ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತೃತ್ವ ಶಕ್ತಿ ಅದ್ಭುತ ಪವಾಡ

ಮಹಿಳಾ ಸಮಾವೇಶದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ
Last Updated 17 ಅಕ್ಟೋಬರ್ 2019, 8:18 IST
ಅಕ್ಷರ ಗಾತ್ರ

ಬೇಲೂರು: ‘ಸಮಾಜದ ಸುಸ್ಥಿತಿಯನ್ನು ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬ ಮಹಿಳೆಯರ ಮೇಲಿದೆ’ ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

75ನೇ ಅಮೃತ ಹುಣ್ಣಿಮೆ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಏರ್ಪಡಿಸಿದ್ದ ರಾಜ್ಯಮಟ್ಟದ ಮಹಿಳಾ ಸಮಾವೇಶದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಕಷ್ಟಗಳು ಬಂದಾಗ ಅವನ್ನು ಸಹಿಸಿಕೊಳ್ಳಲು ಶಕ್ತಿ ಬೇಕು. ಸಹನೆಗೆ ಮಹಿಳೆ ಮತ್ತೊಂದು ಹೆಸರು. ಎಷ್ಟೇ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ಮಹಿಳೆಗಿದೆ. ಭೂ ತಾಯಿಗೆ ಮನುಷ್ಯ ಎಷ್ಟೇ ತೊಂದರೆಗಳನ್ನು ನೀಡಿದರೂ ಭೂಮಿ ನಮಗೆ ಒಳಿತನ್ನೇ ಮಾಡುತ್ತಿದೆ‘ ಎಂದರು.

’ಮಕ್ಕಳು ಸುಸಂಸ್ಕೃತರಾಗಬೇಕು ಎಂದರೆ ತಾಯಂದಿರು ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಬೇಕು. ಸಂಸ್ಕಾರದಿಂದ ಕೂಡಿದ ಮನೆ ನಂದಗೋಕುಲವಾಗುತ್ತದೆ’ ಎಂದರು.

ಸಮಾರೋಪ ಭಾಷಣ ಮಾಡಿದ ನಿವೃತ್ತ ಪ್ರಾಧ್ಯಾಪಕ ಕೃಷ್ಣೇಗೌಡ ‘ಚೈತನ್ಯ ಮತ್ತು ಆಧ್ಯಾತ್ಮಿಕತೆಗೆ ಮಹಿಳೆ ಮತ್ತು ಪುರುಷ ಎನ್ನುವ ಬೇಧ ಇಲ್ಲ. ಎಲ್ಲ ಮೊದಲ ಸಂಬಂಧ ತಾಯಿಯಿಂದ ಆರಂಭವಾಗುತ್ತದೆ. ಎಲ್ಲ ಸಂಬಂಧಗಳ ಮೂಲ ತಾಯಿ. ಮಾತೃತ್ವ ಶಕ್ತಿ ಜಗತ್ತಿನ ಅದ್ಭುತ ಪವಾಡ ಶಕ್ತಿಯಾಗಿದೆ’ ಎಂದು ನುಡಿದರು.

ಚಿತ್ರನಟಿ ಅಮೂಲ್ಯ ‘ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ. ಪ್ರತಿ ಹೆಣ್ಣು ತನ್ನ ಮಕ್ಕಳು ಮತ್ತು ಸಂಸಾರಕ್ಕಾಗಿ ಬದುಕುತ್ತಾಳೆ’ ಎಂದು ತಿಳಿಸಿದರು.

ಗಣ್ಯರಿಗೆ ಸನ್ಮಾನ: ವಿವಿಧ ಕ್ಷೇತ್ರಗಳ ಸಾಧಕರನ್ನು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು.

ಸಾಹಿತಿ ಬೇಲೂರು ಕೃಷ್ಣಮೂರ್ತಿ, ವೈದ್ಯ ಡಾ.ನರಸೇಗೌಡ, ಸಾಹಿತಿ ವೈ.ಸಿ.ಭಾನುಮತಿ, ಸಮಾಜ ಸೇವಕಿ ಚಂದ್ರಕಲಾ ಕಾಂತರಾಜ್‌, ಕಿರುತೆರೆ ನಟಿ ನಾನವಿ ಲಕ್ಷ್ಮಣ್‌, ಲೇಖಕಿ ಪಲ್ಲವಿ, ರೈತ ಮಹಿಳೆ ರೋಮನ್ ತಬಸುಮ್‌, ಕ್ರೀಡಾಪಟು ಆಶಾ ಮರೂರ್‌, ಶೈಕ್ಷಣಿಕ ಚಿಂತಕಿ ಎವ್ಜಿನ್‌ ಡಿಸೋಜಾ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ರೇವಣ್ಣ ಮಹಿಳಾ ಸಮಾವೇಶ ಉದ್ಘಾಟಿಸಿದರು. ಹಾಸನ ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕ ಕೆ.ಎಸ್‌.ಲಿಂಗೇಶ್‌, ಸುರುಭಿ, ಕೀರ್ತನಾ, ನಾಗಮ್ಮ, ರತ್ನಾ, ಶ್ರೀದೇವಿ, ಪುಟ್ಟಮ್ಮ, ಜಯಲಕ್ಷ್ಮಿ, ಭಾರತಿ, ಎಂ.ಎ.ನಾಗರಾಜ್‌, ವೈ.ಟಿ.ದಾಮೋದರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT