ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಖನನಕ್ಕೆ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಗ್ರಹ

ಬಸ್ತಿಹಳ್ಳಿಯ ಜೈನಬಸದಿ ಬಳಿ ಜಿನ ಮೂರ್ತಿಗಳ ಪತ್ತೆ
Last Updated 26 ಜೂನ್ 2019, 17:29 IST
ಅಕ್ಷರ ಗಾತ್ರ

ಹಳೇಬೀಡು: ‘ಬಸ್ತಿಹಳ್ಳಿಯ ಜೈನ ಬಸದಿ ಸುತ್ತಮುತ್ತ ಜಿನಮೂರ್ತಿಯ ವಿಗ್ರಹಗಳು ಭೂಮಿಯಲ್ಲಿ ಅಡಗಿವೆ. ಈ ಸ್ಥಳದಲ್ಲಿ ನಡೆದಾಡುವುದಕ್ಕೂ ಭಯವಾಗುತ್ತದೆ. ಕೇಂದ್ರ ಪುರಾತತ್ವ ಇಲಾಖೆ ಶೀಘ್ರದಲ್ಲೇ ಉತ್ಖನನ ನಡೆಸಬೇಕು’ ಎಂದು ಶ್ರವಣಬೆಳಗೂಳ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಗ್ರಹಿಸಿದರು.

ಇಲ್ಲಿಗೆ ಸಮೀಪದ ಬಸ್ತಿಹಳ್ಳಿಯ ಜಿನ ಮಂದಿರದ ಸುತ್ತಲೂ ಆವರಣಗೋಡೆ ನಿರ್ಮಿಸುವ ಸಂದರ್ಭದಲ್ಲಿ ದೊರಕಿರುವ ಬಸದಿಗಳ ಅವಶೇಷಗಳನ್ನು ಬುಧವಾರ ಸಂಜೆ ವೀಕ್ಷಣೆ ಮಾಡಿದ ನಂತರ ಮಾತನಾಡಿದ ಸ್ವಾಮೀಜಿ, ‘ಹಳೇಬೀಡು ಹಾಗೂ ಬಸ್ತಿಹಳ್ಳಿ ಹೊಯ್ಸಳರ ಕಾಲದಲ್ಲಿ ದ್ವಾರಸಮುದ್ರವಾಗಿತ್ತು. ಇಲ್ಲಿ 700ಕ್ಕೂ ಹೆಚ್ಚು ಬಸದಿಗಳಿವೆ ಎಂಬ ಐತಿಹ್ಯವಿದೆ. ಪುರಾತತ್ವ ಇಲಾಖೆ ಸೂಕ್ಷ್ಮವಾಗಿ ಗಮನಿಸಿದರೆ, ಅವಶೇಷ ದೊರಕುತ್ತದೆ. ಇದರಿಂದ ಜೈನ ಸ್ಮಾರಕ ಉಳಿಸುವುದರೊಂದಿಗೆ, ಇತಿಹಾಸದ ಸಂಶೋಧನೆಗೆ ಅನುಕೂಲವಾಗುತ್ತದೆ’ ಎಂದರು.

‘ಮಂಡ್ಯ ಜಿಲ್ಲೆಯ ಆರತಿಪುರ ಉತ್ಖನನದ ನಂತರ ಪ್ರಸಿದ್ಧ ಜೈನ ಕ್ಷೇತ್ರವಾಗಿದೆ. ಆರತಿಪುರ ಕ್ಷೇತ್ರಕ್ಕೆ ಜಿನ ಭಕ್ತರು ಮಾತ್ರವಲ್ಲದೆ, ಸಂಶೋಧಕರು ಬಂದು ಹೋಗುತ್ತಾರೆ. ಹಳೇಬೀಡು ಪ್ರವಾಸಿ ಹಾಗೂ ಯಾತ್ರಾ ಸ್ಥಳವಾಗಿರುವುದರಿಂದ, ಪ್ರವಾಸಿಗರು ಹೆಚ್ಚು ಕಾಲ ಕಳೆಯಲು ಅನುಕೂಲವಾಗುತ್ತದೆ. ಜತೆಗೆ ಹಳೇಬೀಡಿನ ಪ್ರವಾಸೋದ್ಯಮ ಅಭಿವೃದ್ಧಿ ಹೊಂದಲಿದೆ’ ಎಂದು ಸ್ವಾಮೀಜಿ ನುಡಿದರು.

‘ಸ್ಮಾರಕದ ಸುತ್ತಮುತ್ತ ಯಾವುದೇ ಕೆಲಸ ಕೈಗೊಂಡರೂ; ಯಂತ್ರಗಳನ್ನು ಬಳಸುವಂತಿಲ್ಲ. ಆದರೆ ಕಾಂಪೌಂಡ್‌ ಕೆಲಸ ನಿರ್ವಹಿಸುವವರು ಜೆಸಿಬಿ ಬಳಸಿದ್ದರಿಂದ ಭೂಮಿಯಲ್ಲಿ ಉದುಗಿದ್ದ ಜಿನ ಮೂರ್ತಿಗಳು ಹಾಗೂ ಬಸದಿ ಜಗುಲಿಯ ಅವಶೇಷಗಳಿಗೆ ಹಾನಿಯಾಗಿದೆ’ ಎಂದು ಸ್ಥಳೀಯರು ಸ್ವಾಮೀಜಿ ಬಳಿ ದೂರಿದರು.

ಹಾಸನ ಜಿಲ್ಲಾ ಸಾಂಸ್ಕೃತಿಕ ರಾಯಭಾರಿ ಮದನ್‌ಗೌಡ, ಸಹಾಯಕ ಪುರಾತತ್ವ ಅಧೀಕ್ಷಕ ಶ್ರೀಗುರು, ಸ್ಮಾರಕ ಸಂರಕ್ಷಣಾಧಿಕಾರಿ ಕಾಮತ್‌, ಮಾಡೆಲರ್‌ ಸತೀಶ್‌ ಕುಮಾರ್‌, ಜೈನ ಸಮಾಜದ ಮುಖಂಡರಾದ ಎ.ಬಿ.ಕಾಂತರಾಜು, ವಸಂತ ಕಾಂತರಾಜು, ಭಾರತಿ ಅತುಲ್‌ ಜೈನ್‌, ಜೈನರಗುತ್ತಿ ಅಧ್ಯಕ್ಷ ಹೊಂಗೇರಿ ದೇವೇಂದ್ರಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT