ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷವಿಡೀ ಸಂಚರಿಸುವ ಕನ್ನಡ ‘ತೇರು’

ಬಸ್‌ ಚಾಲಕ ಹಾಗೂ ನಿರ್ವಾಹಕನ ಕನ್ನಡ ಪ್ರೀತಿ; ಪ್ರಯಾಣಿಕರಿಗೂ ಅಚ್ಚುಮೆಚ್ಚು
Last Updated 4 ನವೆಂಬರ್ 2019, 11:47 IST
ಅಕ್ಷರ ಗಾತ್ರ

ಕೊಣನೂರು (ಹಾಸನ): ಹಾಸನ, ಮೈಸೂರು ಜಿಲ್ಲೆಯಲ್ಲಿ ನಿತ್ಯ ಸಂಚರಿಸುವ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಜನರಲ್ಲಿ ಕನ್ನಡ ಪ್ರೇಮ ಜಾಗೃತಿಗೊಳಿಸುತ್ತಿದೆ.

ರಾಮನಾಥಪುರ ಘಟಕದ ಬಸ್ ಕೆ.ಎ.13 ಎಫ್ 2164 ನೋಂದಣಿ ಸಂಖ್ಯೆಯ ಬಸ್ ಕನ್ನಡದ ಮಾಹಿತಿ ಕಣಜವಾಗಿದ್ದು, ನವೆಂಬರ್ 1ರಂದುಮೈತುಂಬ ಕನ್ನಡ ಧ್ವಜವನ್ನು ಹೊದ್ದು ಅರಿಸಿನ ಹಾಗೂ ಕುಂಕುಮ ಬಣ್ಣಗಳಿಂದ ಕಂಗೊಳಿಸುತ್ತಾ ಸಾಗುವ ಮೂಲಕ ಕನ್ನಡ ಪ್ರೇಮಿಗಳ ಮನಸೂರೆಗೊಂಡಿತು.

ಚಾಲಕ ಬಾಬು ಮತ್ತು ನಿರ್ವಾಹಕ ನಟನಾಯ್ಕ ಅವರ ಪರಿಶ್ರಮದಿಂದ ಕನ್ನಡದ ಎನ್‌ಸೈಕ್ಲೋಪಿಡಿಯಾದಂತೆ ಸಜ್ಜುಗೊಂಡಿರುವ ಬಸ್‌ ರಾಮನಾಥಪುರದಿಂದ ಹೊರಟು ಪಿರಿಯಾಪಟ್ಟಣ, ಬೆಟ್ಟದಪುರ, ಹಳ್ಳಿಮೈಸೂರು, ಹೊಳೆನರಸೀಪುರ, ಹಾಸನ, ಮೈಸೂರು ರಾಮನಾಥಪುರ ಮಾರ್ಗದಲ್ಲಿ ಚಲಿಸಿ ಕನ್ನಡಿಗರನ್ನು ರೋಮಾಂಚನಗೊಳಿಸಿತು.

ಮಾಹಿತಿಯ ಕಣಜ: ಬಸ್‌ನ ಎಲ್ಲೆಡೆ ಕನ್ನಡದ ಪ್ರಸಿದ್ಧ ಘೋಷವಾಕ್ಯಗಳು, ಕನ್ನಡನಾಡು ನುಡಿಗಾಗಿ ದುಡಿದ ಕವಿಗಳು, ಮಹನೀಯರು, ನಾಡಿನ ವೀರವನಿತೆಯರು, ಜ್ಞಾನಪೀಠ ಪ್ರಶಸ್ತಿ ವಿಜೇತರ, ಸಮಾಜ ಸುಧಾರಕರ, ರಾಜ್ಯದ ಪ್ರಸಿದ್ಧ ಸ್ಥಳಗಳ, ಪ್ರಸಿದ್ಧ ಗ್ರಂಥಗಳ ಮತ್ತು ಕನ್ನಡದ ಮೊದಲುಗಳ ಚಿತ್ರಗಳನ್ನು ಬಸ್‌ನ ಒಳಗೆ ಹೊರಗೆ ಅಂಟಿಸಲಾಗಿದೆ.

ದೇಶದ ರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಮುಖ್ಯಮಂತ್ರಿಗಳ ಚಿತ್ರಗಳನ್ನು ಕಾಲಾನುಕ್ರಮವಾಗಿ ಬಿಂಬಿಸಿದ್ದು, ಕವಿಗಳ ಉದ್ಘೋಷಗಳು, ರಾಜ್ಯವನ್ನಾಳಿದ ರಾಜಮನೆತನಗಳ ಹೆಸರುಗಳು 84 ಕನ್ನಡಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರು ಮತ್ತು ಜರುಗಿದ ಸ್ಥಳಗಳ ಕುರಿತಾದ ಚಿತ್ರ ಮತ್ತು ಅಕ್ಷರರೂಪದ ಮಾಹಿತಿಯನ್ನು ನಿಡುವ ಚಿತ್ರಗಳನ್ನು ಪ್ರತಿ ಕಿಟಕಿಯ ಮೇಲೆ ಪ್ರದರ್ಶಿಸಲಾಗಿದೆ.

ಜಿಲ್ಲಾದರ್ಶನ: ಹಾಸನ ಜಿಲ್ಲೆಯಲ್ಲಿ ಪ್ರಸಿದ್ದಿ ಪಡೆದಿರುವ ರುದ್ರಪಟ್ಟಣದ ಸಪ್ತಸ್ವರ ಮಂದಿರ, ರಾಮನಾಥಪುರದ ಲಕ್ಷ್ಮಣೇಶ್ವರ, ಪ್ರಸನ್ನ ಸುಬ್ರಮಣ್ಯ, ಪಟ್ಟಾಭಿರಾಮ, ರಾಮೇಶ್ವರ, ಬೇಲೂರು ಹಳೆಬೀಡು ದೇವಾಲಯ, ಗೊರೂರು ಅಣೆಕಟ್ಟೆ, ಕಟ್ಟೇಪುರ ಕೃಷ್ಣರಾಜ ಅಣೆಕಟ್ಟುಗಳ ಚಿತ್ರಗಳನ್ನೂ ಪ್ರದರ್ಶಿಸಲಾಗಿದೆ.

ಪ್ರಯಾಣಿಕರಿಗೆ ನೀರು ಮತ್ತು ಪತ್ರಿಕೆ ಸೇವೆ: ತಮ್ಮ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಶುದ್ಧ ಕುಡಿಯುವ ನೀರೊದಗಿಸುವ ಉದೇಶದಿಂದ ಬಾಬು ಮತ್ತು ನಟನಾಯ್ಕ ಬಸ್ಸಿನಲ್ಲಿ ಶುದ್ಧ ನೀರನ್ನು ಇಟ್ಟಿರುತ್ತಾರೆ. ಅಲ್ಲದೇ, ಕನ್ನಡ ದಿನಪತ್ರಿಕೆಯೊಂದನ್ನು ಬಸ್ಸಿನಲ್ಲಿಡುವ ಮೂಲಕ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಯಲೂ ಕಾರಣಕರ್ತರಾಗಿದ್ದಾರೆ. ಜೊತೆಗೆ ಪ್ರಯಾಣಿಕರಿಗೆ ಮನರಂಜನೆ ಒದಗಿಸುವ ನಿಟ್ಟಿನಲ್ಲಿ ಕನ್ನಡದ ಗೀತೆಗಳನ್ನೂ ಹಾಕುತ್ತಾರೆ.

ಪರಿಸರಪ್ರೇಮ: ಭಾಷಾಪ್ರೇಮ ದೊಂದಿಗೆ ಪರಿಸರ ಪ್ರಜ್ಞೆಯನ್ನು ಹುಟ್ಟುಹಾಕುವ ದೃಷ್ಟಿಯಿಂದ ಕನ್ನಡ ರಾಜ್ಯೋತ್ಸವದಂದು ತಮ್ಮ ಬಸ್‌ ಸಂಚರಿಸದ ಮಾರ್ಗದ ಅಲ್ಲಲ್ಲಿ ಜನರಿಗೆ 150ಕ್ಕೂ ಹೆಚ್ಚು ಗಿಡಗಳನ್ನು ಉಚಿತವಾಗಿ ವಿತರಿಸಿದರು. ಅಲ್ಲದೇ, ಅವುಗಳನ್ನು ಬಟ್ಟೆ ಬ್ಯಾಗಿನಲ್ಲಿಟ್ಟು ಕೊಡುವ ಮೂಲಕ ಪರಿಸರ ಜಾಗೃತಿಯನ್ನು ಮೂಡಿಸಿದ್ದೂ ಪ್ರಶಂಸೆಗೆ ಪಾತ್ರವಾಯಿತು.

’ವರ್ಷಪೂರ್ತಿ ಹೀಗೇ ಇರುತ್ತದೆ. ಆದರೆ, ಬಸ್‌ನ ಹೊರಗೆ ಇರುವ ಅಲಂಕಾರವನ್ನು ಮಾತ್ರ ತೆಗೆಯುತ್ತೇವೆ.ನಮ್ಮ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿರುವುದು ಸಂತಸ ತಂದಿದೆ. ನಾವು ಹುಟ್ಟಿದ ಹಾಗೂ ಬದಕು ಕೊಟ್ಟಿರುವ ಕನ್ನಡಕ್ಕಾಗಿ ಒಂದಷ್ಟು ಸೇವೆ ಮಾಡುವುದು ಹೆಮ್ಮೆಯ ವಿಷಯವಾಗಿದೆ. ಸಂಸ್ಥೆಯ ನೌಕರರೂ ನಮ್ಮ ಕನ್ನಡಸೇವೆಗೆ ನೀಡುತ್ತಿರುವ ಸಹಕಾರವನ್ನು ಮರೆಯಲಾಗದು‘ ಎಂದು ನೆನೆಯುತ್ತಾರೆ ಚಾಲಕ ಬಾಬು ಮತ್ತು ನಿರ್ವಾಹಕ ನಟನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT