ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಾಥಪುರ ತಂಬಾಕು ಮಾರುಕಟ್ಟೆಯಲ್ಲಿ ₹ 378.92 ಕೋಟಿ ದಾಖಲೆ ವಹಿವಾಟು

Published 24 ಫೆಬ್ರುವರಿ 2024, 6:03 IST
Last Updated 24 ಫೆಬ್ರುವರಿ 2024, 6:03 IST
ಅಕ್ಷರ ಗಾತ್ರ

ಕೊಣನೂರು: ಸಮೀಪದ ರಾಮನಾಥಪುರದ ತಂಬಾಕು ಮಂಡಳಿ ಹರಾಜು ಮಾರುಕಟ್ಟೆಯಲ್ಲಿ 2023–24 ನೇ ಸಾಲಿನ ವಹಿವಾಟು ಮುಕ್ತಾಯವಾಗಿದ್ದು, ದಾಖಲೆಯ ₹ 374.72 ಕೋಟಿ ವಹಿವಾಟು ನಡೆಸಿದೆ.

ಹರಾಜು ಮಾರುಕಟ್ಟೆಯ ಪ್ಲಾಟ್‌ಫಾರಂ ನಂ. 7 ಮತ್ತು ನಂ. 63 ರಲ್ಲಿ 2023-24 ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಯು ಇತ್ತೀಚೆಗಷ್ಟೇ ಪೂರ್ಣಗೊಂಡಿದೆ. ಪ್ರತಿ ಕೆ.ಜಿ. ತಂಬಾಕಿಗೆ ಗರಿಷ್ಠ ಬೆಲೆ ₹ 290 ಮತ್ತು ಸರಾಸರಿ ಬೆಲೆ ₹ 255 ದೊರೆತಿದ್ದು, ರಾಮನಾಥಪುರ ಮಾರುಕಟ್ಟೆಯಲ್ಲಿ ಇದುವರೆಗಿನ ದಾಖಲೆಯ ಬೆಲೆಯಾಗಿದೆ.

ಪ್ಲಾಟ್ ಫಾರಂ ನಂ. 7 ರಲ್ಲಿ 101 ದಿನ ತಂಬಾಕು ಹರಾಜು ನಡೆದಿದ್ದು,  82.95 ಲಕ್ಷ ಕೆ.ಜಿ. ತಂಬಾಕು ಮಾರಾಟವಾಗಿದೆ. ₹ 209. 80 ಕೋಟಿ ವಹಿವಾಟು ನಡೆದಿದೆ. ಪ್ರತಿ ಕೆ.ಜಿ.ಗೆ ಗರಿಷ್ಠ ₹ 290 ಹಾಗೂ ಕನಿಷ್ಠ ₹ 200 ಬೆಲೆ ದೊರೆತಿದೆ. ಸರಾಸರಿ ₹ 251.96 ಬೆಲೆ ಸಿಕ್ಕಿದ್ದು, ಒಟ್ಟು 80,129 ಬೇಲ್‌ಗಳು ಮಾರಾಟವಾಗಿವೆ.

ಪ್ಲಾಟ್ ಫಾರಂ 63 ರಲ್ಲಿ 95 ದಿನಗಳ ಕಾಲ ವಹಿವಾಟು ನಡೆದಿದ್ದು, 67.51 ಲಕ್ಷ ಕೆ.ಜಿ. ತಂಬಾಕು ಖರೀದಿಸಲಾಗಿದೆ. ₹ 169.12 ಕೋಟಿ ವಹಿವಾಟು ನಡೆದಿದೆ. ಪ್ರತಿ ಕೆ.ಜಿ. ಗೆ ತಂಬಾಕಿಗೆ ಗರಿಷ್ಠ ₹ 290, ಕನಿಷ್ಠ ₹ 200 ಹಾಗೂ ಸರಾಸರಿ ₹ 249.76 ಬೆಲೆ ಸಿಕ್ಕಿದೆ. ಒಟ್ಟು 65,728 ಬೇಲ್‌ಗಳು ಮಾರಾಟವಾಗಿವೆ.

ರಾಮನಾಥಪುರ ಮಾರುಕಟ್ಟೆಯಲ್ಲಿ 2021-22 ನೇ ಸಾಲಿನಲ್ಲಿ ಪ್ರತಿ ಕೆ.ಜಿ.ಗೆ ಅಧಿಕ ದರ ₹ 206, ಸರಾಸರಿ ಬೆಲೆ ₹ 160.79 ಸಿಕ್ಕಿತ್ತು. 2022-23 ನೇ ಸಾಲಿನಲ್ಲಿ ಪ್ರತಿ ಕೆ.ಜಿ. ತಂಬಾಕಿಗೆ ಗರಿಷ್ಠ ದರ ₹ 270, ಸರಾಸರಿ ಬೆಲೆ ₹229.75 ನಿಗದಿಯಾಗಿತ್ತು. 2023-24 ನೇ ಸಾಲಿನಲ್ಲಿ ಸರಾಸರಿ ದರ ₹ 255 ಸಿಕ್ಕಿದೆ.

ಹುಡಿಗೂ ಬಂಪರ್ ಬೆಲೆ: ತಂಬಾಕನ್ನು ಹದಮಾಡಿ ಗ್ರೇಡ್ ಮಾಡುವ ಸಂದರ್ಭದಲ್ಲಿ ಎಲೆಗಳ ತೊಟ್ಟು ಮುರಿದು, ಎಲೆಗಳು ಹರಿದು, ಹವಾಮಾನದ ವ್ಯತ್ಯಾಸದಿಂದ ದೊರೆಯುವ ತಂಬಾಕು ಹುಡಿಯನ್ನು ಕೆಲ ವರ್ಷಗಳ ಹಿಂದೆ ಅಧಿಕೃತ ಮಾರುಕಟ್ಟೆಯಲ್ಲಿ ಕೊಳ್ಳದೆ ಸ್ಥಳೀಯವಾಗಿ ವರ್ತಕರಿಗೆ ಕಡಿಮೆ ಬೆಲೆಗೆ ಮಾರಾಟಮಾಡಬೇಕಿತ್ತು.

ಎರಡು ವರ್ಷಗಳಿಂದ ಹುಡಿಯನ್ನು ಮಾರುಕಟ್ಟೆಯಲ್ಲೇ ಕೊಳ್ಳುತ್ತಿರುವುದದಿಂದ ಹುಡಿಗೂ ಸ್ಥಳೀಯ ವರ್ತಕರು ನೀಡುವ ಬೆಲೆಗಿಂತ ಹೆಚ್ಚಿನ ಬೆಲೆ ದೊರೆತಿರುವುದು ಆಶಾದಾಯಕವಾಗಿದೆ. 2023-24 ನೇ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ನಡೆದ ಹುಡಿಯ ಇ-ವಹಿವಾಟು ಸಹ ದಾಖಲೆ ನಿರ್ಮಿಸಿದೆ.

ಪ್ಲಾಟ್ ಫಾರಂ 63 ರಲ್ಲಿ 1,23,163 ಕೆ.ಜಿ. ತಂಬಾಕಿನ ಹುಡಿ ಖರೀದಿಸಲಾಗಿದ್ದು, ₹ 18.66 ಲಕ್ಷ ವಹಿವಾಟು ನಡೆದಿದೆ. ಗರಿಷ್ಠ ₹ 170, ಕನಿಷ್ಠ ₹ 100 ಹಾಗೂ ಸರಾಸರಿ ₹ 138.16 ಸಿಕ್ಕಿದೆ. ಪ್ಲಾಟ್ ಫಾರಂ 07 ರಲ್ಲಿ 2,69,876 ಕೆ.ಜಿ. ಹುಡಿ ಮಾರಾಟವಾಗಿದ್ದು, ₹ 37.72 ಲಕ್ಷ ವಹಿವಾಟು ನಡೆದಿದೆ. ಗರಿಷ್ಠ ₹ 170, ಕನಿಷ್ಠ ₹ 100 ಹಾಗೂ ಸರಾಸರಿ ₹ 139.77 ಬೆಲೆ ದೊರೆತಿದೆ.

ಕಡಿಮೆ ದರ್ಜೆಯ ಕಪ್ಪು ತರಗು, ಹಚ್ಚ ಹಸಿರು ಗ್ರೇಡ್ ತಂಬಾಕಿಗೆ ಸಾಮಾನ್ಯವಾಗಿ ಕಡಿಮೆ ಬೆಲೆ ದೊರೆಯುತ್ತಿದ್ದುದರಿಂದ ಸರಾಸರಿ ಬೆಲೆಯು ಇಳಿಕೆಯಾಗುತ್ತಿತ್ತು. ಈ ಗ್ರೇಡ್‌ನ ತಂಬಾಕಿಗೂ ₹ 240 ಕ್ಕಿಂತ ಹೆಚ್ಚಿನ ಬೆಲೆ ದೊರಕಿದ್ದು, ಸರಾಸರಿ ಬೆಲೆ ₹ 255 ತಲುಪಲು ಸಾಧ್ಯವಾಗಿದೆ.

ಪ್ರತಿ ವರ್ಷದಂತೆ ತಂಬಾಕಿಗೆ ಕಡಿಮೆ ಬೆಲೆ ದೊರೆಯಬಹುದು ಎಂದು ಎಣಿಸಿದ್ದ ಬೆಳೆಗಾರರಿಗೆ ಬರಗಾಲದ ನಡುವೆ ದೊರಕಿದ ದಾಖಲೆಯ ಬೆಲೆ ಆರ್ಥಿಕವಾಗಿ ಕೈಹಿಡಿದಿದೆ. ವರ್ಷದಿಂದ ವರ್ಷಕ್ಕೆ ತಂಬಾಕು ಉತ್ಪಾದನಾ ವೆಚ್ಚವು ಹೆಚ್ಚಾಗುತ್ತಿರುವ ಮತ್ತು ಹವಾಮಾನ ವೈಪರೀತ್ಯದಿಂದ ಉತ್ಪಾದನಾ ಪ್ರಮಾಣವು ಕಡಿತವಾಗಿ ನಷ್ಟ ಅನುಭವಿಸುತ್ತಿದ್ದ ರೈತರು, ಈ ಬಾರಿ ಅಲ್ಪ ಲಾಭ ಪಡೆದಿದ್ದಾರೆ.

ಯಾರು ಏನಂದರು?

ರೈತರ ಉತ್ತಮ ಬೆಲೆ ನಿರೀಕ್ಷೆ ಸುಳ್ಳಾಗಲಿಲ್ಲ. ತಂಬಾಕು ಮಂಡಳಿ ಪ್ರತಿ ವರ್ಷ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವತ್ತ ಗಮನ ಹರಿಸಬೇಕು‌. ಪ್ರತಿ ವರ್ಷವೂ ತಂಬಾಕು ಹುಡಿಯನ್ನು ಇ– ಹರಾಜು ಮೂಲಕವೇ ಖರೀದಿಸಬೇಕು - ಈರೇಗೌಡ ನಿಲುವಾಗಿಲು, ತಂಬಾಕು ಬೆಳೆಗಾರ

ಈ ವರ್ಷ ತಂಬಾಕಿಗೆ ಉತ್ತಮ ಬೆಲೆ ದೊರಕಿರುವುದು ಬರಗಾಲದಲ್ಲಿ ಬೆಳೆಗಾರರ ಪಾಲಿಗೆ ಸಂತಸದ ವಿಷಯ‌. ಅನಧಿಕೃತ ಬೆಳೆಗಾರರಿಗೆ ವಿಧಿಸುವ ದಂಡ ತೆಗೆದು ಅವರಿಗೆ ಅಧಿಕೃತ ಪರವಾನಗಿ ಪಡೆದ ಬೆಳೆಗಾರರನ್ನಾಗಿ ಮಾಡಬೇಕು - ಸೀಬಳ್ಳಿ ಯೋಗಣ್ಣ, ತಾಲ್ಲೂಕು ರೈತ ಸಂಘ ಘಟಕದ ಅಧ್ಯಕ್ಷ

ಕಳೆದ ವರ್ಷಕ್ಕಿಂತ ಈ ವರ್ಷ ಪ್ರತಿ ಕೆ.ಜಿ.ಗೆ ₹ 22.50 ಹೆಚ್ಚು ಸರಾಸರಿ ಬೆಲೆ ದೊರಕಿದೆ. ಹುಡಿ ತಂಬಾಕಿಗೂ ಉತ್ತಮ ಬೆಲೆ ಸಿಕ್ಕಿದ್ದರಿಂದ ಬೆಳೆಗಾರರಿಗೆ ಲಾಭ ಸಿಕ್ಕಿದೆ- ಬ್ರಿಜ್ ಭೂಷಣ್ ಪ್ಲಾಟ್‌ಫಾರಂ 53ರ ಹರಾಜು ಅಧೀಕ್ಷಕ

ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ತಂಬಾಕು ಬೇಲ್‌ಗಳು
ರಾಮನಾಥಪುರದ ತಂಬಾಕು ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟಿರುವ ತಂಬಾಕು ಬೇಲ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT