ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಳ್ಳವ್ವ ಪಲ್ಲಕ್ಕಿ ಬೇಡಿದಳು...

Last Updated 10 ಜುಲೈ 2011, 9:00 IST
ಅಕ್ಷರ ಗಾತ್ರ

ಮುಂಗಾರು ಆರಂಭದಿಂದ ವರ್ಷದ ಅವಧಿಯಲ್ಲಿ ರೈತರು ಐದು ಬಗೆಯ ಮಣ್ಣಿನ ಪೂಜೆಯನ್ನು ಮಾಡುತ್ತಾರೆ. ಮೊದಲ ಪೂಜೆ ಮಣ್ಣೆತ್ತಿನ ಪೂಜೆ ಮುಗಿದಿದೆ. ಇದೀಗ ಒಂದು ತಿಂಗಳ ಅವಧಿಯವರೆಗೆ ನಡೆಯುವ ಗುಳ್ಳವ್ವನ ಪೂಜೆ ಎಂದು ಕರೆಯಲ್ಪಡುವ ಎರಡನೇ ಮಣ್ಣಿನ ಪೂಜೆಯಲ್ಲಿ ಕೃಷಿಕರು ತೊಡಗಿದ್ದಾರೆ.

ಮಣ್ಣೆತ್ತಿನ ಅಮಾವಾಸ್ಯೆ ಹಾಗೂ ನಾಗರ ಪಂಚಮಿಯ ನಡುವಿನ ಕೊಂಡಿ ಎಂದೇ ಹೇಳಲಾಗುವ ಗುಳ್ಳವ್ವನ ಪೂಜೆಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

ಗುಳ್ಳವ್ವನ ಹೆಸರು ಕ್ಷುದ್ರ ದೇವತೆಗಳ ಸಾಲಿನಲ್ಲಿ ಕಂಡು ಬರುತ್ತದೆ. `ಗುಳ್ಳವ್ವ ದೇವರಲ್ಲ, ಉಡುಕಿ ಗಂಡನಲ್ಲ, ಒಳ್ಳೊಳ್ಳೆವರು ಉಳ್ಳಾಡುವಾಗ ಗುಳ್ಳವ್ವ ಪಲ್ಲಕ್ಕಿ ಬೇಡಿದಳು~ ಎನ್ನುವ ಗಾದೆ ಮಾತುಗಳು ಇದಕ್ಕೆ ಸಾಕ್ಷಿಯಾಗಿವೆ.
ಮಣ್ಣೆತ್ತಿನ ಅಮಾವಾಸ್ಯೆ ನಂತರ ನಾಗರ ಪಂಚಮಿ ವರೆಗೆ ಜನರು ಪ್ರತಿ ಮಂಗಳವಾರ ಸಾಯಂಕಾಲ ಕೆರೆಗೆ ಹೋಗಿ ಮಣ್ಣಿನ ಚೌಕಾಕಾರದ ಪೀಠದ ಮೇಲೆ ಮಣ್ಣಿನ ಮುದ್ರೆಯನ್ನಿಟ್ಟು ಅದರ ಸುತ್ತ ಚುರುಮರಿ (ಮಂಡಕ್ಕಿ) ಹಚ್ಚಿ,

`ಗುಳ್ಳವ್ವನ ಕುಂಡ್ಯಾಗ ಗುಗ್ಗರಿ ಬಿದ್ದಾವ
ಆಯ್ಕ್‌ಂಡು ತಿನ್ನೋ ತಳವಾರ~

ಎಂದು ಹಾಡುತ್ತ ಚುರುಮುರಿ ತೂರುತ್ತ ಸಂಭ್ರಮದಿಂದ ಊರನ್ನು ಪ್ರವೇಶಿಸುತ್ತಾರೆ. ಹೀಗೆ ಬರುವಾಗ

ಗುಳ್ಳವ್ವನ ಮಣ್ಣು ತರಲಿಲ್ಲ
ಗುಲಗಂಜಿ ಹಚ್ಚಿ ಹಾಡಲಿಲ್ಲ
ಸುಳ್ಳ ಬಂತವ್ವ ನಾಗರ ಪಂಚಮಿ ಸುವ್ವನಾರಿ
ಮಾವಿನ ಗಿಡ ಮರೆಯಾಯ್ತು
ತವರ ಮನಿ ದೂರಾಯ್ತು
ಯಾವಾಗ ನೋಡಲೆವ್ವ ತಾಯಿ ಮಾರಿ ಸುವ್ವನಾರಿ

ಎಂದು ಹಾಡುತ್ತಾರೆ.
`ಮಾವಿನ ಗಿಡ~ ಎನ್ನುವ ಪದವನ್ನು ಪದೇ ಪದೇ ಅನ್ನುತ್ತ, ಅಣ್ಣನ ಮಾರಿ, ತಮ್ಮನ ಮಾರಿ ಎಂದು ಜೋಡಿಸಿಕೊಂಡು ಹಾಡುತ್ತ ಗುಳ್ಳವ್ವನ ಮಣ್ಣನ್ನು ಮನೆಗೆ ತರುತ್ತಾರೆ.

ಕೆಲವು ಕಡೆಗಳಲ್ಲಿ ಐದು ವಾರ ಒಂದೇ ತೆರನಾಗಿ ಮೂರ್ತಿಯನ್ನು ಮಾಡಿದರೆ ಇನ್ನು ಕೆಲವು ಕಡೆಗಳಲ್ಲಿ ಒಂದನೇ ಮಂಗಳವಾರ ಲಿಂಗಾಕಾರ, ಎರಡನೇ ಮಂಗಳವಾರ ಗುಡಿಯಾಕಾರ, ಮೂರನೇ ಮಂಗಳವಾರ ಕಟ್ಟೆಯಾಕಾರ, ನಾಲ್ಕನೇ ಮಂಗಳವಾರ ನವಿಲಾಕಾರ ಹಾಗೂ ಐದನೇ ಮಂಗಳವಾರ ಚಂಗಳೆವ್ವನಾಕಾರದ (ಹೆಣ್ಣಿನಾಕಾರ) ಗುಳ್ಳವ್ವನನ್ನು ಮಾಡಿ ಪೂಜಿಸುವುದು ಕಂಡು ಬರುತ್ತದೆ.

ಗುಲಗಂಜಿ, ಕುಸುಬಿಗಳಿಂದ ಅಲಂಕೃತಳಾದ ಗುಳ್ಳವ್ವನಿಗೆ (ಹುಡುಗಿಯರಿಂದ) ಪ್ರತಿ ಮಂಗಳವಾರ ಸಂಜೆ ಪೂಜೆ ನಡೆಯುತ್ತದೆ. ಆಗ ಗುಳ್ಳವ್ವನ ಇದಿರು ಕೆಸರಿನ ಕೋಣ ಕಡಿಯುವುದು (ಹುಡಗರಿಂದ) ನಡೆಯತ್ತದೆ. ಹುಡುಗಿಯರು ಕೆಸರಿನಿಂದ ಮಾಡಿದ ಆರತಿಯನ್ನು ತೂತುಗಳುಳ್ಳ ಡಬ್ಬಿಯಲ್ಲಿಟ್ಟುಕೊಂಡು ಮನೆಮನೆಗೆ ಹೋಗಿ ಗುಳ್ಳವ್ವನನ್ನು ಬೆಳಗುತ್ತಾರೆ.

ಮರುದಿನ (ಪ್ರತಿ ಬುಧವಾರ) ಮಧ್ಯಾಹ್ನ ಗುಳ್ಳವ್ವನ ವಿಸರ್ಜನೆಗೆ ಬನದೂಟಕ್ಕೆ ಹೋಗುತ್ತಾರೆ. ಆಗ ತಲೆಯ ಮೇಲೆ ಗುಳ್ಳವ್ವನನ್ನು ಹಾಗೂ ಬುತ್ತಿಯ ಬುಟ್ಟಿಯನ್ನು ಹೊತ್ತು, ಬುತ್ತಿ ರೊಟ್ಟಿ ಮಾಡಿಕೊಂಡು ಎತ್ತಿನ ಮ್ಯಾಲೆ ಹೇರಿಕೊಂಡು ಯಾವಾಗ ಕಂಡೆನವ್ವ ತಾಯಿ ಮಾರಿ ಸುವ್ವನಾರಿ ಎಂದು ಹಾಡುತ್ತ ಗುಳ್ಳವ್ವನಿಗೆ ಕಾಯಿಲೆ ಬಂದಿದೆ ಎಂದು ನಟಿಸುತ್ತಾರೆ. ಆಗ ವೈದ್ಯನಾಗಿ ಬರುವ ಹುಡುಗ ಔಷಧ ಕೊಟ್ಟು ನಂತರ ಕಾಯಿಲೆ ತೀವ್ರವಾಗಿದೆ ಎನ್ನುವ ಬಗೆಯಲ್ಲಿ ನಟಿಸಿ ಕೊನೆಗೆ ಗುಳ್ಳವ್ವ ಸತ್ತಳೆಂದು ಹೇಳುತ್ತಾನೆ. ಈ ಸ್ದ್ದುದಿ ಕೇಳಿ ವರನ ಪಕ್ಷದ ಅತ್ತೆ, ಮಾವ, ಗಂಡ ಬಂದು ಶೋಕಿಸುತ್ತಾರೆ. ಸತ್ತ ಗುಳ್ಳವ್ವನನ್ನು ಎತ್ತಿ ಒಗೆದು, ಗುಳ್ಳವ್ವನ ಮಣ್ಣು ತರಲಿಲ್ಲಗುಲಗಂಜಿ ಹಚ್ಚಿ ಹಾಡಲಿಲ್ಲ
ಸುಳ್ಳ ಬಂತವ್ವ ನಾಗರ ಪಂಚಮಿ ಸುವ್ವನಾರಿ  ಎಂದು ಹಾಡುತ್ತ ಮನೆಗೆ ಬರುತ್ತಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT