ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023 ಮರೆಯುವ ಮುನ್ನ | ವನ್ಯಜೀವಿ–ಮಾನವ ಸಂಘರ್ಷದಲ್ಲೇ ಕಳೆದ ವರ್ಷ..

Published 31 ಡಿಸೆಂಬರ್ 2023, 6:15 IST
Last Updated 31 ಡಿಸೆಂಬರ್ 2023, 6:15 IST
ಅಕ್ಷರ ಗಾತ್ರ

ಹಾಸನ: ಈ ವರ್ಷ ಜಿಲ್ಲೆಯಲ್ಲಿ ವನ್ಯಜೀವಿ–ಮಾನವ ಸಂಘರ್ಷ ಒಂದೆಡೆಯಾದರೆ, ಬರದ ಬವಣೆ ಮತ್ತೊಂದೆಡೆ. ಬೆಲೆ ಕುಸಿತದಿಂದ ತೆಂಗು ಬೆಳೆಗಾರರು ಕಂಗೆಟ್ಟಿದ್ದರೆ, ಅಂಬಾರಿ ಹೊತ್ತಿದ ಆನೆ ಅರ್ಜುನನನ್ನು ಕಳೆದುಕೊಂಡ ಘಟನೆಯೂ ನಡೆಯಿತು.

ಜಿಲ್ಲೆಯಲ್ಲಿ ಈ ವರ್ಷ ಅತಿ ಹೆಚ್ಚು ವನ್ಯಜೀವಿ–ಮಾನವ ಸಂಘರ್ಷದ ಘಟನೆಗಳು ನಡೆದವು. ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು ಎನ್ನುವ ಒತ್ತಾಯದ ನಡುವೆಯೂ ಆನೆಗಳ ಹಾವಳಿ ಹೆಚ್ಚಾಗಿತ್ತು. ಆನೆಗಳ ದಾಳಿಯಿಂದ ಐದು ಜನರು ಮೃತಪಟ್ಟಿದ್ದರೆ, ಚಿರತೆ, ಕಾಡುಹಂದಿಗಳ ಹಾವಳಿಯೂ ವಿಪರೀತವಾಗಿತ್ತು.

ಆಗಸ್ಟ್‌ 18 ರಂದು ಕಾಡಾನೆ ದಾಳಿಯಿಂದ ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದ ಕವಿತಾ ಎಂಬುವವರು ಮೃತಪಟ್ಟಿದ್ದರು. ಇದನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರ ಮೇಲೆ ಅರಣ್ಯ ಇಲಾಖೆಯಿಂದ ಪ್ರಕರಣ ದಾಖಲಿಸಲಾಗಿತ್ತು.

ಆಗಸ್ಟ್ 31ರಂದು ಗಾಯಗೊಂಡಿದ್ದ ಕಾಡಾನೆ ಭೀಮನನ್ನು ಸೆರೆ ಹಿಡಿದು ಚಿಕಿತ್ಸೆ ನೀಡಲು ಕಾರ್ಯಾಚರಣೆ ನಡೆಸಲಾಗಿತ್ತು. ಆ ವೇಳೆ ಭೀಮನ ದಾಳಿಯಿಂದ ಅರಣ್ಯ ಇಲಾಖೆ ಶಾರ್ಪ್‌ ಶೂಟರ್‌ ವೆಂಕಟೇಶ್‌ ಮೃತಪಟ್ಟಿದ್ದರು. ಸರ್ಕಾರದಿಂದ ₹15 ಲಕ್ಷದ ಜೊತೆಗೆ ₹10 ಲಕ್ಷ ಹೆಚ್ಚುವರಿ ಪರಿಹಾರವನ್ನು ವಿತರಿಸಲಾಯಿತು. ಈ ಘಟನೆಯಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಪ್ರಕರಣವೂ ದಾಖಲಾಗಿತ್ತು.

ಅಕ್ಟೋಬರ್ 27ರಂದು ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿಯ ಗಜೇಂದ್ರಪುರದ ಸಮೀಪ ಪಶ್ಚಿಮ ಬಂಗಾಳದ ಗಾರೆ ಕೆಲಸದ ಕಾರ್ಮಿಕ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದರು.

ಡಿಸೆಂಬರ್‌ 4 ರಂದು ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಸರಾ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ ಮೃತಪಟ್ಟಿತ್ತು. ಕಾಡಾನೆಯ ದಾಳಿಯಿಂದ ಅರ್ಜುನ ಸಾವನ್ನಪ್ಪಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಡಿಸೆಂಬರ್ 5 ರಂದು ಸಕಲೇಶಪುರ ತಾಲ್ಲೂಕಿನ ದಬ್ಬಳಿಕಟ್ಟೆ ಅರಣ್ಯದ ನೆಡುತೋಪಿನಲ್ಲಿ ಜನರ ಆಕ್ರೋಶದ ಮಧ್ಯೆಯೇ ಅರ್ಜುನನ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಡಿಸೆಂಬರ್ 18 ರಂದು ಹೊಳೆನರಸೀಪುರ ತಾಲ್ಲೂಕಿನ ಹಾರಗೌಡನಹಳ್ಳಿಯಲ್ಲಿ ಕಾಡು ಹಂದಿ ದಾಳಿಯಿಂದ ರೈತ ಸಣ್ಣರಾಜಣ್ಣ ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ರೈತನ ರಕ್ಷಣೆಗೆ ಬಂದ ಐವರ ಮೇಲೆ ಹಂದಿ ದಾಳಿ ನಡೆಸಿ ಗಾಯಗೊಳಿಸಿತ್ತು. ಅದೇ ದಿನ ಬೇಲೂರು ತಾಲ್ಲೂಕಿನಲ್ಲಿ ಮಹಿಳೆಯೊಬ್ಬರ ಮೇಲೆ ಕಾಡು ಹಂದಿ ದಾಳಿ ನಡೆಸಿ, ಗಾಯಗೊಳಿಸಿತ್ತು.

ಚಿರತೆ ಹಾವಳಿ: ಜಿಲ್ಲೆಯ ಹಲವೆಡೆ ಚಿರತೆ ದಾಳಿಯ ಪ್ರಕರಣಗಳು ವರದಿಯಾದವು. ಆದರೆ, ಯಾವುದೇ ಸಾವು ಸಂಭವಿಸಿಲ್ಲ. ಸಾಕು ನಾಯಿ, ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿತ್ತು.

ಸಕಲೇಶಪುರ ತಾಲ್ಲೂಕಿನ ಮಾವಿನಹಳ್ಳಿಯಲ್ಲಿ 10 ಜಾನುವಾರುಗಳ ಮೇಲೆ ಚಿರತೆ ದಾಳಿ ನಡೆಸಿತ್ತು. ಈಗಲೂ ಚಿರತೆ ಸೆರೆಯಾಗದೇ ಓಡಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.

ಅರಸೀಕೆರೆ ತಾಲ್ಲೂಕಿನ ಕಲ್ಲನಾಯ್ಕನಹಳ್ಳಿ ಕೆರೆ ಬಳಿ ಸಿದ್ದಪ್ಪ ಎಂಬ ವ್ಯಕ್ತಿ ಮೇಲೆ ಚಿರತೆ ದಾಳಿ ಮಾಡಿದ್ದು, ಕುಡುಗೋಲಿನಿಂದ ಚಿರತೆಗೆ ಹೊಡೆದು ಪಾರಾಗಿದ್ದರು. ಅರಕಲಗೂಡು, ಚನ್ನರಾಯಪಟ್ಟಣ, ಹೊಳೆನರಸೀಪುರ, ಬೇಲೂರು ತಾಲ್ಲೂಕುಗಳಲ್ಲೂ ನಿರಂತರವಾಗಿ ಚಿರತೆಗಳ ದಾಳಿ ಪ್ರಕರಣಗಳು ನಡೆದವು.

ಬರದ ಬವಣೆಯಲ್ಲಿ ನಲುಗಿದ ಜಿಲ್ಲೆ : 2022ರಲ್ಲಿ ಅತಿವೃಷ್ಟಿಯಿಂದ ನಲುಗಿದ್ದ ಜಿಲ್ಲೆಯಲ್ಲಿ 2023 ಬರದ ವರ್ಷವಾಗಿ ಪರಿಣಮಿಸಿತು. ಜಿಲ್ಲೆಯ ಮಲೆನಾಡು ಭಾಗವಾದ ಸಕಲೇಶಪುರ ಆಲೂರು ಬೇಲೂರು ತಾಲ್ಲೂಕುಗಳಲ್ಲೂ ಮಳೆಯ ಪ್ರಮಾಣ ಕುಸಿದಿದ್ದು ಬರದ ದವಡೆಗೆ ಸಿಲುಕಿವೆ. ಜಿಲ್ಲೆಯ 8 ತಾಲ್ಲೂಕುಗಳನ್ನೂ ಸರ್ಕಾರ ಬರಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಿದೆ. ವಾಡಿಕೆಗಿಂತ ಶೇ 30 ರಷ್ಟು ಕಡಿಮೆ ಮಳೆಯಾಗಿದ್ದು ಬಿತ್ತಿದ ಬೆಳೆಗಳು ಮೇಲೇಳದೇ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೊಂದೆಡೆ ಜಿಲ್ಲೆಯ ಜೀವನಾಡಿ ಹೇಮಾವತಿ ಜಲಾಶಯವೂ ಭರ್ತಿಯಾಗಲಿಲ್ಲ. ಹೀಗಾಗಿ ಕೃಷಿ ಕುಡಿಯುವ ನೀರಿಗೂ ಅಭಾವದ ಪರಿಸ್ಥಿತಿ ನಿರ್ಮಾಣವಾಗಿದೆ.

ದಾಖಲೆ ಬರೆದ ಹಾಸನಾಂಬೆ ಜಾತ್ರೆ: ಈ ಬಾರಿ ನಡೆದ ಹಾಸನಾಂಬೆಯ ಜಾತ್ರಾ ಮಹೋತ್ಸವ ಹೊಸದೊಂದು ದಾಖಲೆ ಬರೆಯಿತು. ದಾಖಲೆಯ ₹8.72 ಕೋಟಿ ಆದಾಯ ಸಂಗ್ರಹವಾಗಿದ್ದು ಈ ಬಾರಿ ದೇವಿಯ ದರ್ಶನಕ್ಕೆ 14.20 ಲಕ್ಷ ಜನರು ಬಂದಿದ್ದರು. ಇ–ಹುಂಡಿಯ ಮೂಲಕ ₹4.64 ಲಕ್ಷ ದೇವಾಲಯದಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಗಳಿಂದ ₹ 25077497 ಸಂಗ್ರಹವಾಗಿದ್ದು 62 ಗ್ರಾಂ ಚಿನ್ನ 161 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ. ವಿಶೇಷ ದರ್ಶನದ ₹ 1 ಸಾವಿರ ಹಾಗೂ ₹ 300 ಟಿಕೆಟ್ ಲಾಡು ಪ್ರಸಾದ ಮಾರಾಟದಿಂದ ₹61700074 ಸಂಗ್ರಹವಾಗಿದ್ದು ಕಾಣಿಕೆ ಹುಂಡಿಯ ₹2.50 ಲಕ್ಷ ಸೇರಿದಂತೆ ಒಟ್ಟು ₹872 41531 ಸಂಗ್ರಹವಾಗಿದೆ. ನವೆಂಬರ್‌ 2 ರಿಂದ ಆರಂಭವಾಗಿದ್ದ ಹಾಸನಾಂಬೆ ದರ್ಶನದ ವೇಳೆ ವಿದ್ಯುತ್ ಶಾಕ್‌ ವದಂತಿಯಿಂದ ಸಣ್ಣ ಪ್ರಮಾಣದ ಕಾಲ್ತುಳಿದ ಸಂಭವಿಸಿದ್ದು 17 ಜನರು ಗಾಯಗೊಂಡಿದ್ದರು.

ಕಾಂಗ್ರೆಸ್‌ಗೆ ನೆಲೆ ಒದಗಿಸಿದ ಚುನಾವಣೆ: ಈ ವರ್ಷದ ಪ್ರಮುಖ ವಿದ್ಯಮಾನಗಳಲ್ಲಿ ಒಂದಾದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನ ಬಲ ತುಸು ಕುಗ್ಗಿದ್ದರೆ ಕಾಂಗ್ರೆಸ್‌ಗೆ ನೆಲೆ ಸಿಕ್ಕಂತಾಯಿತು. ಇನ್ನೊಂದೆ ಬಿಜೆಪಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಜಿಲ್ಲೆಯ ಏಳು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ನಾಲ್ಕು ಬಿಜೆಪಿ ಎರಡು ಹಾಗೂ ಕಾಂಗ್ರೆಸ್ ಒಂದು ಸ್ಥಾನದಲ್ಲಿ ಜಯಗಳಿಸಿದವು. ಜೆಡಿಎಸ್‌ನಿಂದ ಹೊರಹೋಗಿ ಕಾಂಗ್ರೆಸ್‌ ಸೇರಿದ್ದ ಕೆ.ಎಂ. ಶಿವಲಿಂಗೇಗೌಡ ಮತ್ತೊಮ್ಮೆ ಅರಸೀಕೆರೆಯಿಂದ ಜಯಗಳಿಸುವ ಮೂಲಕ ಕಾಂಗ್ರೆಸ್‌ಗೆ ನೆಲೆ ಒದಗಿಸಿದರು. ಬಿಜೆಪಿ ಹಾಸನ ಕ್ಷೇತ್ರವನ್ನು ಕಳೆದುಕೊಂಡರೂ ಸಕಲೇಶಪುರ–ಆಲೂರು ಹಾಗೂ ಬೇಲೂರು ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಿತು. ಇನ್ನು ಕಳೆದ ಬಾರಿ ಆರು ಸ್ಥಾನಗಳನ್ನು ಹೊಂದಿದ್ದ ಜೆಡಿಎಸ್‌ ಎರಡು ಸ್ಥಾನಗಳನ್ನು ಕಳೆದುಕೊಂಡು ನಾಲ್ಕು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಜಿಲ್ಲೆಗೆ ಬಂದಿದ್ದರು.

ಗಾಯಗೊಂಡಿರುವ ದೀಪಕ್‌ ರಾಯ್‌ ಅವರಿಗೆ ಸಕಲೇಶಪುರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಗಾಯಗೊಂಡಿರುವ ದೀಪಕ್‌ ರಾಯ್‌ ಅವರಿಗೆ ಸಕಲೇಶಪುರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು.
ಗಾಯಗೊಂಡಿದ್ದ ದೀಪಕ್‌ ರಾಯ್‌ ಅವರಿಗೆ ಸಕಲೇಶಪುರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು
ಗಾಯಗೊಂಡಿದ್ದ ದೀಪಕ್‌ ರಾಯ್‌ ಅವರಿಗೆ ಸಕಲೇಶಪುರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT