪ ಅಂಗಡಿ, ರೈತ

ಪಟ್ಟಿ
ಡಿಸೆಂಬರ್‌ ತಿಂಗಳ ಜಿಲ್ಲೆಯ ಕನಿಷ್ಠ ಉಷ್ಣಾಂಶ
2018; 18.5
2017; 12.2
2016; 13.0
2015; 14.2
2014; 12.3
2011; 10.7
2010; 9.8

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !