ನನಸಾಗಲಿದೆ ವಿಮಾನ ನಿಲ್ದಾಣ ಕನಸು

7
ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ

ನನಸಾಗಲಿದೆ ವಿಮಾನ ನಿಲ್ದಾಣ ಕನಸು

Published:
Updated:
ಎಚ್‌.ಡಿ.ರೇವಣ್ಣ

ಹಾಸನ: ‘24 ತಾಸು ಕೆಲಸಗಾರ ನಾನು. ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ಗುರಿ. ನನ್ನ ವೇಗಕ್ಕೆ ಬರಲಾಗದ ಅಧಿಕಾರಿಗಳು ಬೇರೆ ಕಡೆಗೆ ಹೋಗಬಹುದು..’

‘ಪ್ರಜಾವಾಣಿ’ ಸಂದರ್ಶನದಲ್ಲಿ ಲೋಕೋಪಯೋಗಿ ಸಚಿವ, ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಅವರು ಅಧಿಕಾರಿಗಳಿಗೆ ನೀಡಿದ ಎಚ್ಚರಿಕೆ ಮಾತಿದು.

ಕಾಂಗ್ರೆಸ್‌ನ ಬಿ.ಪಿ.ಮಂಜೇಗೌಡ ವಿರುದ್ಧ ಗೆಲ್ಲುವ ಮೂಲಕ ಐದು ಬಾರಿ ಗೆದ್ದ ಸಾಧನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಕಾಡುತ್ತಿರುವ ಸಮಸ್ಯೆಗಳು, ಜನರಿಗೆ ಲಭ್ಯವಾಗುವ ಬಗೆ ಸೇರಿದಂತೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

* ಜಿಲ್ಲೆಯಲ್ಲಿ ಹಲವು ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಅವುಗಳ ಕತೆ ಏನು?

10 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕಾಮಗಾರಿಗೆ ಚಾಲನೆ ನೀಡಲಾಗುವುದು. ನನ್ನ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ ಜಿಲ್ಲೆಯ ಜನರಿಗೆ ಒಳ್ಳೆಯ ಕೆಲಸ ಮಾಡುವೆ. ಸಾರ್ವಜನಿಕರ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು.

* ನಿಮ್ಮ ಕನಸಿನ ಯೋಜನೆಗಳು?

ಜಿಲ್ಲೆಯಲ್ಲಿ ಹೊಸದಾಗಿ ತೋಟಗಾ ರಿಕೆ ಕಾಲೇಜು, ಸೋಮನಹಳ್ಳಿ ಕಾವಲು ಬಳಿ ಆಲೂಗೆಡ್ಡೆ ಸಂಶೋಧನಾ ಕೇಂದ್ರ ತೆರೆಯಲಾಗುವುದು. ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು. ಹೊಸ ಕೋರ್ಸ್‌ಗಳು ಬರಬೇಕು.

ಕೋರ್ಸ್‌ ಮಾಡಿದರೆ ತಕ್ಷಣ ಕೆಲಸ ಸಿಗುವಂತೆ ಇರಬೇಕು. ಬಸವರಾಜ ಹೊರಟ್ಟಿ, ಕುಮಾರಸ್ವಾಮಿ ಅವರೊಂದಿಗೆ ನಡೆದ ಸಭೆಯಲ್ಲಿ 4 ಸಾವಿರ ಶಿಕ್ಷಕರು ಮತ್ತು ಪಿಯು ಕಾಲೇಜಿಗೆ 3 ಸಾವಿರ ಉಪನ್ಯಾಸಕರ ಹುದ್ದೆಗಳನ್ನು ಡಿಸೆಂಬರ್‌ ಅಂತ್ಯದೊಳಗೆ ಭರ್ತಿ ಮಾಡುವ ಕುರಿತು ಚರ್ಚಿಸಲಾಯಿತು.

* ಮಂಜೂರಾತಿ ದೊರೆತ ಕಾಮಗಾರಿಗಳು?

ಮೈಸೂರು–(ಬಿಳಿಕೆರೆ)–ಹೊಳೆ ನರಸೀಪುರ–ಹಾಸನ–ಬೇಲೂರು–ಚಿಕ್ಕಮಗಳೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಭೂ ಸಾರಿಗೆ ಇಲಾಖೆ ಮಂಜೂರಾತಿ ನೀಡಿದೆ. ಈ ರಸ್ತೆಯನ್ನು ಮೂರು ಭಾಗವಾಗಿ ವಿಂಗಡಿಸಿ ₹ 900 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು.

₹ 45 ಕೋಟಿ ರೂಪಾಯಿ ಅಂದಾಜು ವೆಚ್ಚದ ದುದ್ದ ರಸ್ತೆ, ₹ 375 ಕೋಟಿ ವೆಚ್ಚದ ಹಾಸನ-ಎಡೆಗೌಡನಹಳ್ಳಿ ಕಾಮಗಾರಿ ಶೀಘ್ರ ಪ್ರಾರಂಭವಾಗಲಿದೆ. ಹಾಸನ ನಗರ ವ್ಯಾಪ್ತಿಯ ನಾಲ್ಕು ರಸ್ತೆ ಸೇರಿದಂತೆ ಹಲವು ರಸ್ತೆ ಕಾಮಗಾರಿಗಳಿಗೆ ಶೀಘ್ರ ಟೆಂಡರ್ ಕರೆಯಲಾಗುವುದು. ದೇವೇಗೌಡರ ಜತೆ ಶೀಘ್ರದಲ್ಲೇ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಆಗಬೇಕಿರುವ ಕೆಲಸಗಳ ಕುರಿತು ಮಾಹಿತಿ ನೀಡಲಾಗುವುದು. ಅಲ್ಲದೇ ವಿಮಾನ ನಿಲ್ದಾಣ ಕಾಮಗಾರಿ ಸಹ ಕೈಗೆತ್ತಿಕೊಳ್ಳಲಾಗುವುದು.

* ವಿಮಾನ ನಿಲ್ದಾಣ ಯೋಜನೆ ಏನಾಯಿತು?

ಸಂಸದ ಎಚ್.ಡಿ. ದೇವೇಗೌಡ ಅವರ ಪ್ರಯತ್ನದ ಫಲವಾಗಿ ವಿಮಾನ ನಿಲ್ದಾಣ ಸ್ಥಾಪನೆ ಸನಿಹವಾಗಿದೆ. ಹಾಸನದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಅಗತ್ಯ ಭೂಮಿ ನೀಡಿದರೆ ನಿಲ್ದಾಣ ನಿರ್ಮಿಸುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವರು ಪತ್ರ ಬರೆದಿದ್ದಾರೆ.

ನಗರ ಹೊರವಲಯದಲ್ಲಿ 500 ಎಕರೆ ಭೂಮಿ ಈ ಕಾಮಗಾರಿಗೆ ಕಾಯ್ದಿರಿಸಲಾಗಿದೆ. ಇನ್ನು 200 ಎಕರೆ ಹೆಚ್ಚುವರಿಯಾಗಿ ಕೇಳಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಲಭ್ಯತೆಯನುಸಾರ ಭೂಮಿ ಒದಗಿಸಲಾಗುವುದು.

* ರೈಲ್ವೆ ಗೇಟ್‌ಗಳ ಬಳಿ ವಾಹನ ಸವಾರರು ಪರದಾಡುತ್ತಿದ್ದಾರೆ. ಮೇಲ್ಸೇತುವೆ ನಿರ್ಮಾಣ ಯಾವಾಗ?

ರೈಲ್ವೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂಬುದು ದಶಕದ ಬೇಡಿಕೆ. ದೇವೇಗೌಡರು ಕೇಂದ್ರ ರೈಲ್ವೆ ಸಚಿವರ ಜತೆ ಚರ್ಚಿಸಿದ್ದಾರೆ. ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಭರಿಸಬೇಕಿದೆ. ಈ ಬಗ್ಗೆ ಪರಿಶೀಲಿಸಲಾಗುವುದು.

ಬಸ್‌ ನಿಲ್ದಾಣಕ್ಕೆ ಸಾವಿರ ಬಸ್‌ಗಳು ಬಂದು ಹೋಗುತ್ತವೆ. ಸಂಚಾರ ದಟ್ಟಣೆ ನಿವಾರಣೆಗಾಗಿ ಷಟ್ಪಥ ರಸ್ತೆಗೆ ಪೂರಕವಾಗಿ ಮೇಲ್ಸೇತುವೆಯನ್ನೂ ಷಟ್ಪಥವಾಗಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

* ಪ್ರವಾಸಿ ಹೋಟೆಲ್‌ ಈಗಲಾದರೂ ಮರುಜೀವ ಪಡೆಯುವುದೇ?

ನಗರದ ಚನ್ನಪಟ್ಟಣ ಕೆರೆಯಲ್ಲಿರುವ ಪ್ರವಾಸಿ ಹೋಟೆಲ್ ಮತ್ತು ಮನರಂಜನಾ ಕೇಂದ್ರದ ಕಾಮಗಾರಿ ಮುಕ್ತಾಯಗೊಳಿಸುವ ಜವಾಬ್ದಾರಿಯನ್ನು ರಾಜ್ಯ ರಸ್ತೆ ಅಭಿವೃದ್ಧಿ ನಿಗಮಕ್ಕೆ ವಹಿಸಲಾಗಿದೆ. ಕಟ್ಟಡದ ಸುತ್ತ ಇರುವ ಕೆರೆ ಅಭಿವೃದ್ಧಿಪಡಿಸಿ ಬೋಟಿಂಗ್, ಜಲ ಸಾಹಸ ಕ್ರೀಡೆ ಚಟುವಟಿಕೆ ವ್ಯವಸ್ಥೆ ಮಾಡಲಾಗುವುದು.

ಎರಡು ಬದಿಗಳಲ್ಲಿ ಅತ್ಯಾಧುನಿಕ ಸೇತುವೆ ನಿರ್ಮಾಣ, ಪುಷ್ಪೋದ್ಯಾನ, ಅರಣ್ಯೀಕರಣಕ್ಕೆ ವ್ಯವಸ್ಥೆ ರೂಪಿಸಲಾಗುವುದು. ಹೋಟೆಲ್ ಸುತ್ತ ಮಕ್ಕಳ ರೈಲು ಸಂಚಾರ ವ್ಯವಸ್ಥೆ ಜವಾಬ್ದಾರಿಯನ್ನು ಮೆಟ್ರೋ ಸಂಸ್ಥೆಗೆ ವಹಿಸಲು ಚಿಂತಿಸಲಾಗಿದೆ.

* ಶಿರಾಡಿ ಘಾಟ್‌ ರಸ್ತೆ ಸಂಚಾರಕ್ಕೆ ಮುಕ್ತವಾಗುವುದು ಯಾವಾಗ?

ಜುಲೈ ಮೊದಲ ವಾರ ಶಿರಾಡಿ ಘಾಟ್ ರಸ್ತೆ ಸಂಚಾರಕ್ಕೆ ಮುಕ್ತ ಗೊಳಿಸಲಾಗುವುದು. ಮಳೆಯಿಂದಾಗಿ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ.  15 ದಿನಗಳಲ್ಲಿ ಎಲ್ಲ ಕೆಲಸ ಮುಗಿಸಿಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

* ಜಿಲ್ಲಾ ಮಟ್ಟದಲ್ಲೂ ಜನತಾ ದರ್ಶನ ನಡೆಸುವಿರಾ?

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಗಳೂರಿನಲ್ಲಿ ಜನತಾ ದರ್ಶನ ನಡೆಸುತ್ತಿದ್ದಾರೆ. ರಾಜ್ಯ ಸುತ್ತುವ ಜವಾಬ್ದಾರಿ ನನಗೂ ಇದೆ. ಸದ್ಯ ಜಿಲ್ಲಾ ಮಟ್ಟದಲ್ಲಿ ನಡೆಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಕೆಲ ತಿಂಗಳು ಕಳೆದ ಬಳಿಕ ಅಧಿಕಾರಿಗಳೊಂದಿಗೆ ಚರ್ಚಿಸಿ ಯಾವ ರೀತಿ ಮಾಡಬೇಕು ಎಂದು ತೀರ್ಮಾನ ಕೈಗೊಳ್ಳುತ್ತೇನೆ.

* ರೈತರ ಆತ್ಮಹತ್ಯೆ ನಿಂತಿಲ್ಲ. ಈ ಬಗ್ಗೆ ಏನು ಹೇಳುವಿರಿ?

ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. 3–4 ವರ್ಷ ಮಳೆ ಇಲ್ಲದೆ, ಬೆಳೆ ನಾಶದಿಂದ ಸಾಲ ಮಾಡಿ ಸಂಕಷ್ಟದಲ್ಲಿ ಇದ್ದಾರೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಿದೆ. ಎಂತಹ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು.

* ಜನರು ನಿಮ್ಮನ್ನು ಸಂಪರ್ಕಿಸಬೇಕೆಂದರೆ?

ಹೊಳೆನರಸೀಪುರ ಹಾಗೂ ಡಿ.ಸಿ. ಆಫೀಸ್‌ನಲ್ಲೂ ಕಚೇರಿ ತೆರೆದು ಅಧಿಕಾರಿಯೊಬ್ಬರನ್ನು ನಿಯೋಜಿಸಲಾ ಗುವುದು. ಸಚಿವನಾದ ಮೇಲೆ ರಾಜ್ಯ ಸುತ್ತಬೇಕು. ವಾರದಲ್ಲಿ ಎರಡು ಮೂರು ದಿನ ಕ್ಷೇತ್ರದಲ್ಲಿಯೇ ಇರುತ್ತೇನೆ.

* ಯುವ ಸಮೂಹಕ್ಕೆ ಉದ್ಯೋಗಾವಕಾಶ?

ಹಾಸನದಲ್ಲಿ ಕೈಗಾರಿಕೆಗಳು ಇಲ್ಲ. ಕೈಗಾರಿಕೆಗೆ ಜಮೀನು ನೀಡಿದ ಕುಟುಂಬದವರಿಗೆ ಕಾನೂನು ಬದ್ಧವಾಗಿ ಉದ್ಯೋಗ ನೀಡಬೇಕು. ಈ ಸಂಬಂಧ ಕಾರ್ಖಾನೆಗಳ ಮಾಲೀಕರ ಸಭೆ ಕರೆದು ಸೂಚನೆ ನೀಡಲಾಗುವುದು.

* ಕಾಡಾನೆ ಸಮಸ್ಯೆ ಬಗೆಹರಿದಿಲ್ಲ?

ಸಕಲೇಶಪುರ ತಾಲ್ಲೂಕಿನಲ್ಲಿ ಆನೆ ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ದೇವೇಗೌಡರ ಮೂಲಕ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವ ಸಲ್ಲಿಸಿ ಅನುಷ್ಠಾನಕ್ಕೆ ಪ್ರಯತ್ನಿಸಲಾಗುವುದು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !