ಶನಿವಾರ, ಜನವರಿ 23, 2021
19 °C

ಕೃಷಿ ಕಾಯ್ದೆ ವಿರೋಧಿಸಿ ಕಾಂಗ್ರೆಸ್‌ನಿಂದ ಎತ್ತಿನಗಾಡಿ, ಟ್ರ್ಯಾಕ್ಟರ್‌ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಬೆಂಬಲಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಹಾಗೂ ಮುಖಂಡರು ಮಂಗಳವಾರ ನಗರದಲ್ಲಿ ರಸ್ತೆತಡೆ ನಡೆಸಿ ಪ್ರತಿಭಟಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಎತ್ತಿನಗಾಡಿ, ಟ್ರ‍್ಯಾಕ್ಟರ್‌ ಮೂಲಕ ಮೆರವಣಿಗೆ ಹೊರಟ ಕಾರ್ಯಕರ್ತರು ಬಿ.ಎಂ ರಸ್ತೆ ಮಾರ್ಗವಾಗಿ ಎನ್‌.ಆರ್‌ ವೃತ್ತ, ಸುಭಾಷ್ ಚೌಕ, ಪಿಕ್ಚರ್‌ ಪ್ಯಾಲೆಸ್‌ ಚಿತ್ರಮಂದಿರ ಹಾದು ಎನ್‌.ಆರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರ್ಧ ತಾಸಿಗೂ ಹೆಚ್ಚುಕಾಲ ರಸ್ತೆತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಎತ್ತಿನಗಾಡಿ ಮತ್ತು ಟ್ರ‍್ಯಾಕ್ಟರ್‌ ಗಳೊಂದಿಗೆ ಕಾರ್ಯಕರ್ತರು ದಿಢೀರ್‌ ರಸ್ತೆಗೆ ಇಳಿದಿದ್ದರಿಂದ ಸಂಚಾರಕ್ಕೆ ದಟ್ಟಣೆ ಉಂಟಾಯಿತು. ಅರ್ಧ ತಾಸಿಗೂ ಹೆಚ್ಚು ಎನ್‌.ಆರ್‌ ವೃತ್ತದಲ್ಲಿ ರಸ್ತೆತಡೆ ನಡೆಸಿದ್ದರಿಂದ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಅನುಭವಿಸಬೇಕಾಯಿತು.

ಕೆಪಿಸಿಸಿ ಸದಸ್ಯ ಎಚ್‌.ಕೆ. ಮಹೇಶ್‌ ಮಾತನಾಡಿ, ಕೃಷಿ ಕಾಯ್ದೆ ವಿರೋಧಿಸಿ 61 ದಿನಗಳಿಂದ ದೆಹಲಿ ಗಡಿ ಭಾಗದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅನ್ನದಾತರ ಸಮಸ್ಯೆ ಕೇಳುವ ಸೌಜನ್ಯ ತೋರಿಸಿಲ್ಲ. ಕೇವಲ ಸಚಿವರು, ಅಧಿಕಾರಿಗಳಿಂದ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತಿದ್ದಾರೆ.

ಏಳು ಬಾರಿ ಸಂಧಾನ ವಿಫಲವಾಗಿದೆ. ಎಪಿಎಂಸಿ ರದ್ದುಗೊಳಿಸಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಬಂಡವಾಳಶಾಹಿಗಳಿಗೆ ಒಪ್ಪಿಸಬೇಕು ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ. ಆದರೆ ಇದಕ್ಕೆ ದೇಶದ ಅನ್ನದಾತರು ಯಾವ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ತಿಂಗಳ ಮನ್ ಕಿ ಬಾತ್‍ನಲ್ಲಿ ಕಿಸಾನ್ ಹೆಸರಿನಲ್ಲಿ ಗೌರವದ ಮಾತುಗಳನ್ನಾಡುವ ಪ್ರಧಾನಿ ಮೋದಿಕೇವಲ ಭಾಷಣದಿಂದಲೇ ದೇಶವನ್ನು ಹಾಳುಗೆಡವಿದ್ದಾರೆ. ಇನ್ನಾದರೂ ಕೃಷಿಕರಿಗೆ ಅನುಕೂಲಕರ ಯೋಜನೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು

ಪಂಜಾಬ್ ಮತ್ತು ಹರಿಯಾಣ ರೈತರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಸರ್ಕಾರ ಲಾಠಿ ಪ್ರಯೋಗ ನಡೆಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕಟಕಟೆಗೆ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ದೆಹಲಿಯ ರಾಮಲಿಲಾ ಮೈದಾನದಲ್ಲಿ ಅಣ್ಣ ಹಜಾರೆಯವರಿಗೆ ಪ್ರತಿಭಟನೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು ಎಂದರು.

ಕ್ರಿಕೆಟಿಗ ಸೌರವ್ ಗಂಗೂಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಕೊಳ್ಳಲಿ ಎಂದು ಪ್ರಾರ್ಥಿಸುವ ನರೇಂದ್ರ ಮೋದಿ ಮುಷ್ಕರದಲ್ಲಿ ಪಾಲ್ಗೊಂಡು ಅಸುನೀಗಿದ ರೈತರ ಮೇಲೆ ಕರುಣೆ ಇಲ್ಲ. ಕಾಯ್ದೆಯನ್ನು ಹಿಂಪಡೆಯಲೂ ಆಗುತ್ತಿಲ್ಲ. ಮಾರ್ಪಾಡು ಮಾಡಲು ಒಪ್ಪುತ್ತಿಲ್ಲ ಎಂದು ಟೀಕಿಸಿದರು.

ಕಾಂಗ್ರೆಸ್ ಮುಖಂಡರಾದ ರಂಗಸ್ವಾಮಿ, ದೀಪಕ್, ಗಾಯತ್ರಿ ಶಾಂತೇಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ತಾರಾ ಚಂದನ್‌, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರೀಫ್, ಗ್ರಾಮಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಾಸರಕೊಪ್ಪಲು ರಘು, ಪುಟ್ಟರಾಜು, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ರಂಜಿತ್ ಗೊರೂರು, ರಂಗಸ್ವಾಮಿ ಸಿಂಗಟಗೆರೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.