ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಡೂಸಾಬ್‌ ಮಕ್ಕಳ ಸಂಕಷ್ಟದ ಬದುಕು

ಕಾರ್ಮಿಕ ನಾಯಕನಿಗೆ ಕರೆದು ಟಿಕೆಟ್ ಕೊಟ್ಟಿದ್ದ ದೇವರಾಜ ಅರಸು
Last Updated 14 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಹೊಸಪೇಟೆ ವಿಧಾನಸಭಾ ಕ್ಷೇತ್ರದಿಂದ (ಈಗಿನ ವಿಜಯನಗರ) ಒಂದು ಅವಧಿಗೆ ಶಾಸಕರಾಗಿದ್ದ ಗೂಡೂಸಾಬ್‌ ಅವರ ಮಕ್ಕಳೀಗ ಸರ್ಕಾರ ಕೊಡುವ ‘ಅನ್ನಭಾಗ್ಯ’ದ ಅಕ್ಕಿಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಹೋರಾಟದ ಮೂಲಕ ಜನರಿಗೆ ಚಿರಪರಿಚಿತರಾಗಿದ್ದ ಗೂಡೂಸಾಬ್‌, ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ನಲ್ಲಿ (ಟಿ.ಎಸ್‌.ಪಿ.) ಮಜ್ದೂರ್‌ ಸಂಘದ ನಾಯಕರಾಗಿದ್ದರು. ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಟ ನಡೆಸಿದ್ದರು. 1978ರ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆದ್ದು ಶಾಸಕರಾದರೂ ಅಪ್ಪ ಕಟ್ಟಿಸಿದ್ದ 10X30 ಚದರ ಅಡಿ ವಿಸ್ತೀರ್ಣದ ಮನೆಯಲ್ಲೇ ಇದ್ದರು; ಕೊನೆಗೆ ಅಲ್ಲೇ ಜೀವ ತ್ಯಜಿಸಿದರು.

ಗೂಡೂಸಾಬ್‌ ಅವರಿಗೆ ಒಂಬತ್ತು ಜನ ಮಕ್ಕಳು. ಅವರ ನಾಲ್ವರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಐವರು ಗಂಡು ಮಕ್ಕಳ ಪೈಕಿ ಒಬ್ಬ ಮಗ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಈಗಲೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆದರೆ, ಅವರ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಉತ್ತಮವಾಗಿಲ್ಲ.

ಟಿ.ಎಸ್‌.ಪಿ. ಕಂಪನಿ ಮುಚ್ಚಿರುವುದರಿಂದ ಹಿರಿಯ ಮಗ ಕೆ. ಅಮೀರ್‌ ಬಾಷಾ ಕೆಲಸ ಕಳೆದುಕೊಂಡಿದ್ದಾರೆ. ಅವರಿಗೆ ತಿಂಗಳಿಗೆ ಸಾವಿರ ರೂಪಾಯಿ ಪಿಂಚಣಿ ಬರುತ್ತದೆ. ಇನ್ನೊಬ್ಬ ಮಗ ನಿಯಾಜುದ್ದೀನ್‌ ಅಪಘಾತದಲ್ಲಿ ಕಾಲು ಕಳೆದುಕೊಂಡು ಮನೆಯಲ್ಲಿದ್ದಾರೆ. ರಶೀದ್‌ ಅವರು ಪೇಂಟಿಂಗ್‌ ಮಾಡುತ್ತಿದ್ದರೆ, ಇಫ್ತಿಕಾರ್‌ ಆಟೊ ಓಡಿಸುತ್ತಿದ್ದಾರೆ.

ಅಪಘಾತದಲ್ಲಿ ನಿಯಾಜುದ್ದೀನ್‌ ಗಾಯಗೊಂಡಿದ್ದಾಗ ಅವರ ಚಿಕಿತ್ಸೆಗೆ, ಇರುವ ಒಂದು ಮನೆಯನ್ನೂ ಅಡ ಇಟ್ಟಿದ್ದರು. ಆ ಸಾಲ ತೀರಿಸಲಾಗದೇ ಸ್ವಂತ ಮನೆಯಲ್ಲೇ ಬಾಡಿಗೆಗೆ ಇದ್ದಾರೆ. ಆದರೆ, ಕುಟುಂಬದ ಯಾರಿಗೂ ತಂದೆಯ ಮೇಲೆ ಕಿಂಚಿತ್ತೂ ಬೇಸರವಿಲ್ಲ. ಬದಲಾಗಿ ತಮ್ಮ ತಂದೆ ಶುದ್ಧಹಸ್ತರಾಗಿ ರಾಜಕೀಯ ನಡೆಸಿದರು ಎಂಬ ಹೆಮ್ಮೆ ಇದೆ. ಅದನ್ನವರು ಖುಷಿಯಿಂದ ಹೇಳಿಕೊಳ್ಳುತ್ತಾರೆ ಕೂಡ.

‘ನಮ್ಮ ತಂದೆ ಬಹಳ ಸರಳ ಜೀವಿಯಾಗಿದ್ದರು. ಇದ್ದುದ್ದರಲ್ಲಿಯೇ ಸಂತೋಷದಿಂದ ಜೀವನ ನಡೆಸಬೇಕು ಎಂದು ಹೇಳುತ್ತಿದ್ದರು. ಕೊನೆಯವರೆಗೆ ಹಾಗೆಯೇ ಬದುಕು ನಡೆಸಿದರು’ ಎಂದು ಅಮೀರ್‌ ಬಾಷಾ ಹೆಮ್ಮೆಯಿಂದ ಹೇಳಿದರು.

ಗೂಡೂಸಾಬ್‌ ಅವರ ಸರಳತೆಯನ್ನು ನೆನಪಿಸಿಕೊಂಡ ಅವರ ಒಡನಾಡಿ ವೈ. ಯಮುನೇಶ್‌,  ‘ಆಗ ಅನೇಕ ಜನ ಸಿರಿವಂತರು ಕಾಂಗ್ರೆಸ್‌ ಟಿಕೆಟ್‌ಗೆ ಲಾಬಿ ನಡೆಸುತ್ತಿದ್ದರು. ಆದರೆ, ಡಿ. ದೇವರಾಜ ಅರಸು ಅವರು ಗೂಡೂಸಾಬ್‌ ಅವರನ್ನು ಕರೆದು ಪಕ್ಷದ ಟಿಕೆಟ್‌ ಕೊಟ್ಟಿದ್ದರು. ಆ ಚುನಾವಣೆಯಲ್ಲಿ ಗೆದ್ದ ಅವರು, ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಸಕರಾಗಿ ಕೆಲಸ ಮಾಡಿದರು. ಆದರೆ, ತಮ್ಮ ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಇಂತಹ ಸರಳ ವ್ಯಕ್ತಿತ್ವದ ರಾಜಕಾರಣಿಗಳು ಬಹಳ ಅಪರೂಪ’ ಎನ್ನುತ್ತಾರೆ.

(ಗೂಡೂಸಾಬ್ ಅವರ ಮಕ್ಕಳಾದ ನಿಯಾಜುದ್ದೀನ್‌ (ಎಡದಿಂದ ಮೊದಲನೆಯವರು) ಇಫ್ತಿಕಾರ್ ಹಾಗೂ ಅಮೀರ್ ಬಾಷಾ –ಪ್ರಜಾವಾಣಿ ಚಿತ್ರ)

ನಗರದ ನೂರು ಹಾಸಿಗೆಯ ಸರ್ಕಾರಿ ಆಸ್ಪತ್ರೆ, ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ, ಚಪ್ಪರದಹಳ್ಳಿಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಹಾಗೂ ಅಂದು ಕ್ಷೇತ್ರದ ವ್ಯಾಪ್ತಿಗೆ ಸೇರಿದ್ದ ದೇವಲಾಪುರ, ಮೆಟ್ರಿಯಲ್ಲಿ ನೀರಾವರಿ ಯೋಜನೆ ಜಾರಿಗೊಳಿಸಿದ ಅವರು, ಯಾವುದೇ ಕಳಂಕ, ಸ್ವಜನಪಾಕ್ಷವಿಲ್ಲದೇ ಕೆಲಸ ನಿರ್ವಹಿಸಿದ್ದರು ಎಂದು ಸ್ಮರಿಸುತ್ತಾರೆ ಅವರು.

‘ಅವರು ಸದಾ ನೆನಪಿನಲ್ಲಿ ಉಳಿಯುವ ವ್ಯಕ್ತಿ. ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ಕಾಂಗ್ರೆಸ್‌ ಪಕ್ಷ ಟಿಕೆಟ್‌ ಕೊಡುತ್ತದೆ ಎಂದು ಅವರು ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಆದರೆ,  ಅವರ ಒಳ್ಳೆಯತನವನ್ನು ಗಮನಿಸಿದ್ದ ಅರಸು ಟಿಕೆಟ್‌ ಕೊಟ್ಟಿದ್ದರು. ಎಲ್ಲ ವರ್ಗದವರೂ ಅವರಿಗೆ ಮತ ಹಾಕಿ ಗೆಲ್ಲಿಸಿದ್ದರು’ ಎಂದು ಹಿಂದಿನ ಚುನಾವಣೆಗಳ ದಿನಗಳ ನೆನಪಿಗೆ ಜಾರಿದರು.

‘ಇಂದಿನ ರಾಜಕಾರಣಿಗಳಲ್ಲಿ ಗೂಡೂಸಾಬ್‌ ಅವರ ಒಂದಂಶವೂ ಕಾಣಲು ಸಿಗದು. ಇಂದು ಒಂದು ಸಲ ಗ್ರಾಮ ಪಂಚಾಯಿತಿ ಸದಸ್ಯರಾದರೆ ಕೋಟಿಗಟ್ಟಲೇ ಹಣ ಗಳಿಸಿ, ಐಷಾರಾಮಿ ಜೀವನ ನಡೆಸುತ್ತಾರೆ. ಆದರೆ, ಇವರು ಸ್ವಂತಕ್ಕಾಗಿ ಕನಿಷ್ಠ ಒಂದು ಮನೆಯನ್ನೂ ಕಟ್ಟಿಸಿಕೊಳ್ಳಲಿಲ್ಲ. ಕೊನೆವರೆಗೂ, ಅಪ್ಪ ಕಟ್ಟಿಸಿದ ಪುಟ್ಟ ಮನೆಯಲ್ಲೇ ಬದುಕಿದರು’ ಎಂದು ಹೇಳಿದರು.

‘ಅವರ ಕುಟುಂಬದವರ ಪರಿಸ್ಥಿತಿ ಬಹಳ ಶೋಚನೀಯವಾಗಿದೆ. ಸರ್ಕಾರ, ಸಂಘ ಸಂಸ್ಥೆಗಳು ಮುಂದೆ ಬಂದು ಸಹಾಯ ಹಸ್ತ ಚಾಚಬೇಕು. ಅವರನ್ನು ಸಂಕಷ್ಟದಿಂದ ಪಾರು ಮಾಡಬೇಕು’ ಎಂದೂ ಮನವಿ ಮಾಡಿದರು.

**

ಗೂಡೂಸಾಬ್ ಅಪ್ಪಟ್ಟ ಜಾತ್ಯತೀತ ವ್ಯಕ್ತಿ. ಅವರಂಥ ರಾಜಕಾರಣಿಯನ್ನು ನಾನು ಜೀವನದಲ್ಲಿ ನೋಡಿಲ್ಲ.

ವೈ.ಯಮುನೇಶ್‌, ಗೂಡೂಸಾಬ್‌ ಒಡನಾಡಿ

**

ಶಾಸಕರಾಗಿ ನನ್ನ ತಂದೆ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕೆಲಸ ಮಾಡಿದರು. ಅದೇ ನಮ್ಮ ಕುಟುಂಬದವರಿಗೆ ಹೆಮ್ಮೆಯ ವಿಷಯ.

-ಅಮೀರ್‌ ಬಾಷಾ, ಗೂಡೂಸಾಬ್‌ ಹಿರಿಯ ಮಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT