ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಕರೆಗೆ 11 ಕ್ವಿಂಟಾಲ್ ಕಡಲೆ ಬೆಳೆದ ಶರಣಪ್ಪ

Last Updated 31 ಜನವರಿ 2011, 11:00 IST
ಅಕ್ಷರ ಗಾತ್ರ


ಗಜೇಂದ್ರಗಡ:
ಈ ಭಾಗದ ಮಳೆಯಾಶ್ರಿತ ಕಪ್ಪು ಮಣ್ಣಿನ ಹಿಂಗಾರಿನ ಪ್ರಮುಖ ಬೆಳೆಯಾಗಿರುವ ಕಡಲೆಗೆ ಮಳೆ ಚೆನ್ನಾಗಿ ಸುರಿದು, ರೋಗ ರುಜೀನಗಳ ಕಾಟವಿಲ್ಲದೇ ಉತ್ತಮ ಇಳುವರಿ ಬಂದಿದೆ ಎಂದರೂ ಅದು ಎಕರೆಗೆ ಆರರಿಂದ ಏಳು ಕ್ವಿಂಟಾಲ. ಆದರೆ, ಶರಣಪ್ಪ ತಳವಾರ ಎಂಬ ರೈತ ಪ್ರಸಕ್ತ ವರ್ಷದ ಹಿಂಗಾರು ಬೆಳೆಗೆ ಕಾಡಿದ ಅಕಾಲಿಕ ಮಳೆ, ಸಣ್ಣ ಪುಟ್ಟ ಕೀಟಗಳ ಹಾವಳಿ, ಅತಿಯಾದ ಕಳೆ, ಕೂಲಿಗಳ ಸಮಸ್ಯೆಗಳ ನಡುವೆಯೂ ಎಕರೆಗೆ 11 ಕ್ವಿಂಟಾಲ ಕಡಲೆ ಬೆಳೆದು, ಭೂತಾಯಿಗೆ ಶರಣೆಂದರೆ ಎಂದಿಗೂ ಕೇಡಿಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

ಸಮೀಪದ ಸೂಡಿ ಗ್ರಾಮದವರಾದ ಶರಣಪ್ಪ ಭೀಮಪ್ಪ ತಳವಾರ, ಮೂರು ಎಕರೆ ಕಡಲೆ ಬಿತ್ತನೆ ಮಾಡಿ ಒಟ್ಟು 32.50 ಕ್ವಿಂಟಾಲ್ ಬೆಳೆ ಬೆಳೆದು ಇತರರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಪ್ರಸಕ್ತ ಹಿಂಗಾರು ಬೆಳೆಗೆ ಅಷ್ಟೊಂದು ಕೀಟಗಳ ಹಾವಳಿ ಇದ್ದಿಲ್ಲ. ಬಿತ್ತನೆಯ ನಂತರದಲ್ಲಿ ಅಕಾಲಿಕ ಮಳೆ ಸುರಿದು ರೈತರಲ್ಲಿ ಸ್ವಲ್ಪ ಆತಂಕ ಸೃಷ್ಟಿಸಿತ್ತಾದರೂ ನಂತರದಲ್ಲಿ ಡಿಸೆಂಬರ್ ಚಳಿಗೆ ಬೆಳೆಗಳೆಲ್ಲ ಚಿಗುರಿ ನಿಂತು ರೈತರು ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ, ಬೆಳೆಗೆ ಹಿಂದೆಂದೂ ಕಾಣಿಸದಷ್ಟು ಕಸ ಬಿದ್ದು ಕಡಿಮೆ ಇಳುವರಿ ಬರುವ ಸೂಚನೆ ನೀಡಿತ್ತು. ಹೀಗಾಗಿ ರೈತರು ಎಕರೆಗೆ ಐದರಿಂದ ಆರು ಚೀಲ ಕಡಲೆ ಇಳುವರಿಯ ನಿರೀಕ್ಷೆಯಲ್ಲಿದ್ದರು.

ಆದರೆ, ಸೂಡಿ ಗ್ರಾಮದ ರೈತ ಶರಣಪ್ಪ  ಭೂತಾಯಿಯ ಮೇಲಿನ ವಿಶ್ವಾಸ ಹುಸಿಯಾಗಲಿಲ್ಲ. ಶ್ರದ್ಧೆಯಿಂದ ಸುರಿಸಿದ ಬೆವರಿನ ಫಲವಾಗಿ ಎಕರೆಗೆ 11ಕ್ವಿಂಟಾಲ್ ಕಡಲೆ ಪೀಕು ತೆಗೆದಿದ್ದಾರೆ.
ಪ್ರತಿ ನಾಲ್ಕೈದು ವರ್ಷಗಳಿಗೊಮ್ಮೆ ಎಕರೆಗೆ 10 ಬಂಡಿ ಕೊಟ್ಟಿಗೆ ಗೊಬ್ಬರ ತುಂಬುವ ಶರಣಪ್ಪ, ಅಗತ್ಯಕ್ಕೆ ತಕ್ಕಂತೆ ಬೆಳೆಗೆ ರಾಸಾಯನಿಕ ಗೊಬ್ಬರ ಮತ್ತು ಔಷಧಗಳನ್ನು ಸಿಂಪಡಿಸುತ್ತಾ ಬಂದಿದ್ದಾರೆ. ಮೂರು ಎಕರೆ ಭೂಮಿಗೆ ಅಂದಾಜು 1.5 ಕ್ವಿಂಟಾಲ್ ಮನೆಯ ಕಡಲೆ ಬೀಜ ಬಿತ್ತನೆ ಮಾಡಿ ಅದಕ್ಕೆ ನಾಲ್ಕು ಚೀಲ ರಾಸಾಯನಿಕ ಗೊಬ್ಬರವನ್ನು ಹಾಕಿದ್ದರು. ಬಿತ್ತನೆ ಮಾಡಿದ 21ನೇ ದಿನದಿಂದ ಒಟ್ಟು ನಾಲ್ಕು ಬಾರಿ ಔಷಧ ಸಿಂಪಡಿಸಿದ್ದಾರೆ. 

ಕಡಲೆ ಬೆಳೆಯ ಅಧಿಕ ಇಳುವರಿ ತೆಗೆದ ಬಗೆಯನ್ನು ವಿವರಿಸುವ ರೈತ ಶರಣಪ್ಪ, ‘ಭೂಮ್ತಾಯಿ ನಂಬಿ ದುಡಿದ್ರ ಆಕೀ ಎಂದೂ ಕೈ ಬಿಡಲ್ಲ. ಏನೋ ಒಂದೊಂದು ಸಲ ಸಿಟ್ಮಾಡ್ಕೊಂಡ್ರು ಮತ್ತೊಮ್ಮೆ ಕೈ ಹಿಡಿತಾಳ. ನಾವ್ ಬರೀ ಕೂಲಿಯಾಳು ನಂಬ್ಕೊಂಡು ಕುಂತ್ರ ಏನು ಆಗಲ್ರಿ, ನಮ್ ಮನ್ಯಾಗ ಐದಾರ ಜನ ಹೊಲ್ದಾಗ ಕೆಲ್ಸ ಮಾಡ್ತೇವಿ. 20 ವರ್ಷದಿಂದ ನನ್ಗಂತ್ರೂ ಇದ ಉದ್ಯೋಗ. ಹಿಂಗಾಗಿ ಏನೋ ಸ್ವಲ್ಪ ಜಾಸ್ತಿ ಬೆಳೀ ಬರ್ತೀದೆ. ಮೂರು ಎಕ್ರೆಗೆ 32.5 ಕ್ವಿಂಟಾಲ್ ಕಡ್ಲಿ ಆಗೇವು. ಸ್ಥಳ್ದಮ್ಯಾಲೆ ಕ್ವಿಂಟಾಲ್‌ಗೆ 2400 ರೂ.ದಂಗ ಮಾರೇನಿ. ದಲಾಲಿ, ಹಮಾಲಿ ಏನು ಇಲ್ಲ. ಇದ ಭೂಮ್ಯಾಗ ಮುಂಗಾರ್ಯಾಗ 15 ಚೀಲ ಹೆಸರು ಆಗಿದ್ವು. ಭೂಮಿಗೆ ಚೋಲೋ ಬದ್ಕ್ ಮಾಡಿದ್ರ ಪೀಕು ಒಳ್ಳೇದು ಬರ್ತೈತಿ’ ಎಂದು ವಿಶ್ವಾಸದಿಂದ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT