ಶನಿವಾರ, ಡಿಸೆಂಬರ್ 14, 2019
21 °C
ಅರಕಲಗೂಡು ತಾಲ್ಲೂಕು ಗರೀಘಟ್ಟದ ಬಳಿ ಘಟನೆ

ಕುಸಿದ ಸಂಪರ್ಕ ಸೇತುವೆ ಭತ್ತದ ಗದ್ದೆ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಕಲಗೂಡು: ತಾಲ್ಲೂಕಿನ ಗರೀಘಟ್ಟ ಗ್ರಾಮದ ಬಳಿ ಹೇಮಾವತಿ ಬಲ ಮೇಲ್ದಂಡೆ ನಾಲೆ 9ನೇ ಕಿ.ಮೀ ಬಳಿ ನಿರ್ಮಿಸಿದ್ದ ಸಂಪರ್ಕ ಸೇತುವೆ (ಅಕ್ವಡೆಕ್) ಮಂಗಳವಾರ ಕುಸಿದು ಬಿದ್ದ ಪರಿಣಾಮ ಕೆಳಭಾಗದ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಭತ್ತದ ಬೆಳೆ ಹಾನಿಯಾಗಿದೆ.

ಗರೀಘಟ್ಟ ಮತ್ತು ನೈಗೆರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ನಾಲೆಗೆ ಈ ಕಿರು ಸೇತುವೆಯನ್ನು ನಿರ್ಮಿಸಲಾಗಿತ್ತು. ಸೇತುವೆಯ ಮೇಲೆ ನಾಲೆಯ ನೀರು ಹರಿಯುತ್ತಿದ್ದು (ಅಕ್ವಡೆಕ್) ತಳಭಾಗದಲ್ಲಿ ಜನ, ವಾಹನ ಸಂಚಾರ ನಡೆಯುತ್ತಿತ್ತು). ಬೆಳಿಗ್ಗೆ 7.30 ರ ಸಮಯದಲ್ಲಿ ನೀರಿನ ಒತ್ತಡಕ್ಕೆ ಸೇತುವೆ ಕುಸಿದ್ದು ಬಿದ್ದ ಕಾರಣ ಭಾರಿ ಪ್ರಮಾಣದ ನೀರು ಹರಿದು ಕಟಾವಿಗೆ ಬಂದಿದ್ದ ಸುಮಾರು ಎಂಟು ಎಕರೆಯಷ್ಟು ಭತ್ತದ ಗದ್ದೆಗೆ ಹಾಗೂ ತೋಟಗಳಲ್ಲಿ ನಿಂತಿದೆ.

40 ವರ್ಷ ಹಳೆಯದಾದ ಈ ಸೇತುವೆ ಶಿಥಿಲಗೊಂಡಿತ್ತು. ಅಲ್ಲದೇ ನೀರು ಸಹ ಸೋರಿಕೆಯಾಗುತ್ತಿತ್ತು. ಸೇತುವೆಯನ್ನು ದುರಸ್ತಿ ಮಾಡುವಂತೆ ಹಲವು ಬಾರಿ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸೇತುವೆ ಕುಸಿದು ಬಿದ್ದ ಕಾರಣ ನೈಗೆರೆ– ಗರೀಘಟ್ಟ ಗ್ರಾಮಗಳ ನಡುವೆ ಸಂಪರ್ಕ ಕಡಿತಗೊಂಡಿದೆ. ಜಮೀನುಗಳಿಗೆ ನೀರು ನುಗ್ಗಿರುವ ಪರಿಣಾಮ ಗ್ರಾಮದ ಚಲುವೇಗೌಡ, ಲಕ್ಷ್ಮೇಗೌಡ, ತಿಮ್ಮೇಗೌಡ, ರಂಗಸ್ವಾಮಿ, ಸ್ವಾಮಿಗೌಡ, ಅಣ್ಣೇಗೌಡ ಹಾಗೂ ಇನ್ನೂ ಹಲವು ರೈತರ ಭತ್ತದ ಗದ್ದೆಗಳು ನೀರಿನಲ್ಲಿ ಮುಳುಗಿ ಬೆಳೆ ಸಂಪೂರ್ಣ ಹಾಳಾಗಿದೆ.

‘ಕಷ್ಟಪಟ್ಟು ಬೆಳೆಸಿದ್ದ ಬೆಳೆ ಕಟಾವಿಗೆ ಬಂದಿತ್ತು. ವಾರ– ಹದಿನೈದು ದಿನದಲ್ಲಿ ಕಟಾವು ಮಾಡಬೇಕಿತ್ತು. ನೀರು ನುಗ್ಗಿ ಸಂಪೂರ್ಣ ಬೆಳೆ ಹಾಳಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ಸ್ಥಿತಿ ನಮ್ಮದಾಗಿದೆ’ ಎಂದು ಹಾನಿಗೊಳಗಾದ ರೈತರು ತಮ್ಮ ಅಳಲು ತೋಡಿಕೊಂಡರು.

ನಷ್ಟಕ್ಕೊಳಗಾಗಿರುವ ರೈತರಿಗೆ ಸರ್ಕಾರ ಹಾಗೂ ನೀರಾವರಿ ಇಲಾಖೆ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ಕಾವೇರಿ ನೀರಾವರಿ ನಿಗಮದ ಎಇಇ ಸುಧಾಕರ್, ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)