ಸತ್ಯಾಗ್ರಹಕ್ಕೆ ಸರಿಸಾಟಿಯಾದ ಆಯುಧವಿಲ್ಲ: ಕ್ಯಾಪ್ಟನ್ ಕೆ. ರಾಜೇಂದ್ರ

7
ಜಿಲ್ಲಾಡಳಿತದಿಂದ ಗಾಂಧಿ ಜಯಂತಿ ಆಚರಣೆ

ಸತ್ಯಾಗ್ರಹಕ್ಕೆ ಸರಿಸಾಟಿಯಾದ ಆಯುಧವಿಲ್ಲ: ಕ್ಯಾಪ್ಟನ್ ಕೆ. ರಾಜೇಂದ್ರ

Published:
Updated:
Deccan Herald

ರಾಮನಗರ: ಸತ್ಯಾಗ್ರಹವೆಂಬ ಆಯುಧ ಬಳಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿಯವರ ಮಾರ್ಗಕ್ಕೆ ಸರಿಸಾಟಿಯಾದ ಯಾವುದೇ ಆಯುಧವಿಲ್ಲ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಕೆ. ರಾಜೇಂದ್ರ ಹೇಳಿದರು.

ಇಲ್ಲಿನ ಜಿಲ್ಲಾ ಕಚೇರಿಗಳ ಸಂಕೀರ್ಣದ ಸಭಾಂಗಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮಹಾತ್ಮ ಗಾಂಧೀಜಿಯವರ 150 ಜನ್ಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ದೇಶ ರಕ್ಷಣೆಗಾಗಿ ಯೋಧರಿಗೆ ಆಯುಧಗಳ ತರಬೇತಿ ನೀಡಲಾಗುತ್ತದೆ. ಕಷ್ಟ ಕ್ಲಿಷ್ಟಕರ ಸನ್ನಿವೇಶದಲ್ಲಿ ಸೈನಿಕರು ಗಡಿ ರಕ್ಷಣೆಗಾಗಿ ಆಯುಧ ಹಿಡಿದು ನಿಂತಿರುತ್ತಾರೆ. ಬ್ರಿಟಿಷರ ದಾಸ್ಯದಲ್ಲಿದ್ದ ಭಾರತವನ್ನು ಸ್ವಾತಂತ್ರ್ಯವನ್ನಾಗಿಸಲು ಅಹಿಂಸೆ, ಸತ್ಯಾಗ್ರಹ ಎಂಬ ಆಯುಧವನ್ನಿಡಿದು ಜಯ ತಂದುಕೊಟ್ಟ ಗಾಂಧಿಯವರ ಹಾದಿ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈ ಮುಹಿಲನ್ ಮಾತನಾಡಿ, ಮೋಹನ್ ದಾಸ್ ಕರಮಚಂದ್ ಗಾಂಧಿಯವರು ಹುಟ್ಟುವಾಗ ಮಹಾತ್ಮರಾಗಲಿಲ್ಲ, ಅವರು ನಮ್ಮ ನಿಮ್ಮಂತೆ ಸಾಮಾನ್ಯ ಮಾನವರಾಗಿದ್ದರು. ಆದರೆ ಬದುಕಿನಲ್ಲಿ ಮಹಾತ್ಮರಾದರು ಎಂದರು.

ವಿಶ್ವದಲ್ಲಿ ಭಾರತವನ್ನು ಅದು ಪಡೆದ ಸ್ವಾತಂತ್ರ್ಯದ ಆಧಾರದ ಮೇಲೆ ಗುರುತಿಸಲಾಗುತ್ತದೆ. ಸತ್ಯ ಹಾಗೂ ಅಹಿಂಸಾ ಮಾರ್ಗದಲ್ಲಿ ಪಡೆದ ಸ್ವಾತಂತ್ರ್ಯಕ್ಕೆ ಜಗತ್ತಿನಲ್ಲಿ ವಿಶಿಷ್ಟ ಸ್ಥಾನವಿದೆ ಎಂದು ಅವರು ಹೇಳಿದರು.

ಸಾಹಿತಿ ಡಾ. ಮಧುಸೂದನಾಚಾರ್ಯ ಜೋಷಿ ಮಾತನಾಡಿ, ಗಾಂಧೀಜಿಯವರ ಜೀವನವೇ ಅವರು ಜಗತ್ತಿಗೆ ನೀಡಿದ ಸಂದೇಶ. ಅವರಿಗೆ ಜೀವನದಲ್ಲಿ ಎಲ್ಲವೂ ಇತ್ತು. ದಕ್ಷಿಣಾ ಆಫ್ರಿಕಾದಲ್ಲಿ ವರ್ಣಭೇದ ನೀತಿಯನ್ನು ಖಂಡಿಸಿ ವಿದೇಶದಲ್ಲಿ ಮೊದಲು ಸತ್ಯಾಗ್ರಹ ಹೋರಾಟ ಮಾಡಿದರು ಎಂದರು.

ಭಾರತಕ್ಕೆ ಮರಳಿ ಬಂದ ನಂತರ ಸತ್ಯಾಗ್ರಹ, ಅಹಿಂಸೆ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದರು. ಅವರು ಉಪವಾಸಕ್ಕೆ ಕೂರುತ್ತಾರೆಂದರೆ ಅಂದು ದೇಶದೆಲ್ಲೆಡೆ ರೋಮಾಂಚನವಾಗುತ್ತಿತ್ತು. ಉಪವಾಸ ಹಾಗೂ ಸೆರೆಮನೆವಾಸಗಳನ್ನು ಕಂಡಿದ್ದ ಅವರು, 80 ಸಾವಿರ ಕಿ.ಮೀಟರ್ ಕಾಲ್ನಡಿಗೆಯಲ್ಲಿ ದೇಶವನ್ನು ಸುತ್ತಿದ್ದರು ಎಂದರು.

ಅಮೆರಿಕಾದ ಗಾಂಧಿ ಎಂದೇ ಪ್ರಸಿದ್ದರಾದ ಮಾರ್ಟಿನ್ ಲೂಥರ್ ಕಿಂಗ್, 27 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ ನೆಲ್ಸನ್ ಮಂಡೇಲಾ, ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಓಬಾಮ, ಪ್ರಸಿದ್ದ ವಿಜ್ಞಾನಿ ಐನ್‌ಸ್ಟೈನ್‌, ಜಾರ್ಜ್ ಬರ್ನಾಡ್ ಷಾ, ಆಂಗ್ ಸಾನ್ ಸೂಕಿರಂಥ ವಿಶ್ವವಿಖ್ಯಾತರಂತಹ ಹಲವರು ಗಾಂಧಿಜಿಯವರ ಪ್ರಭಾವ ಹಾಗೂ ಪ್ರೇರಣೆಗೆ ಒಳಗಾಗಿದ್ದವರು ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಆರ್. ಪ್ರಶಾಂತ್, ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ. ರಾಜು, ಮುಖಂಡರಾದ ಚಲುವರಾಜು, ರಾ.ಸಿ. ದೇವರಾಜು ಇದ್ದರು.

ಛಾಯಾಚಿತ್ರ ಪ್ರದರ್ಶನ
ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಮಹಾತ್ಮ ಗಾಂಧೀಜಿಯವರ ಅಪೂರ್ವ ಛಾಯಾಚಿತ್ರಗಳ ಪ್ರದರ್ಶನ ಹಾಗೂ ಜೀವನದ ಯಶೋಗಾಥೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ಮಹಾತ್ಮ ಗಾಂಧಿಜಿಯವರ 150ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪಾಪು ಗಾಂಧಿ – ಗಾಂಧಿ ಬಾಪು ಆದ ಕಥೆ, ಗಾಂಧಿ- 150 ಎಂಬ ಜನಪದ ಹಾಗೂ ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳನ್ನು ಗಣ್ಯರು ಬಿಡುಗಡೆ ಮಾಡಿದರು.

ಗಾಯಕಿ ರಮಣಿ ಹಾಗೂ ತಂಡದವರು ಭಜನೆಗಳನ್ನು ಪ್ರಸ್ತುತ ಪಡಿಸಿದರು.

* ಸತ್ಯ ಹಾಗೂ ಅದಕ್ಕಿರುವ ಶಕ್ತಿ ಅಪಾರ ಎಂದು ನಂಬಿ ಗಾಂಧಿ ಆ ಮಾರ್ಗದಲ್ಲಿ ನಡೆದರು. ಆ ಹಾದಿಯಲ್ಲಿ ನಡೆಯುವುದೇ ನಿಜವಾದ ಯಶಸ್ಸು
-ಮುಲ್ಲೈ ಮುಹಿಲನ್‌, ಸಿಇಒ, ರಾಮನಗರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !